ಮಂಡ್ಯ: ತಾಲ್ಲೂಕಿನ ಬಿ.ಹೊಸೂರು ಕಾಲೊನಿಯಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಸ್ನಾತಕೋತ್ತರ (ಪಿ.ಜಿ.) ಕೋರ್ಸ್‌ಗಳಿಗೆ ಎರಡನೇ ವರ್ಷವೂ ಶೂನ್ಯ ಪ್ರವೇಶಾತಿಯಾಗಿದೆ.
‘ಶಿಕ್ಷಣದ ಮೂಲಕ ಮಹಿಳಾ ಸಬಲೀಕರಣ’ ಎಂಬ ದೃಷ್ಟಿಕೋನದೊಂದಿಗೆ ಹೆಣ್ಣುಮಕ್ಕಳ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮಂಡ್ಯದಲ್ಲಿ 2014ರಲ್ಲಿ ಹೊರಾವರಣ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಆರಂಭಗೊಂಡಿತು.
ಮೊದಲ ವರ್ಷವೇ 112 ವಿದ್ಯಾರ್ಥಿನಿಯರ ಪ್ರವೇಶಾತಿಯೊಂದಿಗೆ ಶುಭಾರಂಭ ಮಾಡಿದ ಅಧ್ಯಯನ ಕೇಂದ್ರ, 2017–18ರಲ್ಲಿ ಪ್ರವೇಶಾತಿ ಸಂಖ್ಯೆ 127ಕ್ಕೇರಿತು. ನಂತರ, ಹಲವಾರು ಕಾರಣಗಳಿಂದ ವರ್ಷ ಕಳೆದಂತೆ ತನ್ನ ಆಕರ್ಷಣೆಯನ್ನು ಕಳೆದುಕೊಂಡು, 2023–24ನೇ ಸಾಲಿಗೆ ಪ್ರವೇಶಾತಿ 20ಕ್ಕೆ ಕುಸಿಯಿತು.
2024–25ನೇ ಸಾಲಿನಲ್ಲಿ ಶೂನ್ಯ ಪ್ರವೇಶಾತಿ ಕಾರಣದಿಂದ ಸ್ನಾತಕೋತ್ತರ ತರಗತಿ ಬಂದ್ ಆದವು. ಈ ವರ್ಷ ಎಂ.ಕಾಂ, ಎಂ.ಎ (ಕನ್ನಡ, ಇಂಗ್ಲಿಷ್, ಮಹಿಳಾ ಅಧ್ಯಯನ), ಎಂ.ಎಸ್ಸಿ (ಗಣಿತಶಾಸ್ತ್ರ) ಕೋರ್ಸ್‌ಗಳ ಜೊತೆಗೆ ಎಂ.ಎಸ್.ಡಬ್ಲ್ಯು, ಎಂ.ಎ (ಶಿಕ್ಷಣ, ಅರ್ಥಶಾಸ್ತ್ರ) ಕೋರ್ಸ್‌ಗಳನ್ನು ಪರಿಚಯಿಸಲಾಗಿತ್ತು. ಆದರೂ, ಯಾವುದೇ ವಿದ್ಯಾರ್ಥಿನಿಯರು ಈ 8 ಪಿ.ಜಿ. ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆದಿಲ್ಲ.
ಸ್ನಾತಕೋತ್ತರ ಕೋರ್ಸ್‌ಗಳ ಜೊತೆಯಲ್ಲಿ 2021–22ನೇ ಸಾಲಿನಿಂದ ಸ್ನಾತಕ (ಪದವಿ) ಕೋರ್ಸ್‌ಗಳು ಆರಂಭಗೊಂಡವು. ಪ್ರಸ್ತುತ ಬಿ.ಎ (ಅರ್ಥಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ, ಕನ್ನಡ, ಸಮಾಜ ಕಾರ್ಯ, ಮಹಿಳಾ ಅಧ್ಯಯನ), ಬಿ.ಸಿ.ಎ (ಅನ್ವಯಿಕ ಗಣಕ), ಬಿ.ಎಸ್ಸಿ (ಗಣಿತಶಾಸ್ತ್ರ, ಗಣಕ ವಿಜ್ಞಾನ), ಬಿಕಾಂ (ವಾಣಿಜ್ಯ ಶಾಸ್ತ್ರ) ಕೋರ್ಸ್‌ಗಳು ಲಭ್ಯವಿವೆ. ಪ್ರಸ್ತುತ 150 ವಿದ್ಯಾರ್ಥಿನಿಯರು ಇಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಇದರಿಂದಲೇ ಪಿ.ಜಿ.ಸೆಂಟರ್ ಅಸ್ತಿತ್ವ ಉಳಿಸಿಕೊಂಡಿದೆ ಎನ್ನಲಾಗುತ್ತಿದೆ.
