ADVERTISEMENT

ವಾರ್ಷಿಕ ಹಿನ್ನೋಟ–2025 | ಮಂಡ್ಯ: ಅಳುವ ಕಡಲೊಳು ನಗೆಯ ಹಾಯಿದೋಣಿ

ಹೆಮ್ಮೆ, ಸಂಭ್ರಮದ ಸಂಗತಿ ಒಂದೆಡೆ; ದುಃಖ, ಕಣ್ಣೀರು, ಆಕ್ರೋಶ ಹಲವೆಡೆ

ಸಿದ್ದು ಆರ್.ಜಿ.ಹಳ್ಳಿ
Published 28 ಡಿಸೆಂಬರ್ 2025, 4:25 IST
Last Updated 28 ಡಿಸೆಂಬರ್ 2025, 4:25 IST
ಮದ್ದೂರು ಪಟ್ಟಣದಲ್ಲಿ ಬಿಜೆಪಿ, ಬಜರಂಗದಳ ಮತ್ತು ಹಿಂದುತ್ವಪರ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ದೃಶ್ಯ  
ಮದ್ದೂರು ಪಟ್ಟಣದಲ್ಲಿ ಬಿಜೆಪಿ, ಬಜರಂಗದಳ ಮತ್ತು ಹಿಂದುತ್ವಪರ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ದೃಶ್ಯ     

ಮಂಡ್ಯ: 2026ರ ಹೊಸ ವರ್ಷವನ್ನು ಸ್ವಾಗತಿಸಲು ಜನರು ಕುತೂಹಲ ಮತ್ತು ಕಾತರದಿಂದ ಕಾಯುತ್ತಿದ್ದಾರೆ. ನಿರೀಕ್ಷೆಗಳ ಈ ಹೊತ್ತಿನಲ್ಲಿ 2025ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಸದ್ದು ಮಾಡಿದ ಸುದ್ದಿಗಳತ್ತ ‘ಇಣುಕು ನೋಟ’ ಇಲ್ಲಿದೆ. 

ಜಿಲ್ಲೆಗೆ ಹೆಮ್ಮೆ, ಸಂಭ್ರಮ ತಂದ ಸಂಗತಿಗಳು ಒಂದು ಕಡೆಯಾದರೆ, ದುಃಖ, ಕಣ್ಣೀರು, ಆಕ್ರೋಶಕ್ಕೆ ಕಾರಣವಾದ ಅಹಿತಕರ ಘಟನೆಗಳೂ ನಡೆದಿವೆ. ಅಡಿಗರು ಬರೆದ ‘ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ’ ಎಂಬಂತೆ ನೋವಿನ ನಡುವೆಯೂ ನಲಿವನ್ನು ನೀಡಿದ 2025ನೇ ವರ್ಷದ ಮಾಸದ ನೆನಪುಗಳನ್ನು ಮೆಲುಕು ಹಾಕುವ ಪ್ರಯತ್ನ ಇಲ್ಲಿದೆ. 

ಅತ್ಯುತ್ತಮ ಜಿಲ್ಲಾ ಚುನಾವಣಾಧಿಕಾರಿ

ಚುನಾವಣಾ ಆಯೋಗವು ಜಿಲ್ಲಾಧಿಕಾರಿ ಕುಮಾರ ಅವರಿಗೆ 2024-25ನೇ ಸಾಲಿನ ಅತ್ಯುತ್ತಮ ಜಿಲ್ಲಾ ಚುನಾವಣಾಧಿಕಾರಿ ಎಂದು ಜನವರಿ 22ರಂದು ಪ್ರಶಸ್ತಿ ಪ್ರಕಟಿಸಿತ್ತು. 2024- 25ನೇ ಸಾಲಿನಲ್ಲಿ ನಡೆಸಿದ ಲೋಕಸಭಾ ಚುನಾವಣೆ, ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಜಿಲ್ಲೆಯಲ್ಲಿ ನಡೆಸಿದ ಚುನಾವಣಾ ಕೆಲಸಗಳನ್ನು ಪರಿಗಣಿಸಿ ರಾಜ್ಯ ವಿಭಾಗದಲ್ಲಿ ಪ್ರಶಸ್ತಿ ಘೋಷಣೆಯಾಗಿತ್ತು. 

ADVERTISEMENT

ವೈರಮುಡಿ ಬ್ರಹ್ಮೋತ್ಸವ 

ರಾಮಾನುಜಾಚಾರ್ಯರ ಕರ್ಮಭೂಮಿಯಾದ ಮೇಲುಕೋಟೆಯಲ್ಲಿ ಏಪ್ರಿಲ್‌ 7ರಂದು ಸಾವಿರಾರು ಭಕ್ತರ ಜಯಘೋಷಗಳ ನಡುವೆ ಚೆಲುವನಾರಾಯಣ ಸ್ವಾಮಿಯ ವಿಶ್ವವಿಖ್ಯಾತ ‘ವೈರಮುಡಿ ಬ್ರಹ್ಮೋತ್ಸವ’ ಸಂಭ್ರಮದಿಂದ ನಡೆದಿತ್ತು. ಲೋಕಕಲ್ಯಾಣಾರ್ಥವಾಗಿ ನಡೆದ ಉತ್ಸವದಲ್ಲಿ ಅರ್ಧ ಚಂದ್ರಾಕೃತಿಯ ಗರುಡಾರೂಢನಾದ ಸ್ವಾಮಿಯನ್ನು ಕಣ್ತುಂಬಿಕೊಂಡ ಭಕ್ತರು, ‘ಗೋವಿಂದಾ, ಗೋವಿಂದಾ’ ಎಂದು ಜಯಘೋಷ ಮೊಳಗಿಸಿದ್ದರು.

