ADVERTISEMENT

ಮಂಡ್ಯ: ಕೋವಿಡ್‌ನಿಂದ ತಬ್ಬಲಿಗಳಾದ 6 ಮಕ್ಕಳಿಗೆ ಬಾಲಸೇವಾ ಯೋಜನೆಯ ಪರಿಹಾರ

ಕೋವಿಡ್‌ 1, 2ನೇ ಅಲೆಯಲ್ಲಿ ತಬ್ಬಲಿಯಾದ ಮಕ್ಕಳಿಗೆ ಪ್ರತಿ ತಿಂಗಳು ₹ 3,500 ಪೋಷಣಾ ಧನ

ಎಂ.ಎನ್.ಯೋಗೇಶ್‌
Published 12 ಜನವರಿ 2022, 19:30 IST
Last Updated 12 ಜನವರಿ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಂಡ್ಯ: ಕೋವಿಡ್‌ 1ನೇ ಮತ್ತು 2ನೇ ಅಲೆಯ ಸಂದರ್ಭದಲ್ಲಿ ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳನ್ನು ಸರ್ಕಾರವೇ ಪೋಷಣೆ ಮಾಡುತ್ತಿದ್ದು ಮಕ್ಕಳ ಸಂಬಂಧಿಕರ ಖಾತೆಗೆ ಪ್ರತಿ ತಿಂಗಳು ₹ 3,500 ‘ಪೋಷಣಾ ಧನ’ ಮಾಡುತ್ತಿದೆ.

ಎರಡೂ ಅಲೆಗಳ ಸಂದರ್ಭದಲ್ಲಿ ಜಿಲ್ಲೆಯ 6 ಮಕ್ಕಳಿಗೆ ತಂದೆ–ತಾಯಿ ಇಬ್ಬರೂ ಮೃತಪಟ್ಟಿದ್ದಾರೆ. ಇಡೀ ರಾಜ್ಯದಲ್ಲಿ 4,217 ಮಕ್ಕಳು ಕೋವಿಡ್‌ನಿಂದ ತೊಂದರೆ ಅನುಭವಿಸಿದ್ದಾರೆ. ಅವರಲ್ಲಿ 479 ಮಕ್ಕಳು ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದರೆ 3,725 ಮಕ್ಕಳು ತಂದೆ ಅಥವಾ ತಾಯಿಯನ್ನು (ಸಿಂಗಲ್‌ ಪೇರೆಂಟ್‌) ಕಳೆದುಕೊಂಡಿದ್ದಾರೆ. ಇಬ್ಬರೂ ಪೋಷಕರನ್ನು ಕಳೆದುಕೊಂಡ ಮಕ್ಕಳ ಪೋಷಣೆಗಾಗಿ ರಾಜ್ಯ ಸರ್ಕಾರ ‘ಮುಖ್ಯಮಂತ್ರಿ ಬಾಲಸೇವಾ ಯೋಜನೆ’ ಜಾರಿಗೊಳಿಸಿದೆ.

ಇಬ್ಬರೂ ಪೋಷಕರನ್ನು ಕಳೆದುಕೊಂಡ ಬಹುತೇಕ ಮಕ್ಕಳು ಅವರವರ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಪೋಷಣೆ ಮಾಡಲು ಮುಂದೆ ಬಾರದ ಮಕ್ಕಳನ್ನು ಆಯಾ ಜಿಲ್ಲೆಗಳ ಬಾಲಮಂದಿರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿ ಇರಿಸಿದ್ದರೂ ಆ ಮಕ್ಕಳ ಪೋಷಣೆಯ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ (ಡಿಸಿಪಿಒ) ವಹಿಸಿಕೊಂಡಿದ್ದಾರೆ. ಜೊತೆಗೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿಗಾ ವಹಿಸಿದೆ.

