
ಮಂಡ್ಯ: ‘ಸ್ವಾತಂತ್ರ್ಯ ನಂತರ 8ನೇ ಜನಗಣತಿ ನಡೆಯುತ್ತಿದೆ. ಡಿಜಿಟಲ್ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಮೊದಲ ಗಣತಿಯಾಗಿದೆ. ಆನ್‌ಲೈನ್‌ನಲ್ಲಿ ಮಾಹಿತಿ ಅಪ್‌ಲೋಡ್ ಆಗುವುದರಿಂದ ತಿದ್ದುಪಡಿ ಮಾಡಲು ಅವಕಾಶವಿಲ್ಲ. ಆದ್ದರಿಂದ ಗಣತಿದಾರರು ಅತ್ಯಂತ ಎಚ್ಚರಿಕೆಯಿಂದ ದಾಖಲೆಗಳನ್ನು ನಮೂದಿಸಬೇಕು’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜನಗಣತಿ ಕಾರ್ಯದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೋಮವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಜನಗಣತಿಯು 2 ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ 2026ರ ಏಪ್ರಿಲ್ 16ರಿಂದ ಮೇ 15ರವರೆಗೆ ಮನೆ ಪಟ್ಟಿ ಕ್ಷೇತ್ರ ಕಾರ್ಯ ನಡೆಯಲಿದೆ ಹಾಗೂ ಎರಡನೇ ಹಂತದ ಜನಗಣತಿಯು 2027ರ ಫೆಬ್ರವರಿ 1ರಿಂದ ಫೆಬ್ರವರಿ 28ರವರೆಗೆ ನಡೆಯಲಿದೆ ಎಂದು ತಿಳಿಸಿದರು.
‘ಜನಗಣತಿ ಕಾರ್ಯಕ್ಕೆ ನಿಯೋಜಿಸಿರುವ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅತ್ಯಂತ ಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ದೇಶದಲ್ಲಿ ಅತ್ಯಂತ ತಳಮಟ್ಟದಿಂದ ಮಾಹಿತಿ ಸಂಗ್ರಹಿಸುವ ಏಕೈಕ ಕಾರ್ಯಕ್ರಮ ಇದಾಗಿದೆ. ಮುಂದಿನ 10 ವರ್ಷ ದೇಶದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಈ ದಾಖಲೆ ಬಳಕೆಯಾಗಲಿದೆ ಎಂದರು.
ಜನಗಣತಿಯು ರಾಷ್ಟ್ರೀಯ ಮಟ್ಟದ ಪ್ರಮುಖ ಕಾರ್ಯವಾಗಿದ್ದು, ಚುನಾವಣಾ ಕೆಲಸದಷ್ಟೇ ಗಂಭೀರವಾದುದು. ಅಧಿಕಾರಿಗಳ ನಡುವೆ ಸಮರ್ಪಕ ಸಮನ್ವಯತೆ ಇರಬೇಕು. ಸಿ.ಎಂ.ಎಂ.ಎಸ್ ಮತ್ತು ಮೊಬೈಲ್ ಆ್ಯಪ್‌ಗಳ ಬಳಕೆಯಾಗಲಿದೆ ಎಂದು ತಿಳಿಸಿದರು.
ಜನಗಣತಿ ಕಾರ್ಯಕ್ಕೆ ನಿಯೋಜಿಸುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಗದಿತ ಅವಧಿಯೊಳಗೆ ಗಣತಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವನಂದಾಮೂರ್ತಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ಶ್ರೀನಿವಾಸ್ ಹಾಗೂ ಧನ್ಯ, ಕುಲದೀಪ್ ಯಾದವ್ ಹಾಗೂ ರಮೇಶ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.