ಮದ್ದೂರು: ಮದ್ದೂರಿನ ಗ್ರಾಮದೇವತೆ, ಶಕ್ತಿ ದೇವತೆ ಮದ್ದೂರಮ್ಮನ ಜಾತ್ರಾ ಮಹೋತ್ಸವವು ಮಂಗಳವಾರದಿಂದ ಸಡಗರದಿಂದ ಆರಂಭವಾಗಿದ್ದು, ಬುಧವಾರ ಕೊಂಡ ಮಹೋತ್ಸವ ವೈಭವದಿಂದ ನಡೆಯಿತು. 17ರಂದು ಪ್ರಸಿದ್ಧ ಸಿಡಿ ಮಹೋತ್ಸವಕ್ಕೆ ಸಿದ್ಧತೆ ನಡೆದಿದೆ.
ಜಾತ್ರೆಯ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಭಾರಿ ದನಗಳ ಜಾತ್ರೆಯು ಒಂದು ವಾರ ನಡೆದಿತ್ತು. ಹಬ್ಬಕ್ಕೆ ತಾಲ್ಲೂಕು, ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.
ಕ್ಷೇತ್ರದ ಹಿನ್ನೆಲೆ: ಅಡಿಕೆ ವ್ಯಾಪಾರಿಯಾಗಿದ್ದ ಭೈರಶೆಟ್ಟಿ ಎಂಬಾತ ಮಡಿಕೇರಿ ಕಡೆಯಿಂದ ತನ್ನ ಎತ್ತಿನ ಗಾಡಿಯಲ್ಲಿ ಅಡಿಕೆ ತರುತ್ತಿದ್ದಾಗ ಆ ಗಾಡಿಯಲ್ಲಿ ದೇವತೆ ಕುಳಿತು ಬರುತ್ತಿದ್ದಾಗ ಮದ್ದೂರು ಬಳಿ ಈಗಿರುವ ಮೈಸೂರು - ಬೆಂಗಳೂರು ಹೆದ್ದಾರಿ ಬಳಿಯಿರುವ ದೇವಸ್ಥಾನದ ಜಾಗದಲ್ಲಿ ಹೆಚ್ಚಿನ ಹಿಪ್ಪೆ ಮರಗಳು ಇದ್ದು, ತಂಪಾಗಿದ್ದರಿಂದ ದೇವತೆ ಅಲ್ಲಿಯೇ ಕಲ್ಲಿನ ರೂಪದಲ್ಲಿ ಮೂಡಿಬಂದು ನೆಲೆಸಿದಳು, ಆನಂತರ ಭೈರಶೆಟ್ಟಿಯೇ ಕೆಲಕಾಲ ದೇವಿಗೆ ಪೂಜೆ ಸಲ್ಲಿಸುತ್ತಿದರು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.
15ರಂದು ಮದ್ದೂರಮ್ಮ ಮಠಮನೆ ದೇವಸ್ಥಾನದಲ್ಲಿ ಹೋಮ, ಹವನ ಕಾರ್ಯ, ಮಧ್ಯಾಹ್ನ ಎಲ್ಲಮ್ಮ ದೇವಿಗೆ ಚಂದ್ರಭಂಡಾರ ಸೇವೆ ಸಲ್ಲಿಸಲಾಯಿತು. ಸಂಜೆ 4ಕ್ಕೆ ಗ್ರಾಮಸ್ಥರಿಂದ ಕೊಂಡ ಬಂಡಿ ಉತ್ಸವ, ಪ್ರಮುಖ ಬೀದಿಗಳಲ್ಲಿ ಸಂಜೆ 6.30ಕ್ಕೆ ಶ್ರೀ ಮದ್ದೂರಮ್ಮನವರ ಮೂಲ ದೇಗುಲದಲ್ಲಿ ಅಭಿಷೇಕ, ಹೋಮ, ಹವನ ಹಾಗೂ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ರಾತ್ರಿ 11.30ಕ್ಕೆ ಕೊಂಡಕ್ಕೆ ಅಗ್ನಿ ಸ್ಪರ್ಶ ಪೂಜೆ ಮಾಡಲಾಯಿತು.
