ADVERTISEMENT

ಅರಸ ಮೇಲಲ್ಲ, ಅಗಸ ಕೀಳಲ್ಲ | ಕಾಯಕ ಸಮಾನತೆ ಸಾರಿದ್ದ ಮಾಚಿದೇವ: DC ಕುಮಾರ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 5:22 IST
Last Updated 19 ಫೆಬ್ರುವರಿ 2026, 5:22 IST
ಡಿ.ದೇವರಾಜ ಅಸರು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಮಂಡ್ಯ ನಗರದ ಜೆ.ಸಿ. ವೃತ್ತದಲ್ಲಿ ಬುಧವಾರ ನಡೆದ ಮಡಿವಾಳ ಮಾಚಿದೇವರ ಜಯಂತ್ಯುತ್ಸವದಲ್ಲಿ ಜಿಲ್ಲಾಧಿಕಾರಿ ಕುಮಾರ ಮಾತನಾಡಿದರು 
ಡಿ.ದೇವರಾಜ ಅಸರು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಮಂಡ್ಯ ನಗರದ ಜೆ.ಸಿ. ವೃತ್ತದಲ್ಲಿ ಬುಧವಾರ ನಡೆದ ಮಡಿವಾಳ ಮಾಚಿದೇವರ ಜಯಂತ್ಯುತ್ಸವದಲ್ಲಿ ಜಿಲ್ಲಾಧಿಕಾರಿ ಕುಮಾರ ಮಾತನಾಡಿದರು    

ಮಂಡ್ಯ: ‘12ನೇ ಶತಮಾನದಲ್ಲಿ ಸಾಮಾಜಿಕ ಸಮಾನತೆ ಸಾರಿದ ಮಾಚಿದೇವರ ತತ್ವ, ಆದರ್ಶ, ಚಿಂತನೆಗಳನ್ನು ಅಳವಡಿಸಿಕೊಂಡು ಮುಂದಿನ ತಲೆಮಾರಿಗೂ ಪರಿಚಯಿಸಬೇಕು’ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.

ಡಿ. ದೇವರಾಜ ಅಸರು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ನಗರದ ಜೆ.ಸಿ. ವೃತ್ತದಲ್ಲಿ ಬುಧವಾರ ನಡೆದ ವಚನ ಸಂರಕ್ಷಕ ಮಡಿವಾಳ ಮಾಚಿದೇವರ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ಅರಸ ಮೇಲಲ್ಲ, ಅಗಸ ಕೀಳಲ್ ಎಂಬ ಸಂದೇಶವನ್ನು ನೀಡುವ ಮೂಲಕ ಮಾಚಿದೇವರು ಕಾಯಕ ಸಮಾನತೆಯನ್ನು ಸಾರಿದ್ದಾರೆ. ವೃತ್ತಿಯಿಂದ ಯಾವುದೇ ವ್ಯಕ್ತಿ ಮೇಲಾಗಲು ಅಥವಾ ಕೀಳಾಗಲು ಸಾಧ್ಯವಿಲ್ಲ ಎಂಬುದನ್ನು ವಚನ ಸಾಹಿತ್ಯದ ಮೂಲಕ ತಿಳಿಸಿದ್ದಾರೆ. ಮಾಡಬಾರದ್ದನ್ನೆಲ್ಲಾ ಮಾಡಿ, ದೇವಸ್ಥಾನಕ್ಕೆ ತೆರಳಿ ಹರಕೆ, ಪೂಜೆ ಸಲ್ಲಿಸಿದರೆ ಪ್ರಯೋಜನವಿಲ್ಲ. ಮಾಡುವ ಕೆಲಸದಲ್ಲಿ ನಿಷ್ಠೆ, ಪ್ರಾಮಾಣಿಕತೆ ಇದ್ದರೆ ಭಗವಂತ ಒಳ್ಳೆಯದನ್ನು ಮಾಡುತ್ತಾರೆ. ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ನಮ್ಮ ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

ADVERTISEMENT

ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ನಾಗೇಂದ್ರಕುಮಾರ್ ಮಾತನಾಡಿ, ‘ಜಾತಿ ಮತ್ತು ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಿ ಕಾಯಕ ಸಮಾನತೆಯನ್ನು ಉಂಟು ಮಾಡುವಲ್ಲಿ 12ನೇ ಶತಮಾನದ ಶರಣರ ಪಾತ್ರ ಮಹತ್ವವಾದದ್ದು. ಅದರಲ್ಲೂ ವಿಶೇಷವಾಗಿ ಮಾಚಿದೇವರು ವಚನಗಳನ್ನು ಸಂರಕ್ಷಣೆ ಮಾಡುವ ಮೂಲಕ ತಮ್ಮ ಪೌರುಷವನ್ನು ಪ್ರದರ್ಶಿಸಿದ್ದಾರೆ’ ಎಂದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಮಾತನಾಡಿ, ‘ಯಾವುದೇ ಶರಣರು ಜಾತಿಗೆ ಸೀಮಿತವಾಗಬಾರದು. ಅವರ ವಿಚಾರ ಚಿಂತನೆಗಳು ಸಾರ್ವತ್ರೀಕರಣಗೊಳ್ಳಬೇಕು’ ಎಂದರು. 

ಮುಡಾ ಅಧ್ಯಕ್ಷ ಬಿ.ಪಿ. ಪ್ರಕಾಶ್, ವಿವಿಧ ಸಂಘಟನೆಗಳ ಮುಖಂಡರಾದ ಎಚ್.ಡಿ. ಜಯರಾಂ, ಎಂ.ಕೃಷ್ಣ, ಮಾ.ಸೋ. ಚಿದಂಬರ್, ಡಿ. ರಮೇಶ್, ಎಂ. ವಿನಯ್‍ಕುಮಾರ್, ಬಿ. ಲಿಂಗಯ್ಯ, ಬಿ.ಟಿ. ಗುರುರಾಜ್, ಜಯರಾಮು, ರಾಜಣ್ಣ, ದಾಸಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.