
ಮಂಡ್ಯ: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದು ಬರೋಬ್ಬರಿ ಒಂದು ಸಾವಿರ ದಿನಗಳು ತುಂಬಿದ್ದು, ಇದು ಜನ ವಿರೋಧಿಯಾಗಿ ನಿಂತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಖಾಲಿ ಟ್ರಂಕ್, ಚಂಬು, ತೆಂಗಿನ ಚಿಪ್ಪು ಪ್ರದರ್ಶಿಸಿ, ಕಿವಿಗೆ ಚೆಂಡು ಹೂ ಇಟ್ಟುಕೊಂಡು ಹಣೆಗೆ ವಿಭೂತಿ ಬಳಿದು ವಿನೂತನವಾಗಿ ಶನಿವಾರ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ನಗರದ ಮಹಾವೀರ ವೃತ್ತದ ಬಳಿ ಜಮಾವಣೆಗೊಂಡ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಯಾವ ಪುರುಷಾರ್ಥಕ್ಕಾಗಿ ಸಾವಿರದಿನದ ಸಂಭ್ರಮ ಆಡಳಿತ ನಡೆಸುತ್ತಿದೆ ಎಂದು ಘೋಷಣ ಕೂಗಿದರು.
ಕಾಂಗ್ರೆಸ್ ಕೇವಲ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಇತರೆ ಸಮುದಾಯಕ್ಕೆ ಮೀಸಲಿಟ್ಟಿರುವ ಅನುದಾನ ಕಳ್ಳತನ ಮಾಡಿ ‘ನಿರರ್ಥಕ 1000’ ದಿನಗಳು ಆಡಳಿತ ನಡೆಸಿ ಭ್ರಷ್ಟಾಚಾರದಲ್ಲಿ ದೇಶದಲ್ಲಿಯೇ ಕರ್ನಾಟಕ ನಂಬರ್ ಒಂದನೇ ಸ್ಥಾನಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 2,800ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ನಡೆದಿದೆ. 2.80 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಆದರೆ ನೇಮಕಾತಿ ಆಗಿಲ್ಲ. ಬಾಕಿ ಹಣ ನೀಡದೆ ಗುತ್ತಿಗೆದಾರರಿಗೆ ಆತ್ಮಹತ್ಯೆ ಭಾಗ್ಯ ಕೊಟ್ಟಿದೆ. ಸರ್ಕಾರದ ಕಿರುಕುಳಕ್ಕೆ ಅಧಿಕಾರಿಗಳ ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಎಲ್ಲಾ ರಸ್ತೆಗಳು ಗುಂಡಿ ಬಿದ್ದಿವೆ. ಇದರಿಂದ ಅಪಘಾತಕ್ಕೆ ಅಮಾಯಕರು ಬಲಿ ಆಗುತ್ತಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ದಲಿತರ ₹25,000 ಕೋಟಿ ದುರ್ಬಳಕೆ, ಅಬಕಾರಿ ಇಲಾಖೆಯಲ್ಲಿ ₹6,000 ಕೋಟಿ ಹಗರಣ, ಗೃಹಲಕ್ಷ್ಮಿ ಹಣ ₹5,000 ಕೋಟಿ ಗುಳುಂ ಆಗಿದೆ. ಅನ್ನಭಾಗ್ಯ ಅಕ್ಕಿ ಹಣ ₹657 ಕೋಟಿ ಲೂಟಿ ಹೊಡೆಯಲಾಗಿದೆ. ಕಾರ್ಮಿಕ ಇಲಾಖೆ ಕಿಟ್ ಹಗರಣ, ವಾಲ್ಮೀಕಿ ನಿಗಮದಲ್ಲಿ ₹187 ಕೋಟಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಪೆಟ್ರೋಲ್ ಹಾಗೂ ಡಿಸೇಲ್ ದರ ಹೆಚ್ಚಳ ಮಾಡಿ ಗ್ರಾಹಕರಿಗೆ ನಷ್ಟ ಉಂಟು ಮಾಡಿದ್ದಾರೆ, ಪ್ರತಿದಿನ ಬಳಸುವ ಆಹಾರ ಪದಾರ್ಥಗಳ ಮೇಲೆ ಬೆಲೆ ಹೆಚ್ಚಳ ಮಾಡಿ ಮಧ್ಯಮ ವರ್ಗದ ಜನರು ಜೀವನ ಮಾಡುವುದೇ ಕಷ್ಟ ಎನ್ನುವ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಇ-ಖಾತಾ, ಪೋಡಿ, ಪೌತಿ ಅಭಿಯಾನ ವಿಫಲವಾಗಿದೆ. ಬಡವರ ಜನೌಷಧ ಕೇಂದ್ರ ಸ್ಥಗಿತಗೊಳಿಸಲಾಗಿದೆ. ಇಲಾಖಾವಾರು ವರ್ಗಾವಣೆ ದಂಧೆ ರಾಜ್ಯದಲ್ಲಿ ಗಾಂಜಾ, ಡ್ರಗ್ಸ್ ದಂಧೆ ಹೆಚ್ಚಳವಾಗಿದೆ. ಕೊಲೆ, ಸುಲಿಗೆ ಮಾಡಿ ಜೈಲಿಗೆ ಹೋದವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ. ಒಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಸರ್ಕಾರಿ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತರು, ಗ್ರಂಥಪಾಲಕರಿಗೆ ಸಂಬಳವನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ. ಅವರ ಸಮಸ್ಯೆಗಳನ್ನು ಕೇಳುತ್ತಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಸಿ.ಟಿ.ಮಂಜುನಾಥ್, ಶಿವಕುಮಾರ್ ಆರಾಧ್ಯ, ಹೋಟೆಲ್ ನಾಗರಾಜು, ಮಹಾಂತಪ್ಪ, ಹೊಸಹಳ್ಳಿ ಶಿವು, ಚಂದ್ರು, ಯೋಗೇಶ್ ಸಾತನೂರು, ಎಲ್ಲೇಗೌಡ, ಗೊರವಾಲೆ ಶಿವಣ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.