16ರಂದು ಮುಂಜಾನೆ ಶುಭ ಶ್ರವಣ ನಕ್ಷತ್ರ ಬ್ರಾಹ್ಮಿ ಮಹೂರ್ತದಲ್ಲಿ ಬೆಳಿಗ್ಗೆ 6ಕ್ಕೆ ಮದ್ದೂರಮ್ಮನವರ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು. ಸಂಜೆ 4.30ಕ್ಕೆ ಹೆಣ್ಣು ಮಕ್ಕಳಿಂದ ಮದ್ದೂರಮ್ಮನವಿರಗೆ ಹಾಲರವಿ ಸೇವೆ ನಡೆಯಿತು.
17ರಂದು ಸಂಜೆ 4ರ ನಂತರ ಗಂಟೆಗೆ ಮಠ ಮನೆಯಿಂದ ಭಕ್ತರಿಂದ ಬಾಯಿ ಬೀಗ ಸಮೇತ ಸಿಡಿರಣ್ಣನವರ ಸಿಡಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಲಿದೆ.
18ರಂದು ಸಂಜೆ 4ಕ್ಕೆ ಮದ್ದೂರಮ್ಮನವರ ಓಕುಳಿ ಸೇವೆ, ಸಂಜೆ 6.30ಕ್ಕೆ ಉಯ್ಯಾಲೆ ಉತ್ಸವ, ರಾತ್ರಿ 9ಕ್ಕೆ ಊರಿನ ಪ್ರಮುಖ ಬೀದಿಗಳಲ್ಲಿ ಮುತ್ತಿನ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಸಾವಿರಾರು ಭಕ್ತರು ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆಯಲಿದ್ದಾರೆ.
ಕೊಂಡೋತ್ಸವ: ಭಕ್ತರು ಭಾಗಿ
ಮದ್ದೂರು: ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಮುಂಜಾನೆ ಮದ್ದೂರಿನ ಗ್ರಾಮದೇವತೆ ಮದ್ದೂರಮ್ಮ ಕೊಂಡೋತ್ಸವವು ಅದ್ದೂರಿಯಾಗಿ ನೆರವೇರಿತು.
ಕೊಂಡೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಬಂಡಿ ಉತ್ಸವ ನಡೆಸಿ ಕೊಂಡಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಬುಧವಾರ ಮುಂಜಾನೆ ಶ್ರವಣ ನಕ್ಷತ್ರ, ಬ್ರಾಹ್ಮೀ ಮುಹೂರ್ತದಲ್ಲಿ ಕೊಂಡೋತ್ಸವ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶಿವಣ್ಣ ಕೊಂಡೋತ್ಸವ ನಡೆಸಿಕೊಟ್ಟರು.
ಕೊಂಡೋತ್ಸವ ನೋಡಲು ಪಟ್ಟಣದ, ಜಿಲ್ಲೆಯ ಹಾಗೂ ರಾಜ್ಯದ ಹಲವು ಕಡೆಗಳಿಂದ ಸಾವಿರಾರು ಜನತೆ ಆಗಮಿಸಿದ್ದರು. ಸಂಜೆ 4.30ರ ನಂತರ ಮಹಿಳೆಯರಿಂದ ಹಾಲರವಿ ಸೇವೆ ನಡೆಯಿತು.
ದೇವಸ್ಥಾನದ ಗರ್ಭಗುಡಿ, ದೇವಿ ಯವರ ವಿಗ್ರಹ ಹಾಗೂ ದೇವಸ್ಥಾನಕ್ಕೆ ವಿಶೇಷ ಹೂವಿನ ಅಲಂಕಾರ ಹಾಗೂ ಆವರಣದಲ್ಲಿ ವಿದ್ಯುತ್ ದೀಪಾಲಂಕಾರ ಮಾಡ ಲಾಗಿತ್ತು. ಬೆಳಿಗ್ಗೆ ದೇವಿಯರ ವಿಗ್ರಹಕ್ಕೆ ಅಭಿಷೇಕ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಮದ್ದೂರಮ್ಮನವರ ಜಾತ್ರಾ ಮಹೋತ್ಸವಕ್ಕೆ ತನ್ನದೇ ಆದ ವೈಶಿಷ್ಯತೆ ಇದ್ದು ನಂಬಿದ ಭಕ್ತರ ಇಷ್ಟಾರ್ಥಗಳನ್ನು ದೇವಿಯು ಈಡೇರಿಸುತ್ತಾರೆ ಎಂಬ ನಂಬಿಕೆ ಭಕ್ತರು ಅನಾದಿಕಾಲದಿಂದಲೂ ಇದೆ.ಕೋಕಿಲಾ ಅರುಣ್, ಪುರಸಭಾಧ್ಯಕ್ಷೆ ಮದ್ದೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.