
ಶ್ರೀರಂಗಪಟ್ಟಣ: ‘ಪಶ್ಚಿಮ ಘಟ್ಟದ ಪ್ರಕೃತಿ ಸಂಪತ್ತು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ಅಪ್ರತಿಮ ಪರಿಸರ ಪ್ರೇಮಿ’ ಎಂದು ಮೈಸೂರು ಮಹಾರಾಜ ಪಿಯು ಕಾಲೇಜಿನ ಉಪನ್ಯಾಸಕ ಸಂತೋಷ್ ಬಣ್ಣಿಸಿದರು.
ಪಟ್ಟಣದಲ್ಲಿ ಸಂಜಯ ಪ್ರಕಾಶನ ಶನಿವಾರ ಸಂಜೆ ಏರ್ಪಡಿಸಿದ್ದ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗಾಡ್ಗೀಳ್ ಅವರು ಪರಿಸರ ವಿಜ್ಞಾನ, ಗಣಿತ ಮತ್ತು ವನ್ಯಜೀವಿಗಳ ವರ್ತನೆ ಕುರಿತು ಅಳವಾದ ಅಧ್ಯಯನ ನಡೆಸಿದ್ದರು. ಪರಿಸರ ವಿಜ್ಞಾನ ಕೇಂದ್ರ ಸ್ಥಾಪಿಸಿದರು. ಜೀವ ವೈವಿಧ್ಯತೆಯ ಅಗತ್ಯವನ್ನು ಒತ್ತಿ ಹೇಳಿದರು. ಹವಾಮಾನ ವೈಪರೀತ್ಯ, ಅವೈಜ್ಞಾನಿಕ ಅಭಿವೃದ್ಧಿ ಚಟುವಟಿಕೆಗಳಿಂದ ಪಶ್ಚಿಮ ಘಟ್ಟದ ಮೇಲಾಗುತ್ತಿರುವ ಪರಿಣಾಮಗಳನ್ನು ಬಗ್ಗೆ ಜಾಗೃತಿ ಮೂಡಿಸಿದರು. ಪ್ರಕೃತಿ ಸಂಪತ್ತು ನಾಶವಾದರೆ ಭವಿಷ್ಯದಲ್ಲಿ ಎದುರಾಗಬಹುದಾದ ತೊಂದರೆಗಳ ಬಗ್ಗೆ ಎಚ್ಚರಿಸಿದ್ದರು. ವನ್ಯ ಸಂಪತ್ತು ಲೂಟಿ ಮಾಡಿದ ವೀರಪ್ಪನ್ ಕುಕೃತ್ಯಗಳಿಗೆ ತಮಿಳುನಾಡು ಸರ್ಕಾರವೇ ಪರೋಕ್ಷವಾಗಿ ಪ್ರೋತ್ಸಾಹ ನೀಡಿತ್ತು ಎಂಬ ವರದಿ ಆಘಾತಕಾರಿಯಾದುದು’ ಎಂದು ಸಂತೋಷ್ ಕಳವಳ ವ್ಯಕ್ತಪಡಿಸಿದರು.
ಹಿರಿಯ ವೈದ್ಯ ಹಾಗೂ ಗಾಂಧಿವಾದಿ ಡಾ.ಬಿ. ಸುಜಯಕುಮಾರ್ ಮಾತನಾಡಿ, ‘ಮಾಧವ ಗಾಡ್ಗೀಳ್ ಅವರಿಗೆ ಪರಿಸರದ ಬಗ್ಗೆ ಇದ್ದ ಕಾಳಜಿ ಅಪಾರವಾದುದು. ಪಶ್ಚಿಮ ಘಟ್ಟದ ಅಪರೂಪದ ಖನಿಜ ಮತ್ತು ವನ್ಯ ಸಂಪತ್ತಿನ ಮಹತ್ವವನ್ನು ಹೊರ ಜಗತ್ತಿಗೆ ತಿಳಿಸಿದ್ದರು. ಅರಣ್ಯ ನಾಶ ಮತ್ತು ಜೈವಿಕ ಸರಪಳಿಯನ್ನು ತುಂಡು ಮಾಡುವುದರಿಂದ ಉಂಟಾಗಬಹುದಾದ ಅಸಮತೋಲನ ಕುರಿತು ಅವರಲ್ಲಿ ಆತಂಕವಿತ್ತು. ಪಶ್ಚಿಮಘಟ್ಟಗಳ ರಕ್ಷಣೆಗಾಗಿ ಅವರು ನಡೆಸಿದ ಪ್ರಯತ್ನಗಳಿಗೆ ವಿಶ್ವಸಂಸ್ಥೆಯಿಂದ 2024ರಲ್ಲಿ ‘ಚಾಂಪಿಯನ್ ಆಫ್ ದಿ ಅರ್ಥ್’ ಪುರಸ್ಕಾರ ಸೇರಿದಂತೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಹತ್ತಾರು ಪ್ರಶಸ್ತಿಗಳು ಸಂದಿವೆ’ ಎಂದರು.
ಪ್ರೊ. ಸಿ.ಮಹದೇವ, ಸಂಜಯ ಪ್ರಕಾಶನದ ಎಸ್.ಎಂ. ಶಿವಕುಮಾರ್, ನಿವೃತ್ತ ಉಪ ಪ್ರಾಂಶುಪಾಲ ರಾಜು, ವಕೀಲರಾದ ಸಿ.ಎಸ್. ವೆಂಕಟೇಶ್. ಎಸ್.ಆರ್. ಸಿದ್ದೇಶ್. ಟಿ. ಬಾಲರಾಜು, ಕ್ಯಾತನಹಳ್ಳಿ ಚಂದ್ರಣ್ಣ, ಸಿ. ಕೃಷ್ಣೇಗೌಡ, ಕೆ. ಶೆಟ್ಟಹಳ್ಳಿ ಅಪ್ಪಾಜಿ, ರಂಗನಾಥ್, ಕೆ.ಎಸ್. ಜಯಶಂಕರ್, ಚಿಕ್ಕತಮ್ಮೇಗೌಡ, ಮಂಜುನಾಥ್, ಸುರೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.