ADVERTISEMENT

ಮಂಡ್ಯ: ಗುತ್ತಿಗೆದಾರರಿಗೆ ಬಿಲ್‌ ಬಾಕಿ; ಡಿಸಿಎಫ್‌ ಕಚೇರಿಯ ಪೀಠೋಪಕರಣ ಜಪ್ತಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 12:21 IST
Last Updated 4 ಫೆಬ್ರುವರಿ 2026, 12:21 IST
   

ಮಂಡ್ಯ: ಅರಣ್ಯ ಪ್ರದೇಶದಲ್ಲಿ ತಂತಿ ಬೇಲಿ ಕಾಮಗಾರಿ ಮಾಡಿಕೊಟ್ಟಿದ್ದ ಗುತ್ತಿಗೆದಾರರಿಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಅರಣ್ಯ ಭವನದ (ಡಿಸಿಎಫ್‌ ಕಚೇರಿ) ಪೀಠೋಪಕರಣ ಮತ್ತು 14 ಕಂಪ್ಯೂಟರ್‌ಗಳು ಜಪ್ತಿ ಮಾಡಿದ ಘಟನೆ ಬುಧವಾರ ನಡೆಯಿತು.

ನಾಗಮಂಗಲ ತಾಲ್ಲೂಕಿನ ಮಲ್ಲೇಗೌಡನಹಳ್ಳಿಯ ಎಂ.ವೈ. ಸುರೇಶ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಗೌಡಹಳ್ಳಿ ಗ್ರಾಮದ ರಾಜಣ್ಣ ಜಿ.ಎನ್‌. ಗುತ್ತಿಗೆದಾರರಾಗಿದ್ದು, ಇವರಿಬ್ಬರೂ 2022ರಲ್ಲಿ ₹3.24 ಕೋಟಿ ವೆಚ್ಚದಲ್ಲಿ 51 ಕಿ.ಮೀ. ದೂರದವರೆಗೆ ತಂತಿಬೇಲಿ ಕಾಮಗಾರಿ ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಚೇರಿಗೆ ಬಿಲ್ ಪಾವತಿ ಮಾಡಲಾಗಿತ್ತು. ಆದರೆ ಹಣ ಪಾವತಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು.

ಇದರಿಂದ ಬೇಸತ್ತ ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ನಿಗದಿತ ಸಮಯದೊಳಗೆ ಹಣ ಪಾವತಿ ಮಾಡುವಂತೆ ಆದೇಶ ನೀಡಿದ್ದರೂ ಸಹ ಪಾವತಿ ಮಾಡಿರಲಿಲ್ಲ. ಮತ್ತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಜಪ್ತಿ ಆದೇಶ ತಂದಿದ್ದರು.

ಡಿಸಿಎಫ್‌ ರಘು ಅವರು ಹಣ ಪಾವತಿಗೆ ಸಮಯಾವಕಾಶ ಕೋರಿ, ಜಪ್ತಿ ಮಾಡದಂತೆ ಮನವಿ ಮಾಡಿದರು. ಸಂಧಾನಕ್ಕೆ ಒಪ್ಪದ ಗುತ್ತಿಗೆದಾರರು ಕಚೇರಿ ಪೀಠೋಪಕರಣಗಳನ್ನು ಜಪ್ತಿ ಮಾಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.