ADVERTISEMENT

ಮಂಡ್ಯ: ಜಿಲ್ಲೆಗೆ ಶೇ 77ರಷ್ಟು ಪಠ್ಯಪುಸ್ತಕ ಪೂರೈಕೆ

ಸಿದ್ದು ಆರ್.ಜಿ.ಹಳ್ಳಿ
Published 29 ಮೇ 2025, 7:17 IST
Last Updated 29 ಮೇ 2025, 7:17 IST
ಮಂಡ್ಯ ನಗರದ ಉಗ್ರಾಣದಿಂದ ವಿವಿಧ ಶಾಲೆಗಳ ಶಿಕ್ಷಕರಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು 
ಮಂಡ್ಯ ನಗರದ ಉಗ್ರಾಣದಿಂದ ವಿವಿಧ ಶಾಲೆಗಳ ಶಿಕ್ಷಕರಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು    

ಮಂಡ್ಯ: ‘ಸಕ್ಕರೆ ನಾಡು’ ಮಂಡ್ಯ ಜಿಲ್ಲೆಯಲ್ಲಿ ಮೇ 29ರಂದು 2025–26ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳಲಿದ್ದು, ಮೇ 30ರಂದು ನಡೆಯುವ ‘ಶಾಲಾ ಪ್ರಾರಂಭೋತ್ಸವ’ಕ್ಕೆ ಶಾಲಾ ಶಿಕ್ಷಣ ಇಲಾಖೆ ಸಜ್ಜಾಗಿದೆ. 

ವಿದ್ಯಾರ್ಥಿಗಳಿಗೆ ಅತ್ಯಗತ್ಯವಾಗಿ ಬೇಕಾಗಿರುವ 3133 ಶೀರ್ಷಿಕೆಗಳ ಪಠ್ಯಪುಸ್ತಕಗಳನ್ನು ತಾಲ್ಲೂಕು ಉಗ್ರಾಣಗಳಿಗೆ ದಾಸ್ತಾನು ಮಾಡಲಾಗುತ್ತಿದ್ದು, ಇದುವರೆಗೆ ಶೇ 77.67 ಪಠ್ಯಪುಸ್ತಕಗಳು ಮುದ್ರಕರಿಂದ ಪೂರೈಕೆಯಾಗಿವೆ. ಪೂರೈಕೆಯಾದ ಪಠ್ಯಪುಸ್ತಕಗಳನ್ನು ಶಾಲೆಯ ಮುಖ್ಯ ಶಿಕ್ಷಕರಿಗೆ ವಿತರಿಸುವ ಕಾರ್ಯ ಚಾಲ್ತಿಯಲ್ಲಿದೆ. 

ಮಂಡ್ಯ ಜಿಲ್ಲೆಗೆ ಈ ಬಾರಿ 12.90 ಲಕ್ಷ ಉಚಿತ ಪುಸ್ತಕಗಳು ಮತ್ತು 8.56 ಲಕ್ಷ ಮಾರಾಟ ಪುಸ್ತಕಗಳು ಸೇರಿದಂತೆ ಒಟ್ಟು 21.46 ಲಕ್ಷ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಈಗಾಗಲೇ 9.65 ಲಕ್ಷ ಉಚಿತ ಪುಸ್ತಕಗಳು ಮತ್ತು 7.02 ಲಕ್ಷ ಮಾರಾಟ ಪುಸ್ತಕಗಳು ಸೇರಿದಂತೆ ಒಟ್ಟು 16.67 ಲಕ್ಷ ಪಠ್ಯಪುಸ್ತಕಗಳು ಜಿಲ್ಲೆಗೆ ಪೂರೈಕೆಯಾಗಿವೆ. 

ADVERTISEMENT

ತಾಲ್ಲೂಕುವಾರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶೇ 74.80ರಷ್ಟು ಉಚಿತ ಪುಸ್ತಕಗಳನ್ನು ಹಂಚಿಕೆ ಮಾಡಲಾಗಿದೆ. ಶೇ 82.02 ಮಾರಾಟ ಪುಸ್ತಕಗಳು ಕೂಡ ಪೂರೈಕೆಯಾಗಿವೆ. 

30ರಿಂದ ಶಾಲಾ ದಾಖಲಾತಿ: 

ಮೇ 30ರಿಂದ ಶಾಲಾ ಪ್ರಾರಂಭೋತ್ಸವದೊಂದಿಗೆ ವಿದ್ಯಾರ್ಥಿಗಳ ಶಾಲಾ ಪ್ರವೇಶಾತಿಯೂ ಆರಂಭಗೊಳ್ಳಲಿದೆ. ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2025–26ನೇ ಸಾಲಿನ ದಾಖಲಾತಿ ಆಂದೋಲನ, ಸೇತುಬಂಧ ಹಾಗೂ ಮಿಂಚಿನ ಸಂಚಾರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕೈಗೊಳ್ಳುವ ನಿಟ್ಟಿನಲ್ಲಿ ಶಾಲಾ ಮುಖ್ಯಸ್ಥರು, ಶಿಕ್ಷಕರು ಮತ್ತು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.  