ನಿಲ್ಲದ ನಾಲಾ ದುರಂತಗಳು

ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಸಮೀಪದ ನಾರ್ತ್ ಬ್ಯಾಂಕ್ ಗ್ರಾಮದ ಬಳಿಯಿರುವ ವಿಶ್ವೇಶ್ವರಯ್ಯ ನಾಲೆಗೆ ಬಿದ್ದ ಕಾರಿನಲ್ಲಿ ಏಪ್ರಿಲ್‌ 29ರಂದು ಮೂರು ಮೃತದೇಹಗಳು ಪತ್ತೆಯಾಗಿದ್ದವು. ಮತ್ತೊಂದು ಪ್ರಕರಣದಲ್ಲಿ, ಚಾಲಕನ ನಿಯಂತ್ರಣ ತಪ್ಪಿ ಕಾರು ವಿಶ್ವೇಶ್ವರಯ್ಯ ನಾಲೆಗೆ ಉರುಳಿಬಿದ್ದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟು, ಮತ್ತೊಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಘಟನೆ ಮಂಡ್ಯ ತಾಲ್ಲೂಕಿನ ತಿಬ್ಬನಹಳ್ಳಿ ಬಳಿ ಫೆ.3ರಂದು ನಡೆದಿತ್ತು. 

ಬೃಂದಾವನ ಪ್ರವೇಶ ದರ ದುಪ್ಪಟ್ಟು

ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆಯ ವಿಶ್ವವಿಖ್ಯಾತ ‘ಬೃಂದಾವನ’ ಉದ್ಯಾನದ ಪ್ರವೇಶ ಶುಲ್ಕವು ಮೇ 1ರಿಂದ ಎರಡು ಪಟ್ಟು ಹೆಚ್ಚಳವಾಗಿದ್ದು, ಪ್ರವಾಸಿಗರಿಗೆ ದರ ಏರಿಕೆಯ ಬಿಸಿ ತಟ್ಟಿತ್ತು. ಬೃಂದಾವನ ಪ್ರವೇಶದ್ವಾರದ ದರ, ವಾಹನ ಪಾರ್ಕಿಂಗ್‌ ಹಾಗೂ ಬೃಂದಾವನ ಮುಖ್ಯರಸ್ತೆ ಮೇಲ್ಸೇತುವೆ ಟೋಲ್‌ ದರ ದ್ವಿಗುಣಗೊಂಡಿತ್ತು. ರೈತರ ಪ್ರತಿಭಟನೆ ನಂತರ ಒಂದು ತಿಂಗಳು ದರ ಇಳಿಸಿ, ಮತ್ತೆ ದರ ಏರಿಕೆ ಮಾಡಲಾಗಿದೆ. 

ಕನ್ನಡ ಜಾಗೃತಿ ಸಮಾವೇಶ 

ದ್ವೇಷಪೂರಿತ ದುರಾಡಳಿತ, ಆರ್ಥಿಕ ಅಶಿಸ್ತು ಹಾಗೂ ಸರ್ವಾಧಿಕಾರಿ ಧೋರಣೆಯಿಂದಾಗಿ ಪರಿಷತ್ತಿನ ಘನತೆಗೆ ಚ್ಯುತಿಯುಂಟು ಮಾಡಿರುವ ಕಸಾಪ ಅಧ್ಯಕ್ಷ ಮಹೇಶ ಜೋಶಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು ಮತ್ತು ಸಚಿವ ಸಂಪುಟ ದರ್ಜೆಯ ಸ್ಥಾನಮಾನವನ್ನು ಕೂಡಲೇ ಹಿಂಪಡೆಯಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲು’ ಮೇ 17ರಂದು ನಡೆದ ‘ಕನ್ನಡ ಜಾಗೃತಿ ಸಮಾವೇಶ’ದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ‘ಮಂಡ್ಯದ ಕನ್ನಡ ನಾಡುನುಡಿ ಜಾಗೃತಿ ಸಮಿತಿ’ ಆಶ್ರಯದಲ್ಲಿ ನಡೆದ ಸಮಾವೇಶದಲ್ಲಿ ‘ಜೋಶಿಯವರನ್ನು ಅಮಾನತುಗೊಳಿಸಿ, ಆಡಳಿತಾಧಿಕಾರಿ ನೇಮಿಸಿ’ ಎಂದು ಒಕ್ಕೊರಲಿನಿಂದ ಆಗ್ರಹಿಸಿ 12 ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. 

ಕಲುಷಿತ ಆಹಾರ: ಇಬ್ಬರು ವಿದ್ಯಾರ್ಥಿಗಳ ಸಾವು

ಕಲುಷಿತ ಆಹಾರ ಸೇವಿಸಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ, ಮಳವಳ್ಳಿ ತಾಲ್ಲೂಕಿನ ಟಿ.ಕಾಗೇಪುರದ ಗೋಕುಲ ವಿದ್ಯಾಸಂಸ್ಥೆಯ ಮೂರು ಶಾಲೆಗಳ ಮಾನ್ಯತೆಯನ್ನು ಡಿಡಿಪಿಐ ಎಚ್. ಶಿವರಾಮೇಗೌಡ ಅವರು ಮೇ 9ರಂದು ರದ್ದುಪಡಿಸಿದ್ದರು. ಮಾ.16ರಂದು ಉದ್ಯಮಿಯೊಬ್ಬರು ನೀಡಿದ್ದ ಆಹಾರ ಸೇವಿಸಿ ಮೇಘಾಲಯ ಮೂಲದ ವಿದ್ಯಾರ್ಥಿಗಳಾದ ಕೇರ್ಲಾಂಗ್ (13) ಮತ್ತು ನಮೀಬ್ ಮಾಂತೆ (14) ಮೃತಪಟ್ಟಿದ್ದರು. 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. 