ADVERTISEMENT

ಮೊದಲ ಹಂತದಲ್ಲಿ 3 ಮಕ್ಕಳು: ಜಿಲ್ಲೆಯಲ್ಲಿ ಪೋಷಕರಿಬ್ಬರನ್ನೂ ಕಳೆದುಕೊಂಡ ಮಕ್ಕಳ ಪೈಕಿ ಮೂವರಿಗೆ ಈಗಾಗಲೇ ಡಿಸೆಂಬರ್‌ವರೆಗೆ ಪೋಷಣಾ ಧನ ಪಾವತಿ ಮಾಡಲಾಗಿದೆ. 2ನೇ ಹಂತದಲ್ಲಿ ಪೋಷಕರನ್ನು ಕಳೆದುಕೊಂಡ ಇನ್ನೂ ಮೂವರು ಮಕ್ಕಳನ್ನು ಯೋಜನಾ ವ್ಯಾಪ್ತಿಗೆ ತರಲಾಗಿದ್ದು ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ, ಜನವರಿಯಿಂದ ಅವರಿಗೂ ಪರಿಹಾರ ದೊರೆಯಲಿದೆ.

ಈಗಾಗಲೇ ಪರಿಹಾರ ಪಡೆಯುತ್ತಿರುವ ಮಕ್ಕಳ ಪೈಕಿ ನಾಗಮಂಗಲ ತಾಲ್ಲೂಕು, ಬಿಂಡಿಗನವಿಲೆ ಹೋಬಳಿ ದೊಡ್ಡೇನಹಳ್ಳಿ ಗ್ರಾಮದ 8 ತಿಂಗಳ ಮಗು ಕೂಡ ಒಂದು. ಮಗುವಿನ ತಂದೆ–ತಾಯಿ ಮೃತಪಟ್ಟು ಮಗು ಅನಾಥವಾದ ಸುದ್ದಿ ರಾಜ್ಯದಾದ್ಯಂತ ಭಾವುಕ ಅಲೆ ಸೃಷ್ಟಿಸಿತ್ತು, ಮಗುವಿನ ಸ್ಥಿತಿ ಕಂಡು ಅಪಾರ ಸಂಖ್ಯೆಯ ಜನರು ಕಣ್ಣೀರು ಹಾಕಿದ್ದರು, ಹಲವರು ಮಗುವಿನ ಪೋಷಣೆಗೆ ಮುಂದೆ ಬಂದಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರೂ ಗ್ರಾಮಕ್ಕೆ ಭೇಟಿ ನೀಡಿ ಮಗುವಿನ ಯೋಗಕ್ಷೇಮ ವಿಚಾರಿಸಿದ್ದರು. ಈಗ ಆ ಮಗು ಪಿ.ಚಿಟ್ಟನಹಳ್ಳಿ ಗ್ರಾಮದ ದೊಡ್ಡಪ್ಪನ ಮನೆಯಲ್ಲಿ ಬೆಳೆಯುತ್ತಿದೆ.

‘ಅಪ್ಪ–ಅಮ್ಮನನ್ನು ತಂದುಕೊಡಲು ಸಾಧ್ಯವಾಗದಿದ್ದರೂ ಸ್ವಂತ ಮಗಳ ರೀತಿಯಲ್ಲೇ ಸಾಕಿ ಸಲಹುತ್ತಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಸಮಾಜ, ರಾಜ್ಯ ನಮ್ಮ ಮಗುವಿಗೆ ಪ್ರೀತಿ ತೋರಿಸಿದೆ. ಸರ್ಕಾರ ಕೂಡ ಬೆಂಬಲವಾಗಿ ನಿಂತಿದೆ. ಪ್ರತಿ ತಿಂಗಳು ತಪ್ಪದೇ ಪೋಷಣಾ ಧನ ಬರುತ್ತಿದೆ’ ಎಂದು ಮಗುವಿನ ದೊಡ್ಡಪ್ಪ ಮಂಜು ತಿಳಿಸಿದರು.

