
ಮಂಡ್ಯ: ವಿಶಿಷ್ಟ ವಚನ ಬರೆಯುವ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದ ಮಡಿವಾಳ ಮಾಚಿದೇವರು, ತಮ್ಮ ಕಾಯಕದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಜನತೆಯು ಮಡಿವಾಳ ಮಾಚಿದೇವರ ಆದರ್ಶ, ಮೌಲ್ಯಗಳನ್ನು ಪಾಲಿಸಬೇಕು. ನಾವು ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದೇವೆ. ಯುವ ಪೀಳಿಗೆ ಎಚ್ಚೆತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲ್ಲಬೇಕು. ವಚನ ಸಾಹಿತ್ಯ ಓದುವ ಜನರು ಹೆಚ್ಚಬೇಕು. ಇದು ಪ್ರಸ್ತುತತೆಗೆ ಅನಿವಾರ್ಯ ಎಂದರೆ ತಪ್ಪಲ್ಲ ಎಂದು ಅಭಿಪ್ರಾಯಪಟ್ಟರು.
ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಸಂದೇಶ್ ಮಾತನಾಡಿ, ರಾಜಕೀಯವಾಗಿ ನೋಡುವುದಾದರೆ ಮೇಲ್ಮನೆಯು ಅನುಭವ ಮಂಟಪ ಆಗಬೇಕು. ಅಲ್ಲಿ ಧ್ವನಿ ಇಲ್ಲದ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗಬೇಕು, ಬಲಾಢ್ಯರ ಶಕ್ತಿ ಪ್ರದರ್ಶನದ ಕೇಂದ್ರ ಆಗಬಾರದು ಎಂದು ಸಲಹೆ ನೀಡಿದರು.
ಮಡಿವಾಳ ಸಮುದಾಯ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ಈ ಸಮುದಾಯದ ಮಕ್ಕಳು ಐಎಎಸ್, ಕೆಎಎಸ್ ನಂತಹ ದೊಡ್ಡ ಉದ್ಯೋಗ ಪಡೆಯುವ ಕನಸನ್ನು ಇಟ್ಟುಕೊಂಡು ಅಧ್ಯಯನದಲ್ಲಿ ತೊಡಗಬೇಕು. ಆ ಮೂಲಕ ಉನ್ನತ ಮಟ್ಟದ ಅಧಿಕಾರ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.
ಉಪನ್ಯಾಸಕರಾದ ಸಬ್ಬನಹಳ್ಳಿ ನಾಗರಾಜು ಮಾತನಾಡಿ, ರಾಜರ ಆಡಳಿತ ಕಾಲದಲ್ಲಿ ಸಮ ಸಮಾಜದ ನಿರ್ಮಾಣ ಮಾಡುವಲ್ಲಿ ಶರಣರ ಪಾತ್ರ ಅಪಾರವಾಗಿದೆ. 12ನೇ ಶತಮಾನದಲ್ಲಿ ಕಾಯಕವೇ ಕೈಲಾಸವೆಂಬ ಭಾವನೆಯನ್ನು ಸಮಾಜಕ್ಕೆ ಸಾರಿದ ಕಾಲಘಟ್ಟದಲ್ಲಿ ಅನುಭವ ಮಂಟಪದಲ್ಲಿ ಮಹಿಳೆಯರು ಸೇರಿದಂತೆ ಶರಣರು ವಚನ ಪಸರಿಸುವಲ್ಲಿ ನಿರತರಾಗಿದ್ದರು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಬಿ.ವಿ.ನಂದೀಶ್, ವಿವಿಧ ಮಡಿವಾಳ ಸಂಘದ ಅಧ್ಯಕ್ಷರಾದ ಡಿ.ರಮೇಶ್, ಸ್ವರ್ಣಸಂದ್ರ ರವಿ, ಬಿ.ಟಿ.ಗುರುರಾಜ್, ಮುಖಂಡರಾದ ಪದ್ಮಾವತಿ, ತಾಳಶಾಸನ ಮೋಹನ್, ಎಂ.ಕೃಷ್ಣ ಭಾಗವಹಿಸಿದ್ದರು.
[SIDEBAR/BOX]
ಮಡಿವಾಳರದ್ದು ವಿಶಿಷ್ಟ ಸೇವೆ: ಪಿ.ಎಸ್. ಚಂದ್ರಶೇಖರ್
ಶ್ರೀರಂಗಪಟ್ಟಣ: ‘ಬಟ್ಟೆ ತೊಳೆಯುವುದು, ಇಸ್ತ್ರಿ ಮಾಡುವುದರ ಜತೆಗೆ ದೇವರ ಉತ್ಸವಗಳಲ್ಲಿ ಮಡಿ ಸೇವೆ, ಪಂಜಿನ ಸೇವೆಯಂತಹ ಮಹತ್ವದ ಕಾರ್ಯ ನಿರ್ವಹಿಸುತ್ತಿರುವ ಮಡಿವಾಳ ಜನಾಂಗವನ್ನು ಗೌರವದಿಂದ ಕಾಣಬೇಕು’ ಎಂದು ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಎಸ್. ಚಂದ್ರಶೇಖರ್ ಹೇಳಿದರು.
ತಾಲ್ಲೂಕಿನ ಪಾಲಹಳ್ಳಿಯಲ್ಲಿ ವೀರ ಮಡಿವಾಳ ಮಾಚಿದೇವರ ಸಂಘ ಭಾನುವಾರ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಮಾಚಿದೇವ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು. ‘ಮಡಿವಾಳ ಜನರಿಗೆ ಸರ್ಕಾರದಿಂದ ಸಾಕಷ್ಟು ಸವಲತ್ತುಗಳು ಸಿಗುತ್ತಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು’ ಎಂದು ಸಲಹೆ ನೀಡಿದರು.
ಪ್ರಗತಿಪರ ರೈತ ‘ರೇಡಿಯೊ’ ರಮೇಶ್, ಕೆ. ಚಂದನ್, ಹರ್ಷವರ್ಧನ್‌ಗೌಡ, ವೀಣಾ ಶಂಕರ್ ಮತ್ತು ಶುಶ್ರೂಷಕಿ ರೂಪಾ ಅವರಿಗೆ ‘ಮಡಿವಾಳ ಮಾಚಿದೇವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ವೀರ ಮಡಿವಾಳ ಮಾಚಿದೇವರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮರಳಾಗಾಲ ಮಂಜುನಾಥ್, ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಪಿಎಸಿಎಸ್ ನಿರ್ದೇಶಕ ಎಂ.ಎನ್. ಶ್ರೀನಿವಾಸ್, ಮುಖಂಡರಾದ ನರಸಿಂಹ, ಕೃಷ್ಣಪ್ಪ, ಗೋವಿಂದರಾಜು, ಗಾಯತ್ರಿ, ಶಂಕರ್, ಭಾರತಿ, ರೂಪಾ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
[END BOX]
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.