ಡಿಸಿಎಂ ಬೆಂಗಾವಲು ವಾಹನ ಪಲ್ಟಿ

ಶ್ರೀರಂಗಪಟ್ಟಣ ತಾಲ್ಲೂಕಿನ ಟಿ.ಎಂ. ಹೊಸೂರು ಗೇಟ್ ಬಳಿ ಜುಲೈ 19ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಗಾವಲು ವಾಹನ ಪಲ್ಟಿಯಾಗಿ ಅದರಲ್ಲಿದ್ದ ನಾಲ್ವರು ಗಾಯಗೊಂಡಿದ್ದರು. ಮೈಸೂರಿನಲ್ಲಿ ಸರ್ಕಾರದ ‘ಸಾಧನಾ ಸಮಾವೇಶ’ ಮುಗಿಸಿ ಡಿ.ಕೆ. ಶಿವಕುಮಾರ್ ಬೆಂಗಳೂರಿಗೆ ತೆರಳುತ್ತಿದ್ದಾಗ, ಮಳೆ ನೀರು ಹೆದ್ದಾರಿಯಲ್ಲಿ ನಿಂತಿದ್ದ ಕಾರಣ ಬೆಂಗಾವಲು ವಾಹನ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತ್ತು. 

‘ಜಂಬೂಸವಾರಿ’ಗೆ ನಾಗಾಭರಣ ಚಾಲನೆ 

ಶ್ರೀರಂಗಪಟ್ಟಣ ಪಟ್ಟಣದಲ್ಲಿ ಸೆ.25ರಂದು ಆರಂಭವಾದ ನಾಲ್ಕು ದಿನಗಳ ‘ಶ್ರೀರಂಗಪಟ್ಟಣ ದಸರಾ ಉತ್ಸವ’ದ ಅಂಗವಾಗಿ ನಡೆದ ಜಂಬೂಸವಾರಿಯನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡರು. ತಾಲ್ಲೂಕಿನ ಕಿರಂಗೂರು ವೃತ್ತದ ಬಳಿಯ ಬನ್ನಿ ಮಂಟಪದ ಬಳಿ ಮಧ್ಯಾಹ್ನ 3.40ಕ್ಕೆ ‘ಜಂಬೂ ಸವಾರಿ’ಗೆ ಚಲನಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ ಚಾಲನೆ ನೀಡಿದರು. 

ರಾಜಮುಡಿಯಂದೇ ‘ಅಷ್ಟ ತೀರ್ಥೋತ್ಸವ’

ಹಲವು ದಶಕಗಳ ಬಳಿಕ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅ.31ರಂದು ರಾಜಮುಡಿ ಉತ್ಸವ ಹಾಗೂ ಅಷ್ಟ ತೀರ್ಥೋತ್ಸವ ಒಟ್ಟಿಗೆ ನಡೆದು ಅಪರೂಪ ಕ್ಷಣಕ್ಕೆ ಸಾಕ್ಷಿಯಾಯಿತು. ಪ್ರತಿವರ್ಷ ಅಷ್ಟ ತೀರ್ಥೋತ್ಸವಕ್ಕೂ ಮೊದಲು ರಾಜಮುಡಿ ಉತ್ಸವ ನಡೆಯುತ್ತಿತ್ತು. ನಂತರ 6ನೇ ತಿರುನಾಳ್‌ ದಿವಸ ಅಷ್ಟ ತೀರ್ಥೋತ್ಸವ ನೆರವೇರುತ್ತಿತ್ತು. ಈ ಬಾರಿ ವಿಶೇಷ ನಕ್ಷತ್ರ ಬಂದಿರುವ ಕಾರಣದಿಂದ ಎರಡೂ ವಿಶೇಷ ಉತ್ಸವಗಳು ಒಂದೇ ದಿನ ನಡೆದು, ಭಕ್ತರ ಪಾಲಿಗೆ ಅತ್ಯಂತ ಪವಿತ್ರ ದಿನ ಎನಿಸಿತು. 

ದಲಿತರಿಂದಲೇ ದಲಿತರಿಗೆ ಬಹಿಷ್ಕಾರ!

ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂನಲ್ಲಿ ಕುಲಸ್ಥರ ಮಾತಿಗೆ ವಿರುದ್ಧವಾಗಿ ನಡೆದುಕೊಂಡರು ಎಂಬ ಕಾರಣಕ್ಕೆ ಏಳು ದಲಿತ ಕುಟುಂಬಗಳಿಗೆ ದಲಿತ ಕುಲದ ಯಜಮಾನರು ಬಹಿಷ್ಕಾರ ಹಾಕಿ ದಂಡ ವಿಧಿಸಿದ್ದ ಘಟನೆ ಅ.17ರಂದು ನಡೆದಿತ್ತು. ‘ಗಂಜಾಂನ ಅಂಬೇಡ್ಕರ್‌ ಬೀದಿಯ ಮಹೇಶ್, ಯಶವಂತಕುಮಾರ್‌ ಇತರರ ಕುಟುಂಬಗಳು ದೇವಾಲಯದ ಕಾರ್ಯಕ್ರಮಗಳಿಗೆ ವಂತಿಕೆ ಹಣ ಕೊಡದೆ ಕುಲದ ಯಜಮಾನರ ಮಾತಿಗೆ ಎದುರು ಮಾತನಾಡಿದ್ದಾರೆ ಎಂದು ಬಹಿಷ್ಕಾರ ಮತ್ತು ದಂಡದ ಶಿಕ್ಷೆ ವಿಧಿಸಲಾಗಿತ್ತು. 

