ADVERTISEMENT

ಮಳವಳ್ಳಿ | ಮಹಿಳೆಯರು ಬಸ್ ಡೋರ್‌ ಮುರಿದಿಲ್ಲ: ಸಾರಿಗೆ ಸಂಸ್ಥೆ ಸಿಬ್ಬಂದಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2023, 13:08 IST
Last Updated 19 ಜೂನ್ 2023, 13:08 IST
   

ಮಳವಳ್ಳಿ (ಮಂಡ್ಯ ಜಿಲ್ಲೆ): ಕಳಚಿಕೊಳ್ಳುವ ಹಂತದಲ್ಲಿದ್ದ ಸಾರಿಗೆ ಸಂಸ್ಥೆ ಬಸ್‌ನ ಬಾಗಿಲನ್ನು ಚಾಲಕ, ನಿರ್ವಾಹಕ ಬದಲಾಯಿಸಿದರು. ಆದರೆ, ಬಾಗಿಲನ್ನು ಮಹಿಳೆಯರೇ ಮುರಿದು ಹಾಕಿದರು ಎಂಬ ಸುಳ್ಳು ಸುದ್ದಿ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು.

ಮಳವಳ್ಳಿ ಬಸ್‌ ನಿಲ್ದಾಣದಿಂದ ಮೈಸೂರು ಕಡೆಗೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್‌ನ ಬಾಗಿಲು ಅಲುಗಾಡುತ್ತಿತ್ತು. ಮಹಿಳೆಯರೂ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಬಸ್‌ ಹತ್ತುತ್ತಿದ್ದರು. ಬಾಗಿಲು ಕಿತ್ತು ಬರುವ ಅಪಾಯ ಅರಿತ ಚಾಲಕ, ನಿರ್ವಾಹಕ ಹಾಗೂ ಸಂಚಾರ ನಿಯಂತ್ರಕ ಡಿಪೊ ಸಿಬ್ಬಂದಿಗೆ ಕರೆ ಮಾಡಿ ಬೇರೆ ಡೋರ್‌ ತರಿಸಿದರು.

ಡೋರ್‌ ಬದಲಾಯಿಸುತ್ತಿರುವ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಕಿಡಿಗೇಡಿಗಳು ಮಹಿಳೆಯರೇ ಡೋರ್‌ ಮುರಿದು ಹಾಕಿದ್ದಾರೆ ಎಂದು ಸುಳ್ಳು ಸಂದೇಶ ಹಾಕಿದ್ದರು, ಇದರಿಂದ ಗೊಂದಲ ಸೃಷ್ಟಿಯಾಗಿತ್ತು.

ADVERTISEMENT

ಇದಕ್ಕೆ ಸ್ಪಷ್ಟನೆ ನೀಡಿದ ಡಿಪೊ ವ್ಯವಸ್ಥಾಪಕ ಶಿವಕುಮಾರ್‌ ‘ಡೋರ್‌ ಮೊದಲೇ ಕಳಚಿಕೊಳ್ಳುವ ಹಂತ ತಲುಪಿತ್ತು. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕೆ ನಿಲ್ದಾಣದಲ್ಲೇ ಡೋರ್‌ ಬದಲಾಯಿಸಿದೆವು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.