ಮದ್ದೂರು ತಾಲ್ಲೂಕಿನ 16 ವರ್ಷದ ಬಾಲಕಿ ದ್ವಿತೀಯ ಪಿಯುಸಿ ಓದುತ್ತಿದ್ದು ಅಜ್ಜಿಯ ಮನೆಯಲ್ಲಿ ಬೆಳೆಯುತ್ತಿದ್ದಾರೆ. ಮದ್ದೂರಿನ ಮತ್ತೊಬ್ಬ ಬಾಲಕನಿಗೆ 14 ವರ್ಷವಾಗಿದ್ದು 8ನೇ ತರಗತಿ ಕಲಿಯುತ್ತಿದ್ದಾನೆ. ಇಬ್ಬರಿಗೂ ಪೋಷಣಾ ಧನ ಸಂದಾಯವಾಗುತ್ತಿದೆ. ಮಗು ಹಾಗೂ ಪೋಷಣಾ ಜವಾಬ್ದಾರಿ ಹೊತ್ತಿರುವ ಸಂಬಂಧಿ ಸೇರಿ ಜಂಟಿ ಖಾತೆ ತೆರೆಯಲಾಗಿದ್ದು ಪ್ರತಿ ತಿಂಗಳ ಹಣ ಜಮೆ ಮಾಡಲಾಗುತ್ತಿದೆ.

8ನೇ ತರಗತಿ ಓದುತ್ತಿರುವ ಮಂಡ್ಯ ತಾಲ್ಲೂಕಿನ 12 ವರ್ಷದ ಬಾಲಕಿ, ಮಳವಳ್ಳಿ ತಾಲ್ಲೂಕಿನ 13 ವರ್ಷದ ಬಾಲಕ, 6ನೇ ತರಗತಿ ಕಲಿಯುತ್ತಿರುವ 11 ವರ್ಷದ ಬಾಲಕರಿಗೆ 2ನೇ ಹಂತದಲ್ಲಿ ಬಾಲಸೇವಾ ಯೋಜನೆಯಡಿ ಪರಿಹಾರ ದೊರೆಯಲಿದೆ. ಈ ಕುರಿತು ಕಡತಕ್ಕೆ ಈಗಾಗಲೇ ಅನುಮೋದನೆ ದೊರೆತಿದ್ದು ಜನವರಿಯಿಂದಲೇ ಪರಿಹಾರ ದೊರೆಯಲಿದೆ.

******

ಮದುವೆಗೆ ₹ 1 ಲಕ್ಷ ಸಹಾಯಧನ

ಬಾಲಸೇವಾ ಯೋಜನೆಯಡಿ ಮಕ್ಕಳಿಗೆ 18 ವರ್ಷ ತುಂಬುವವರೆಗೂ ಪೋಷಣಾ ಧನ ಸಂದಾಯವಾಗಲಿದೆ. ಅವರಿಗೆ ಸರ್ಕಾರ ಉಚಿತವಾಗಿ ಶಿಕ್ಷಣ ನೀಡಲಿದೆ. ಜೊತೆಗೆ ಅವರ ಮದುವೆಯ ಸಂದರ್ಭದಲ್ಲಿ ₹ 1 ಲಕ್ಷ ಹೆಚ್ಚುವರಿ ಸಹಾಯಧನ ಒದಗಿಸಲಿದೆ.

‘ಸರ್ಕಾರದ ಕಾಳಜಿ ಮೇರೆಗೆ ಬಾಲಸೇವಾ ಯೋಜನೆ ಜಾರಿಗೊಳಿಸಲಾಗಿದೆ. ಯಾವುದೇ ವ್ಯತ್ಯಯ ಉಂಟಾಗದಂತೆ ಪ್ರತಿ ತಿಂಗಳು ಪರಿಹಾರ ಹಣವನ್ನು ಸಂದಾಯ ಮಾಡಲಾಗುತ್ತಿದೆ’ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜ್‌ಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.