ಸಚಿವರ ಪುತ್ರ ಎಂಡಿಸಿಸಿ ಅಧ್ಯಕ್ಷ

ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಎಂಡಿಸಿಸಿ) ಅಧ್ಯಕ್ಷರಾಗಿ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರ ಪುತ್ರ ಸಚಿನ್‌ ಚಲುವರಾಯಸ್ವಾಮಿ ನವೆಂಬರ್‌ 21ರಂದು ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಸಚಿನ್ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮದ್ದೂರಿನ ಚಲುವರಾಜ್ ನಾಮಪತ್ರ ಸಲ್ಲಿಸಿದ್ದರು. ಎರಡೂ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಸಲ್ಲಿಕೆಯಾದ್ದರಿಂದ ಅವಿರೋಧ ಆಯ್ಕೆಯನ್ನು ಘೋಷಿಸಲಾಯಿತು. 

ಕಾಲುವೆಗೆ ಬಿದ್ದಿದ್ದ ಕಾಡಾನೆ ರಕ್ಷಣೆ

ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಬಳಿಯ ‘ಪಯನಿಯರ್‌ ಜೆನ್ಕೋ ಲಿಮಿಟೆಡ್ ವಿದ್ಯುತ್ ಉತ್ಪಾದನಾ ಕೇಂದ್ರ’ದ 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯನ್ನು ನ.19ರಂದು ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ, ಕ್ರೇನ್‌ ನೆರವಿನಿಂದ ಯಶಸ್ವಿಯಾಗಿ ಮೇಲೆ ತರಲಾಯಿತು. ನಾಲ್ಕು ದಿನಗಳ ಹಿಂದೆ ವಿದ್ಯುತ್ ಘಟಕದ ಬಳಿ ಸುತ್ತಾಡುತ್ತಿದ್ದ 12 ವರ್ಷದ ಗಂಡು ಕಾಡಾನೆಯು ನೀರು ಕುಡಿಯಲು ಗೇಟ್ ಮೂಲಕ ನಾಲೆಗೆ ಇಳಿದಿತ್ತು. ಆದರೆ, ಹರಿವಿನ ರಭಸಕ್ಕೆ ಮೇಲೆ ಬರಲಾಗದೆ ಮೂರು ದಿನಗಳಿಂದ ಅಲ್ಲಿಯೇ ಓಡಾಡಿ ನಿತ್ರಾಣಗೊಂಡಿತ್ತು. 

ಹನುಮಾನ್‌ ಮಾಲಾಧಾರಿಗಳ ಯಾತ್ರೆ 

ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣ ವೇದಿಕೆಯು ಡಿ.3ರಂದು ಆಯೋಜಿಸಿದ್ದ ಮೂಡಲ ಬಾಗಿಲು ಹನುಮಾನ್‌ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆಯಿಂದ ಶ್ರೀರಂಗಪಟ್ಟಣ ಕೇಸರಿಮಯವಾಗಿತ್ತು. ಜೈಶ್ರೀರಾಮ್‌, ಜೈ ಹನುಮಾನ್‌ ಘೋಷಣೆಗಳು ಮೊಳಗಿದವು. ಪಟ್ಟಣ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯದ ಬಳಿ ಜ್ಯೋತಿಷಿ ವಿ. ಭಾನುಪ್ರಕಾಶ್ ಶರ್ಮಾ ಯಾತ್ರೆಗೆ ಚಾಲನೆ‌ ನೀಡಿದ್ದರು. 

ಬಾಡೂಟ ಹೋರಾಟಕ್ಕೆ ಒಂದು ವರ್ಷ

ಮಂಡ್ಯ ನಗರದಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟಕ್ಕೆ ಅವಕಾಶ ಕಲ್ಪಿಸುವಂತೆ ಮೊದಲ ಬಾರಿಗೆ ನಡೆಸಿದ್ದ ಹೋರಾಟಕ್ಕೆ ಒಂದು ವರ್ಷ ಸಂದಿರುವ ಅಂಗವಾಗಿ ಬಾಡೂಟ ಬಳಗದಿಂದ ‘ಮಂಡ್ಯ ಮುನ್ನುಡಿ’ ಕಾರ್ಯಕ್ರಮವು ಡಿ.23ರಂದು ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ನಡೆಯಿತು. 

ರಾಷ್ಟ್ರೀಯ ಜಲ ಪ್ರಶಸ್ತಿ

ಜಲಶಕ್ತಿ ಅಭಿಯಾನದ ಅಂಗವಾಗಿ ಮಂಡ್ಯ ಜಿಲ್ಲೆಯು ಜಲ ಸಂರಕ್ಷಣೆ ಕಾಮಗಾರಿಗಳನ್ನು ಉತ್ತಮವಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ನೀಡುವ ರಾಷ್ಟ್ರೀಯ ಪ್ರಶಸ್ತಿಯು ಮಂಡ್ಯ ಜಿಲ್ಲಾ ಪಂಚಾಯಿತಿ ಪಾತ್ರವಾಗಿತ್ತು. ನವದೆಹಲಿಯ ವಿಜ್ಞಾನ ಭವನದಲ್ಲಿ ಈಚೆಗೆ ನಡೆದ ‘ರಾಷ್ಟ್ರೀಯ ಜಲ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅವರು ಮಂಡ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ ಅವರಿಗೆ ಪ್ರದಾನ ಮಾಡಿದರು. ರಾಜ್ಯ ಸಚಿವ ವಿ.ಸೋಮಣ್ಣ ಇದ್ದಾರೆ

