ADVERTISEMENT

ಮಂಡ್ಯ | ವೈದ್ಯೆ ಸೇರಿ 15 ಮಂದಿಗೆ ಕೋವಿಡ್‌ ದೃಢ

ಸೋಂಕಿತರ ಸಂಖ್ಯೆಯಲ್ಲಿ ಸಮಬಲ ಸಾಧಿಸಿದ ಯಾದಗಿರಿ, ಮಂಡ್ಯ ಜಿಲ್ಲೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 17:35 IST
Last Updated 1 ಜೂನ್ 2020, 17:35 IST
ಕೋವಿಡ್‌ನಿಂದ ಗುಣಮುಖರಾದರನ್ನು ಮನೆಗೆ ಕಳುಹಿಸಲಾಯಿತು
ಕೋವಿಡ್‌ನಿಂದ ಗುಣಮುಖರಾದರನ್ನು ಮನೆಗೆ ಕಳುಹಿಸಲಾಯಿತು   

ಮಂಡ್ಯ: ಜಿಲ್ಲೆಯಲ್ಲಿ ವೈದ್ಯೆ ಸೇರಿದಂತೆ ಸೋಮವಾರ 15 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ರೋಗಿಗಳ ಸಂಖ್ಯೆ 285ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.

ಕೆ.ಆರ್‌.ಪೇಟೆಯ ಕ್ವಾರಂಟೈನ್‌ ಕೇಂದ್ರದಲ್ಲಿ ಚಿಕಿತ್ಸೆ ನೀಡುತ್ತಿದ್ದ 64 ವರ್ಷದ ವೈದ್ಯೆಗೆ ಕೊರೊನಾ ದೃಢಪಟ್ಟಿದೆ. ಮುಂಬೈನಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿ ಇದ್ದವರಿಗೆ ಕಳೆದ ಎರಡು ವಾರಗಳಿಂದ ಚಿಕಿತ್ಸೆ ನೀಡುತ್ತಿದ್ದರು. ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಸೋಂಕು ತಗುಲಿದ್ದು, ನಿಗದಿತ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾ ಫ್ರಂಟ್‌ಲೈನ್‌ ವಾರಿಯರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಪೊಲೀಸ್‌ ಒಬ್ಬರಿಗೆ, ಮಳವಳ್ಳಿಯಲ್ಲಿ ಸಿಡಿಪಿಒಗೆ ಈ ಹಿಂದೆ ಸೋಂಕು ತಗುಲಿತ್ತು. ನಂತರ ದಿನಗಳಲ್ಲಿ ಎಚ್ಚರ ವಹಿಸಲಾಗಿತ್ತು. ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್‌ಗೆ ಕೋವಿಡ್‌ ದೃಢಪಟ್ಟ ಮೂರನೇ ಪ್ರಕರಣ ಇದಾಗಿದ್ದು, ಇವರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗುತ್ತಿದೆ.

ADVERTISEMENT

ಕೆ.ಆರ್‌.ಪೇಟೆ ತಾಲ್ಲೂಕಿನ ವೈದ್ಯೆ, ನಾಗಮಂಗಲ ತಾಲ್ಲೂಕಿನ ನಾಲ್ವರು, ಪಾಂಡವಪುರ ತಾಲ್ಲೂಕಿನ ಒಬ್ಬರಿಗೆ ಸೋಂಕು ದೃಢಪಟ್ಟಿದ್ದು, 9 ಮಂದಿ ಮುಂಬೈನಿಂದ ಬಂದವರಾಗಿದ್ದಾರೆ. ಇವರಲ್ಲಿ 10 ಪುರುಷರು, ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದೆ. ಇವರನ್ನು ನಗರದ ಮಿಮ್ಸ್‌ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

