ADVERTISEMENT

ಕಿಕ್‌ ಬಾಕ್ಸಿಂಗ್‌: ಚಿನ್ನದ ಪದಕ ಗೆದ್ದ ಮಂಡ್ಯದ ಬಾಲಕ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 14:57 IST
Last Updated 2 ಜೂನ್ 2025, 14:57 IST
ಸೈಯದ್‌ ಸರ್ಫರಾಜ್‌ ಅಹಮದ್‌
ಸೈಯದ್‌ ಸರ್ಫರಾಜ್‌ ಅಹಮದ್‌   

ಮಂಡ್ಯ: ಥೈಲಾಂಡ್‌ನಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಮತ್ತು ಥಾಯ್‌ ಮಾರ್ಷಲ್‌ ಆರ್ಟ್ಸ್‌ ಗೇಮ್ಸ್‌ ಕಿಕ್‌ ಬಾಕ್ಸಿಂಗ್‌ನಲ್ಲಿ ಒಂಬತ್ತು ವರ್ಷದ ಸೈಯದ್‌ ಸರ್ಫರಾಜ್‌ ಅಹಮದ್‌ ಚಿನ್ನದ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಬಾಲಕನ ಸಂಬಂಧಿ ಬೀಬಿ ಅಮೀನಾ ಹೇಳಿದರು.

ಸದರಿ ಪಂದ್ಯಾವಳಿಯಲ್ಲಿ ಮಂಡ್ಯದ ಇಬ್ಬರು ವಿದ್ಯಾರ್ಥಿಗಳು ಭಾಗಿಯಾಗಿದ್ದು, ನಗರದ ಮಹಮದ್‌ ಮಕ್ಕಿ ಹಾಗೂ ಶೀಬಾರ ಪುತ್ರ ಸೈಯದ್ ಸರ್ಫ಼ರಾಜ್ ಅಹ್ಮದ್ ತನ್ನ ಪ್ರಥಮ ಅಂತರರಾಷ್ಟ್ರೀಯ ಪದಕ ಗೆದ್ದುಕೊಂಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಮಂಡ್ಯ ನಗರದ ಶ್ರೀಚೈತನ್ಯ ಶಾಲೆಯಲ್ಲಿ ಸೈಯದ್‌ ಸರ್ಫರಾಜ್‌ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 3 ವರ್ಷದ ಬಾಲಕನಾಗಿದ್ದಾಗಿನಿಂದಲೂ ಸ್ಕೇಟಿಂಗ್ ಹಾಗೂ ಕಿಕ್‌ ಬಾಕ್ಸಿಂಗ್ ತರಬೇತಿಯನ್ನು ಒಶೋಕೈ ಮಾರ್ಷಲ್ ಆರ್ಟ್ಸ್ ಅಕಾಡೆಮಿಯಲ್ಲಿ ಪಡೆಯುತ್ತಿದ್ದಾರೆ ಎಂದರು.

ADVERTISEMENT

ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಸ್ಕೇಟಿಂಗ್ ವಿಭಾಗದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ 35ಕ್ಕೂ ಹೆಚ್ಚು ಪದಕಗಳನ್ನು ಗಳಿಸಿರುವುದು ವಿಶೇಷ. ಕಿಕ್ ಬಾಕ್ಸಿಂಗ್ ವಿಭಾಗದಲ್ಲಿ 25ಕ್ಕೂ ಹೆಚ್ಚು ಪದಕ ಪಡೆದಿದ್ದಾರೆ ಎಂದು ವಿವರಿಸಿದರು.

ಚಿನ್ನದ ಪದಕ ವಿಜೇತ ಸೈಯದ್ ಸರ್ಫ್‌ರಾಜ್ ಅಹಮದ್, ತಾಯಿ ಶೀಬಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.