ಕೆಆರ್‌ಎಸ್‌ ಹಿನ್ನೀರು ಒತ್ತುವರಿ ತೆರವಿಗೆ ಆದೇಶ

ಕೃಷ್ಣರಾಜ ಸಾಗರ ಅಣೆಕಟ್ಟೆಯ ಹಿನ್ನೀರಿನ ಪ್ರದೇಶಗಳಲ್ಲಿ ಭೂ ಒತ್ತುವರಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ, ಕೂಡಲೇ ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸಬೇಕು. ಗಡಿ ಕಲ್ಲುಗಳನ್ನು ನೆಟ್ಟು ವರದಿ ನೀಡಬೇಕು’ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನ.7ರಂದು ಆದೇಶಿಸಿದ್ದರು. ಮಧ್ಯಂತರ ವರದಿ ಸಲ್ಲಿಸಲು ಈಚೆಗೆ ಸೂಚನೆಯನ್ನೂ ನೀಡಿದ್ದಾರೆ. 

ಫೈನಾನ್ಸ್‌ ಕಿರುಕುಳ: ತಾಯಿ–ಮಗ ಆತ್ಮಹತ್ಯೆ

ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿ ಕೊನ್ನಾಪುರ ಗ್ರಾಮದಲ್ಲಿ ಸಾಲದ ಕಂತುಗಳನ್ನು ಪಾವತಿಸಿಲ್ಲ ಎಂದು ಖಾಸಗಿ ಮೈಕ್ರೋಫೈನಾನ್ಸ್ ಕಂಪನಿಯವರು ರಂಜಿತ್ ಅವರ ಮನೆಯನ್ನು ಜಪ್ತಿ ಮಾಡಿದ್ದರು. ಇದರಿಂದಾಗಿ ಮನನೊಂದಿದ್ದ ತಾಯಿ ಪ್ರೇಮಾ ಜನವರಿ 27ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿ ವಿಷ ಸೇವಿಸಿ ಮೃತಪಟ್ಟ ಸುದ್ದಿ ತಿಳಿದು ಪುತ್ರ ಕೆ.ಎ.ರಂಜಿತ್ (30) ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆಯ ನಂತರ ಹಲವಾರು ಸಂಘಟನೆಗಳು ದೊಡ್ಡ ಹೋರಾಟ ನಡೆಸಿ, ನ್ಯಾಯಕ್ಕೆ ಒತ್ತಾಯಿಸಿದ್ದವು.  

ಜಿಲ್ಲೆಯಲ್ಲಿ ಸಿಎಂ ಸಂಚಲನ 

ಏಪ್ರಿಲ್‌ 22ರಂದು ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ದೊಡ್ಡಬಾಲ ಗ್ರಾಮದಲ್ಲಿ 39 ವರ್ಷಗಳ ಬಳಿಕ ನಡೆದ ಹುಚ್ಚಪ್ಪಸ್ವಾಮಿಯ ಹಾಗೂ ಹದಿನಾಲ್ಕು ಕೂಟದ ದೇವರುಗಳ ಜಾತ್ರಾ ಮಹೋತ್ಸವಕ್ಕೆ ಚಾಲನೆ, ಮಂಡ್ಯ ನಗರದಲ್ಲಿ ಜಿಲ್ಲಾ ಕುರುಬರ ಸಂಘ ಮೇ ತಿಂಗಳಲ್ಲಿ ಆಯೋಜಿಸಿದ್ದ ಬಾಲಕರ ವಿದ್ಯಾರ್ಥಿನಿಲಯದ ನೂತನ ಕಟ್ಟಡದ ಶಂಕುಸ್ಥಾಪನೆ ಮತ್ತು ಮೈಷುಗರ್‌ ಆವರಣದಲ್ಲಿ 30 ಮೆಗಾವ್ಯಾಟ್‌ ಟರ್ಬೋ ಜನರೇಟರ್‌ಗೆ ಚಾಲನೆ, ಶ್ರೀರಂಗಪಟ್ಟಣದ ಅಲ್ಲಾಪಟ್ಟಣದ ಅನ್ನದಾನೇಶ್ವರಸ್ವಾಮಿ ದೇವಸ್ಥಾನ ಪುನರ್ ನಿರ್ಮಾಣಕ್ಕೆ ಚಾಲನೆ, ಜೂನ್‌ ತಿಂಗಳಲ್ಲಿ ಕೆಆರ್‌ಎಸ್‌ಗೆ ಬಾಗಿನ ಸಲ್ಲಿಕೆ, ಮದ್ದೂರಿನಲ್ಲಿ ಜುಲೈ ತಿಂಗಳಲ್ಲಿ ₹1,146 ಕೋಟಿ ಮೊತ್ತದ 87 ಕಾಮಗಾರಿಗಳಿಗೆ ಶಂಕುಸ್ಥಾಪನೆ, ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಬಳಿ ಸೆ.13ರಂದು ‘ಗಗನಚುಕ್ಕಿ ಜಲಪಾತೋತ್ಸವ–2025’ ಕಾರ್ಯಕ್ರಮಕ್ಕೆ ಚಾಲನೆ, ಮಳವಳ್ಳಿಯಲ್ಲಿ ಡಿಸೆಂಬರ್‌ನಲ್ಲಿ 16ರಂದು ನಡೆದ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ, ಮಂಡ್ಯದ.ಸಿ.ಫಾರಂನಲ್ಲಿ ಡಿ.5ರಂದು ನಡೆದ ಕೃಷಿ ಮೇಳ ಕಾರ್ಯಕ್ರಮ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ ಸಂಚಲನ ಮೂಡಿಸಿದ್ದರು. 