3,238ರಿಂದ 3244ರವರೆಗೆ ಹಾಗೂ 3,316 ರಿಂದ 3,323 ರವರೆಗಿನ ರೋಗಿಗಳಾಗಿ ಜಿಲ್ಲೆಯ ಜನರು ಗುರುತಿಸಿಕೊಂಡಿದ್ದಾರೆ. 3238ನೇ ರೋಗಿಯು 20ವರ್ಷದ ಯುವಕನಾಗಿದ್ದು, ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ. ಆತನನ್ನು ಪರೀಕ್ಷಿಸಿದಾಗ ಕೋವಿಡ್‌ ದೃಢಪಟ್ಟಿದೆ. ಪ್ರಯಾಣದ ಹಿನ್ನೆಲೆ ಅಥವಾ ಸಂಪರ್ಕಿತರ ಹಿನ್ನೆಲೆಯನ್ನು ಪತ್ತೆ ಹಚ್ಚಲಾಗುತ್ತಿದೆ. ಉಳಿದಂತೆ ಎಲ್ಲರೂ ಮುಂಬೈನಿಂದ ಆಗಮಿಸಿದವರಾಗಿದ್ದಾರೆ.

ಮಂಡ್ಯ ಜಿಲ್ಲೆಗೆ ಮುಂಬೈನಿಂದ ಆಗಮಿಸಿದವರಿಗೆ 14 ದಿನಗಳು ಕಳೆಯುತ್ತಿದ್ದಂತೆ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದ್ದು, ಪ್ರಾರಂಭದಲ್ಲಿ ಸೋಂಕು ಇರುವುದು ಗೊತ್ತಾಗುತ್ತಿರಲಿಲ್ಲ. ನಂತರ ಎರಡು, ಮೂರು ಬಾರಿ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಕೊರೊನಾ ದೃಢಪಡುತ್ತಿದೆ.

ಇನ್ನೂ 610 ಮಂದಿಯ ಫಲಿತಾಂಶ ಬರುವ ನಿರೀಕ್ಷೆ ಇದ್ದು, ಸೋಂಕಿತರ ಸಂಖ್ಯೆ ಏರುವ ಸಾಧ್ಯತೆ ಇದೆ. ಕಳೆದ ಒಂದು ವಾರದಿಂದ ಕಡಿಮೆ ಇದ್ದ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಿತ್ಯ 20ರ ಒಳಗೆ ಸೋಂಕುಗಳು ದೃಢಪಡುತ್ತಿವೆ.

ಸೋಂಕಿತರ ಸಂಖ್ಯೆಯಲ್ಲಿ ಮಂಡ್ಯ, ಯಾದಗಿರಿ ಸಮಬಲ: ಸೋಂಕಿತರ ಪ್ರಕರಣಗಳಲ್ಲಿ ಎರಡನೇ ಸ್ಥಾನದಲ್ಲಿದ್ದ ಮಂಡ್ಯ ಭಾನುವಾರ ನಾಲ್ಕನೇ ಸ್ಥಾನದಲ್ಲಿತ್ತು. ಸೋಮವಾರ ಯಾದಗಿರಿ, ಮಂಡ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 285ಕ್ಕೆ ಏರಿದ್ದು, ಸಮಬಲ ಸಾಧಿಸಿ ಮೂರನೇ ಸ್ಥಾನ ಪಡೆದಿದೆ. ಒಟ್ಟು ಸೋಂಕಿತರಲ್ಲಿ ಬೆಂಗಳೂರು (385), ಕಲಬುರಗಿ (305), ಯಾದಗಿರಿ, ಮಂಡ್ಯ (285) ಕ್ರಮವಾಗಿ ಸ್ಥಾನ ಪಡೆದಿದೆ.

ಸಕ್ರಿಯ ಪ್ರಕರಣಗಳಲ್ಲಿ ಯಾದಗಿರಿ (257) ಮೊದಲ ಸ್ಥಾನ ಪಡೆದರೆ ಮಂಡ್ಯ (224) ಎರಡನೇ ಸ್ಥಾನ ಪಡೆದಿದೆ. ಕಲಬುರಗಿ (170) ಮೂರು ಹಾಗೂ ಬೆಂಗಳೂರು ನಗರ (136) ನಾಲ್ಕನೇ ಸ್ಥಾನ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.