
ಮಳವಳ್ಳಿ: ರಾಜ್ಯ ಸರ್ಕಾರ ಅಂಗೀಕರಿಸಿರುವ ದ್ವೇಷ ಭಾಷಣ, ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ವಿರೋಧಿಸಿ ಗುರುವಾರ ಬಿಜೆಪಿ ಮುಖಂಡ ಹಾಗೂ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರದ ದ್ವೇಷ ಭಾಷಣ ಮಸೂದೆ ಪ್ರತಿಯನ್ನು ಹರಿದು ಹಾಕಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್ ಕುಮಾರ್ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಅನುಷ್ಠಾನಕ್ಕೆ ತರುತ್ತಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ಸಂವಿಧಾನಕ್ಕೆ ವಿರುದ್ಧವಾಗಿದ್ದು ಮಸೂದೆ ಜಾರಿ ನೆಪದಲ್ಲಿ ಪತ್ರಿಕೆ, ಮಾನವ ಸೇರಿದಂತೆ ಎಲ್ಲರ ಸ್ವಾತಂತ್ರ್ಯವನ್ನು ಕಸಿಯುವ ಹುನ್ನಾರವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಯಾರು ಯಾರ ಬಗ್ಗೆ ಮಾತನಾಡುವಾಗೆ ಇಲ್ಲ ಎನ್ನುವ ರೀತಿಯಲ್ಲಿ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ’ ಎಂದು ಕಿಡಿಕಾರಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ ಮಾತನಾಡಿ, ‘ಅಧಿಕಾರಿಗಳು, ರಾಜಕಾರಣಿಗಳು ಮುಖ್ಯಮಂತ್ರಿ ಮತ್ತು ಸಂಪುಟದ ಸಚಿವರು ಸೇರಿದಂತೆ ಯಾರೇ ತಪ್ಪು ಮಾಡಿದರೂ ತಪ್ಪು ಎಂದು ಹೇಳಲಾಗದ ಪರಿಸ್ಥಿತಿಯು ಮಸೂದೆಯಲ್ಲಿದೆ. ವಿರೋಧ ಪಕ್ಷವನ್ನು ಮಟ್ಟ ಹಾಕಲು ಕಾಂಗ್ರೆಸ್ ಪಕ್ಷ ದ್ವೇಷ ರಾಜಕಾರಣ ಮಾಡಲು ಹೊರಟಿದೆ. ರಾಜ್ಯಪಾಲರು ಸದನದಲ್ಲಿ ಅಂಗೀಕಾರವಾಗಿರುವ ಮಸೂದೆಯನ್ನು ತಿರಸ್ಕರಿಸಬೇಕು’ ಎಂದು ಒತ್ತಾಯಿಸಿದರು.
ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನಾಚರಣೆ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರವಾಸಿ ಮಂದಿರದ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.
ಬಿಜೆಪಿ ಮುಖಂಡರಾದ ಮಧು ಗಂಗಾಧರ್ ಮತ್ತು ಯಮದೂರು ಸಿದ್ದರಾಜು ಮಾತನಾಡಿ, ದೇಶದ ಪ್ರಧಾನಿಯಾಗಿ, ವಿದೇಶ ಸಚಿವರಾಗಿ, ಸಂಸತ್ತಿನ ಮುಖ್ಯ ಸ್ಥಾಯಿ ಸಮಿತಿ ಅಧ್ಯಕ್ಷ , ವಿರೋಧ ಪಕ್ಷದ ನಾಯಕರಾಗಿದ್ದ ವಾಜಪೇಯಿ ಅವರನ್ನು ವಿರೋಧ ಪಕ್ಷದವರು ಸಹ ಇಷ್ಟಪಡುತ್ತಿದ್ದರು ಎನ್ನುವುದರಿಂದ ಅವರ ವ್ಯಕ್ತಿತ್ವ ತಿಳಿಯುತ್ತದೆ ಎಂದು ಬಣ್ಣಿಸಿದರು.
ಬಿಜೆಪಿ ಮುಖಂಡರಾದ ಅಪ್ಪಾಜಿಗೌಡ, ಕಪಿನಿಗೌಡ, ಕಗ್ಗಲೀಪುರ ಆನಂದ್, ಕ್ಯಾತನಹಳ್ಳಿ ಅಶೋಕ್, ಸಿದ್ದಲಿಂಗಸ್ವಾಮಿ, ಬಸವರಾಜು, ಕುಮಾರ್, ಮಹೇಂದ್ರ, ಕಾಂತರಾಜು, ಚಿಕ್ಕಣ್ಣ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.