ಕೃಷ್ಣರಾಜಸಾಗರ ಜಲಾಶಯ ಮೊದಲ ಬಾರಿಗೆ ಜೂನ್‌ನಲ್ಲೇ ಭರ್ತಿಯಾದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಸಚಿವ ಎನ್‌.ಚಲುವರಾಯಸ್ವಾಮಿ ಬಾಗಿನ ಅರ್ಪಿಸಿದ ದೃಶ್ಯ 
ಶ್ರೀರಂಗಪಟ್ಟಣದಲ್ಲಿ ನಡೆದ ಜಂಬೂ ಸವಾರಿಗೆ ಚಲನಚಿತ್ರ ನಿರ್ದೇಶಕ ಟಿ.ಎಸ್‌. ನಾಗಾಭರಣ ಚಾಲನೆ ನೀಡಿದರು
ಕನ್ನಡ ನಾಡುನುಡಿ ಜಾಗೃತಿ ಸಮಿತಿ ಆಶ್ರಯದಲ್ಲಿ ಮಂಡ್ಯ ನಗರದ ಕಲಾಮಂದಿರಲ್ಲಿ ಹಮ್ಮಿಕೊಂಡಿದ್ದ ‘ಕನ್ನಡ ಜಾಗೃತಿ ಸಮಾವೇಶ’ವನ್ನು ಸಾಹಿತಿ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಅವರು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು
ಜಿಲ್ಲಾಧಿಕಾರಿ ಕಚೇರಿ ಎದುರು ಆತ್ಮಹತ್ಯೆಗೆ ಯತ್ನಿಸಿದ್ದ ಮಂಜೇಗೌಡ 
ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದ ಬಳಿಯ ಕಾಲುವೆಯಿಂದ ಕಾಡಾನೆಯನ್ನು ಮೇಲೆ ತರಲು ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ ದೃಶ್ಯ 
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಡ್ಯಾಂ ಮುಂಭಾಗದ ದೋಣಿ ವಿಹಾರ ಸ್ಥಳದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ‘ಕಾವೇರಿ ಆರತಿ’ ಬೆಳಗಿದರು 
ಮಳವಳ್ಳಿಯ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸ್ಮರಣಿಕೆ ನೀಡಿ ಗೌರವಿಸಿದರು 
ಮೇಲುಕೋಟೆಯಲ್ಲಿ ಚೆಲುವನಾರಾಯಣ ಸ್ವಾಮಿಯ ‘ವೈರಮುಡಿ ಬ್ರಹ್ಮೋತ್ಸವ’ ಸಾವಿರಾರು ಭಕ್ತರ ಸಮಕ್ಷಮದಲ್ಲಿ ವಿಜೃಂಭಣೆಯಿಂದ ನೆರವೇರಿತು   
ಉಪಲೋಕಾಯುಕ್ತ ಬಿ.ವೀರಪ್ಪ ಅವರು ಮಂಡ್ಯದಲ್ಲಿ ಸಾರ್ವಜನಿಕ ಅಹವಾಲು ದೂರು ವಿಚಾರಣೆ ಮತ್ತು ಬಾಕಿ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು 
ಗಡ್ಡಪ್ಪ 
ಮೊಗಳ್ಳಿ ಗಣೇಶ್
ಮಂಡ್ಯದ ಅಂಬೇಡ್ಕರ್‌ ಭವನದಲ್ಲಿ ಭಾನುವಾರ 87ನೇ ನುಡಿಜಾತ್ರೆಯ ‘ಬೆಲ್ಲದಾರತಿ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಮೀರಾ ಶಿವಲಿಂಗಯ್ಯ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌.ನಂದಿನಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಜಿಲ್ಲಾಧಿಕಾರಿ ಕುಮಾರ ಶಾಸಕ ಪಿ.ರವಿಕುಮಾರ್‌ ಸಚಿವ ಎನ್‌.ಚಲುವರಾಯಸ್ವಾಮಿ ನಿರ್ಮಲಾನಂದನಾಥ ಸ್ವಾಮೀಜಿ ಸಾಹಿತಿ ಗೊ.ರು. ಚನ್ನಬಸಪ್ಪ ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಪಾಲ್ಗೊಂಡಿದ್ದರು 
ಜಲಶಕ್ತಿ ಅಭಿಯಾನದ ಅಂಗವಾಗಿ ಮಂಡ್ಯ ಜಿಲ್ಲೆಯು ಜಲ ಸಂರಕ್ಷಣೆ ಕಾಮಗಾರಿಗಳನ್ನು ಉತ್ತಮವಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ನೀಡುವ ರಾಷ್ಟ್ರೀಯ ಪ್ರಶಸ್ತಿಯನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ಈಚೆಗೆ ನಡೆದ ‘ರಾಷ್ಟ್ರೀಯ ಜಲ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅವರು ಮಂಡ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ ಅವರಿಗೆ ಪ್ರದಾನ ಮಾಡಿದರು. ರಾಜ್ಯ ಸಚಿವ ವಿ.ಸೋಮಣ್ಣ ಇದ್ದಾರೆ 
ಮಂಡ್ಯ ತಾಲ್ಲೂಕಿನ ಆಲಕೆರೆಯಲ್ಲಿ 24 ವರ್ಷಗಳ ನಂತರ ನಡೆದ ವೀರಭದ್ರೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕೊಂಡೋತ್ಸವ ವೈಭವದಿಂದ ನಡೆಯಿತು
ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿ ಕೊನ್ನಾಪುರ ಗ್ರಾಮದ ಪ್ರೇಮಾ ಅವರ ಮನೆಗೆ ಭೇಟಿ ನೀಡಿದ್ದ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು 