‘ಮಂಡ್ಯ ನಗರದಿಂದ 10 ಕಿ.ಮೀ. ದೂರದಲ್ಲಿರುವ ಅಧ್ಯಯನ ಕೇಂದ್ರಕ್ಕೆ ವಿದ್ಯಾರ್ಥಿನಿಯರು ಬಂದು ಹೋಗಲು ಬಸ್‌ಗಳ ತೀವ್ರ ಕೊರತೆ ಹಾಸ್ಟೆಲ್ ಮತ್ತು ಕ್ಯಾಂಟೀನ್ ಸೌಲಭ್ಯ ಇಲ್ಲದಿರುವುದು ಕಾಯಂ ಬೋಧಕರಿಲ್ಲದೆ ಅತಿಥಿ ಉಪನ್ಯಾಸಕರ ಮೇಲಿನ ಅವಲಂಬನೆ ಹಾಗೂ ಇತರ ವಿ.ವಿ.ಗಳಿಗಿಂತ ಪಿಜಿ ಕೋರ್ಸ್‌ಗಳಿಗೆ ದುಬಾರಿ ಶುಲ್ಕ. ಈ ಎಲ್ಲ ಕಾರಣಗಳಿಂದ ಪಿಜಿ ಕೋರ್ಸ್‌ಗಳು ಆಕರ್ಷಣೆಯನ್ನು ಕಳೆದುಕೊಂಡಿವೆ’ ಎನ್ನುತ್ತಾರೆ ಹಳೆಯ ವಿದ್ಯಾರ್ಥಿನಿಯರು.
‘ಸಾಂಪ್ರದಾಯಿಕ ಪಿ.ಜಿ. ಕೋರ್ಸ್‌ಗಳು ಮಂಡ್ಯ ವಿಶ್ವವಿದ್ಯಾಲಯ ಮತ್ತು ತಾಲ್ಲೂಕು ಕೇಂದ್ರಗಳಲ್ಲಿರುವ ಪ್ರಮುಖ ಪದವಿ ಕಾಲೇಜುಗಳಲ್ಲೂ ಲಭ್ಯವಿರುವ ಕಾರಣ ಪಿ.ಜಿ.ಸೆಂಟರ್‌ನತ್ತ ವಿದ್ಯಾರ್ಥಿನಿಯರು ಮುಖ ಮಾಡುತ್ತಿಲ್ಲ. ಸಾಂಪ್ರದಾಯಿಕ ಕೋರ್ಸ್‌ಗಳನ್ನು ಕಲಿತವರಿಗೆ ಉದ್ಯೋಗಾವಕಾಶ ಕ್ಷೀಣವಾಗಿದೆ. ದೂರಶಿಕ್ಷಣ ನೀಡುವ ಮುಕ್ತ ವಿವಿಗಳು ವಿದ್ಯಾರ್ಥಿನಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. ಉದ್ಯೋಗಾಧಾರಿತ ಮತ್ತು ಪ್ರಸ್ತುತ ಬೇಡಿಕೆ ಇರುವ ಹೊಸ ಕೋರ್ಸ್‌ಗಳನ್ನು ಆರಂಭಿಸಿದರೆ ಮಾತ್ರ ವಿದ್ಯಾರ್ಥಿನಿಯರನ್ನು ಆಕರ್ಷಿಸಬಹುದು’ ಎನ್ನುತ್ತಾರೆ ಪಿ.ಜಿ.ಸೆಂಟರ್‌ನ ಉಪನ್ಯಾಸಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.