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆಲವು ಶಾಲಾ ಕಟ್ಟಡಗಳು, ಶೌಚಾಲಯಗಳು, ಅಡುಗೆ ಕೊಠಡಿಗಳು ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ ಶಿಥಿಲವಾಗಿದ್ದರೆ, ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಶಿಥಿಲಗೊಂಡ ಕೊಠಡಿಗಳಲ್ಲಿ ತರಗತಿ ನಡೆಸದಂತೆ ಶಾಲಾ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದರು. 

ಶಾಲಾ ಕೊಠಡಿಗಳಿಗೆ ಚಿಕ್ಕಪುಟ್ಟ ದುರಸ್ತಿ ಮತ್ತು ಕಾಮಗಾರಿಗಳನ್ನು ಕೈಗೊಳ್ಳುವ ಅಗತ್ಯವಿದ್ದರೆ, ಲಭ್ಯವಿರುವ ಅನುದಾನ ವ್ಯಯಿಸಿ ಅಥವಾ ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಮೇ 28ರೊಳಗೆ ಪೂರ್ಣಗೊಳಿಸಲು ಇಲಾಖೆಯಿಂದ ಸೂಚನೆ ನೀಡಲಾಗಿತ್ತು. 

ಕಲಿಕಾ ಸಾಧಕರಿಗೆ ಸ್ವಾಗತ

‘ಶಾಲಾ ಪ್ರಾರಂಭೋತ್ಸವವನ್ನು ಒಂದು ಯಾಂತ್ರಿಕ ಪ್ರಕ್ರಿಯೆ ಎಂದು ಪರಿಗಣಿಸದೆ ಅತ್ಯಂತ ಉತ್ಸಾಹದಿಂದ ಮುಖ್ಯಶಿಕ್ಷಕರು ಸಹಶಿಕ್ಷಕರು ಎಸ್‌ಡಿಎಂಸಿ ಹಾಗೂ ಪೋಷಕರು ಸೇರಿ ಶಾಲಾ ಮಕ್ಕಳನ್ನು ಕಲಿಕಾ ಸಾಧಕರನ್ನು ಸ್ವಾಗತಿಸುವ ರೀತಿಯಲ್ಲಿ ವಿಶೇಷವಾಗಿ ಬರಮಾಡಿಕೊಳ್ಳಲು ಸೂಚಿಸಲಾಗಿದೆ’ ಎಂದು ಡಿಡಿಪಿಐ ಎಚ್‌. ಶಿವರಾಮೇಗೌಡ ತಿಳಿಸಿದರು. 

ಸಮವಸ್ತ್ರ ಪೂರೈಕೆ 

ಮಂಡ್ಯ ಜಿಲ್ಲೆಯ ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿಯ ಬಾಲಕರಿಗೆ 37838 ಮತ್ತು ಬಾಲಕಿಯರಿಗೆ 37356 ಸಮವಸ್ತ್ರಗಳು ಸೇರಿದಂತೆ ಒಟ್ಟು 75194 ಸಮವಸ್ತ್ರಗಳನ್ನು ಪೂರೈಸುವಂತೆ ಡಿಡಿಪಿಐ ಕಚೇರಿಯಿಂದ ಶಾಲಾ ಶಿಕ್ಷಣ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿತ್ತು.   1ರಿಂದ 2ನೇ ತರಗತಿಯ ವಿದ್ಯಾರ್ಥಿಗಳಿಗೆ 11646 ಸಮವಸ್ತ್ರಗಳು 3ರಿಂದ 4ನೇ ತರಗತಿಯ ವಿದ್ಯಾರ್ಥಿಗಳಿಗೆ 17338 ಸಮವಸ್ತ್ರಗಳು ಪೂರೈಕೆಯಾಗಿವೆ.  5ರಿಂದ 7ನೇ ತರಗತಿಯ ಬಾಲಕರಿಗೆ 14108 ಸಮವಸ್ತ್ರಗಳು ಪೂರೈಕೆಯಾಗಿವೆ. 5ನೇ ತರಗತಿಯ ಬಾಲಕಿಯರಿಗೆ 4852 ಸಮವಸ್ತ್ರಗಳು ಜಿಲ್ಲೆಯಲ್ಲಿ ದಾಸ್ತಾನು ಆಗಿವೆ. ಪ್ರೌಢಶಾಲೆ ವಿದ್ಯಾರ್ಥಿಗಳ ಸಮವಸ್ತ್ರಗಳು ಇನ್ನೂ ಬಂದಿಲ್ಲ. ಶೀಘ್ರದಲ್ಲೇ ಬರುವ ನಿರೀಕ್ಷೆಯಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.