ಉಪಲೋಕಾಯುಕ್ತರ ಸಂಚಾರ; 23 ಸ್ವಯಂಪ್ರೇರಿತ ದೂರು

ಉಪಲೋಕಾಯುಕ್ತ ಬಿ.ವೀರಪ್ಪ ಅವರು ಮಂಡ್ಯ ಜಿಲ್ಲೆಯಲ್ಲಿ ಮೇ 26ರಿಂದ ಮೇ 29ರವರೆಗೆ ಪ್ರವಾಸ ಕೈಗೊಂಡು ಸರ್ಕಾರಿ ಕಚೇರಿ ಸರ್ಕಾರಿ ಜಾಗ ಸೇರಿದಂತೆ ಒಟ್ಟು 26 ಸ್ಥಳಗಳಿಗೆ ಭೇಟಿ ಕೊಟ್ಟು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಿಳಂಬ ಧೋರಣೆ ಅಕ್ರಮ ಎಸಗಿದ ತಪ್ಪಿತಸ್ಥ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ನಿಗದಿತ ಸಮಯದಲ್ಲಿ ಸೂಚಿಸಿದ ಕೆಲಸಗಳನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಿದರು. ಒಟ್ಟು 23 ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಿಕೊಂಡು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ಮಳವಳ್ಳಿಗೆ ರಾಷ್ಟ್ರಪತಿ ಭೇಟಿ

ಮಳವಳ್ಳಿಯಲ್ಲಿ ಡಿ.16ರಿಂದ 22ರವರೆಗೆ ಹಮ್ಮಿಕೊಂಡಿದ್ದ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಿದರು. ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪಾಲ್ಗೊಂಡಿದ್ದರು.  ವಿಶ್ವವಿಖ್ಯಾತ ಶ್ರೀವೈಷ್ಣವ ಕ್ಷೇತ್ರ ಮೇಲುಕೋಟೆಗೆ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ನ.9ರಂದು ಭೇಟಿ ನೀಡಿ ಇಲ್ಲಿನ ಆರಾಧ್ಯ ದೈವ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದಿದ್ದರು. 

ಅಕ್ಕನ ಊರಿನಲ್ಲಿ ‘ಮೊಗಳ್ಳಿ’ ಅಂತ್ಯಕ್ರಿಯೆ

ಸಾಹಿತಿ ಮೊಗಳ್ಳಿ ಗಣೇಶ್‌ ಅವರ ಅಂತ್ಯಕ್ರಿಯೆ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮಾದನಾಯಕನಹಳ್ಳಿಯ ತೋಟದಲ್ಲಿ ಅಕ್ಟೋಬರ್‌ 5ರಂದು ನಡೆಯಿತು. ವಿಜಯನಗರ ಜಿಲ್ಲೆಯ ಹೊಸಪೇಟೆಯಿಂದ ಆಂಬುಲೆನ್ಸ್‌ನಲ್ಲಿ ಪಾರ್ಥಿವ ಶರೀರವನ್ನು ಮಾದನಾಯಕನಹಳ್ಳಿಗೆ ತರಲಾಯಿತು. ಗಣೇಶ್‌ ಅವರ ಇಚ್ಛೆಯಂತೆಯೇ ಅಕ್ಕನ ಊರಿನಲ್ಲೇ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. 

ವಿರೋಧದ ನಡುವೆಯೂ ‘ಕಾವೇರಿ ಆರತಿ’

ರೈತಸಂಘಟನೆಗಳ ತೀವ್ರ ಪ್ರತಿಭಟನೆ ನಡುವೆಯೂ ‘ಗಂಗಾರತಿ’ ಮಾದರಿಯ ₹92 ಕೋಟಿ ವೆಚ್ಚದ ‘ಕಾವೇರಿ ಆರತಿ’ ಕಾರ್ಯಕ್ರಮಕ್ಕೆ ಕೆಆರ್‌ಎಸ್‌ ಬೃಂದಾವನ ಉದ್ಯಾನದ ಅಂಗಳದಲ್ಲಿ ಸೆ.26ರಂದು ಅದ್ದೂರಿ ಚಾಲನೆ ಸಿಕ್ಕಿತು. ಕೆಆರ್‌ಎಸ್‌ ಅಣೆಕಟ್ಟೆ ಸಮೀಪದ ದೋಣಿ ವಿಹಾರ ಸ್ಥಳದಲ್ಲಿ ಪ್ರತಿಷ್ಠಾಪಿಸಿದ್ದ ಕಾವೇರಿ ಮೂರ್ತಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಆರತಿ ಬೆಳಗಿ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಿದ್ದರು. 

ಜೂನ್‌ನಲ್ಲೇ ಕೆಆರ್‌ಎಸ್‌ ಭರ್ತಿ!

ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆ ನಿರ್ಮಾಣವಾದ 93 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜೂನ್‌ ತಿಂಗಳಲ್ಲೇ ಭರ್ತಿಯಾಗಿತ್ತು. ಈ ಸುಸಂದರ್ಭದಲ್ಲೇ ಬಾಗಿನ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ದಾಖಲೆ ಬರೆದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕರು ಪಾಲ್ಗೊಂಡಿದ್ದರು.

ಮದ್ದೂರು ಗಲಭೆ: 21 ಆರೋಪಿಗಳ ಬಂಧನ

‌ಗಣೇಶ ಮೂರ್ತಿ ವಿಸರ್ಜನೆ ವೇಳೆ ಸೆ.8ರ ರಾತ್ರಿ ಹಿಂದೂ ಮತ್ತು ಮುಸ್ಲಿಂ ಯುವಕರ ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದ್ದು ಮದ್ದೂರು ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು. ಘಟನೆಯಲ್ಲಿ ಒಟ್ಟು 8 ಮಂದಿಗೆ ಗಾಯಗಳಾಗಿದ್ದವು. ನಂತರ ಬಿಜೆಪಿ ಭಜರಂಗದಳ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ‘ಮದ್ದೂರು ಬಂದ್‌’ ಆಚರಿಸಲಾಗಿತ್ತು. ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ 21 ಮಂದಿಯನ್ನು ಬಂಧಿಸಿದ್ದರು. ಪಟ್ಟಣದಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. 

ಮೂರು ದಿನ ಕೃಷಿ ಮೇಳ 

ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಡಿ.5ರಿಂದ 7ರವರೆಗೆ ಆಯೋಜಿಸಿದ್ದ ‘ಕೃಷಿ ಮೇಳ–2025ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಮೇಳದಲ್ಲಿ 350ರಿಂದ 400 ವಿವಿಧ ಬೆಳೆಗಳ ತಳಿ ಪರಿಚಯಿಸಲಾಗಿತ್ತು.  ವಸ್ತುಪ್ರದರ್ಶನದಲ್ಲಿ ಒಟ್ಟು 350 ಮಳಿಗೆಗಳನ್ನು ತೆರೆಯಲಾಗಿತ್ತು. 

ಸದ್ದು ಮಾಡಿದ ‘ಡೆಕಾಯ್‌ ಕಾರ್ಯಚರಣೆ’

ಮಂಡ್ಯ ಡಿಎಚ್‌ಒ ಡಾ.ಕೆ.ಮೋಹನ್‌ ನೇತೃತ್ವದಲ್ಲಿ ನಡೆದ ‘ಡೆಕಾಯ್‌ ಕಾರ್ಯಾಚರಣೆ’ ಈ ವರ್ಷವೂ ಹೆಚ್ಚು ಸದ್ದು ಮಾಡಿತು. ‘ಹೆಣ್ಣುಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ’ ಪ್ರಕರಣಗಳು ‘ಸಕ್ಕರೆ ನಾಡು’ ಮಂಡ್ಯಕ್ಕೆ ಕಳಂಕ ತಂದಿದ್ದವು. ‘ಸಿಎಂ ತವರು ಕ್ಷೇತ್ರ’ವಾದ ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ತಿ.ನರಸೀಪುರ ತಾಲ್ಲೂಕಿನ ಹುನಗನಹಳ್ಳಿ ಗ್ರಾಮದ ಫಾರಂ ಹೌಸ್‌ವೊಂದರಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸುವುದಕ್ಕೆ ಡೆಕಾಯ್‌ ಕಾರ್ಯಾಚರಣೆ ನೆರವಾಯಿತು.  

‘ತಿಥಿ’ ಖ್ಯಾತಿಯ ‘ಗಡ್ಡಪ್ಪ’ ನಿಧನ

ರಾಷ್ಟ್ರ ಪ್ರಶಸ್ತಿ ಪಡೆದ ‘ತಿಥಿ’ ಸಿನಿಮಾ ಖ್ಯಾತಿಯ ಮಂಡ್ಯ ತಾಲ್ಲೂಕಿನ ನೊದೆಕೊಪ್ಪಲು ಗ್ರಾಮದ ಗಡ್ಡಪ್ಪ ಅಲಿಯಾಸ್‌ ಚನ್ನೇಗೌಡ (89) ನ.12ರಂದು ಮುಂಜಾನೆ ನಿಧನರಾದರು. ಆಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಿಂಗಳ ಹಿಂದೆ ಬಿದ್ದು ಸೊಂಟಕ್ಕೆ ಪೆಟ್ಟಾಗಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ತಿಥಿ ತರ್ಲೆ ವಿಲೇಜ್ ಜಾನಿ ಮೇರಾ ನಾಮ್ ಹಳ್ಳಿ ಪಂಚಾಯಿತಿ ಸೇರಿದಂತೆ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. 

ಡಿಸಿ ಕಚೇರಿ ಎದುರು ರೈತ ಆತ್ಮಹತ್ಯೆ

ಭೂಸ್ವಾಧೀನ ಪ್ರಕರಣದಲ್ಲಿ ಹಲವು ವರ್ಷಗಳಿಂದ ಪರಿಹಾರ ದೊರಕಿಲ್ಲವೆಂದು ಆರೋಪಿಸಿ ಕೆ.ಆರ್.ಪೇಟೆ ತಾಲ್ಲೂಕು ಮೂಡನಹಳ್ಳಿಯ ರೈತ ಮಂಜೇಗೌಡ ಎಂ.ಡಿ. (55) ಎಂಬವರು ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನದಲ್ಲಿ ನ.4ರಂದು ಬೆಳಿಗ್ಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಸ್ಥಳೀಯರು ಕೂಡಲೇ ನೀರು ಎರಚಿ ಅವರನ್ನು ರಕ್ಷಿಸಿ ನಗರದ ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಲು ನೆರವಾದರು. ದೇಹವು ಶೇ 60ರಷ್ಟು ಸುಟ್ಟಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಆಸ್ಪತ್ರೆಯಲ್ಲಿ ಅವರು ಮೃತಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.