ಮಂಡ್ಯ: ‘ದೇಶವನ್ನು ಕುಷ್ಠರೋಗ ಮುಕ್ತವಾಗಿಸಿ, ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಕನಸಾಗಿತ್ತು’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳ ಕಚೇರಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸೆ.8ರಿಂದ 24ರವರೆಗೆ ಕುಷ್ಠರೋಗ ಪ್ರಕರಣಗಳನ್ನು ಪತ್ತೆ ಹಚ್ಚುವ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 24 ಕುಷ್ಠರೋಗ ಪ್ರಕರಣಗಳು ಪತ್ತೆಯಾಗಿದ್ದು, 24 ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ಹಂತದಲ್ಲೇ ಕುಷ್ಠ ರೋಗವನ್ನು ಪತ್ತೆ ಹಚ್ಚಿದರೆ, ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಕುಷ್ಠರೋಗದ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ ಎಂದು ತಿಳಿಸಿದರು.
ಸೆ.8ರಿಂದ 24ರವರೆಗೆ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಕಳೆದ 5 ವರ್ಷಗಳಲ್ಲಿ ಕುಷ್ಠರೋಗ ಹೆಚ್ಚಾಗಿ ಪತ್ತೆಯಾಗಿರುವ 100 ಹಳ್ಳಿಗಳಲ್ಲಿ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನ ಇದಾಗಿದ್ದು 40,529 ಮನೆಗಳಿಗೆ ಭೇಟಿ ನೀಡಿ 1.66 ಲಕ್ಷ ಜನರನ್ನು ತಪಾಸಣೆ ಮಾಡುವ ಗುರಿ ಹೊಂದಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಮೋಹನ್, ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ ಇದ್ದರು.
5 ವರ್ಷಗಳಲ್ಲಿ ಕುಷ್ಠರೋಗ ಹೆಚ್ಚಾಗಿ ಪತ್ತೆಯಾಗಿರುವ 100 ಹಳ್ಳಿಗಳಲ್ಲಿ ಆಂದೋಲನ ನಡೆಯಲಿದೆ. 40529 ಮನೆಗಳಿಗೆ ಭೇಟಿ ನೀಡಿ 1.66 ಲಕ್ಷ ಜನರನ್ನು ತಪಾಸಣೆ ಮಾಡುವ ಗುರಿಯಿದೆ.– ಕುಮಾರ, ಜಿಲ್ಲಾಧಿಕಾರಿ
ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ನಿರ್ಗತಿಕರಿಗೆ ಆರೈಕೆ ಮತ್ತು ಚೇತರಿಕೆ ಕೇಂದ್ರ ತೆರೆಯಲು ಮಿಮ್ಸ್‌ನಲ್ಲಿ ಜಾಗ ಗುರುತಿಸಲಾಗಿದೆ. ಎನ್.ಜಿ.ಒ. ಸಂಘ ಸಂಸ್ಥೆಗಳಿಂದ ಟೆಂಡರ್ ಕರೆಯಲಾಗಿದೆ.– ಸೋಮಶೇಖರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ
ಆಂದೋಲನಕ್ಕೆ 290 ತಂಡ ರಚನೆ
ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಸಲುವಾಗಿ 290 ತಂಡಗಳನ್ನು ರಚಿಸಲಾಗಿದೆ. ತಂಡಗಳನ್ನು ಉಸ್ತುವಾರಿ ನೋಡಿಕೊಳ್ಳಲು 14 ಜನರನ್ನು ನೇಮಕಗೊಳಿಸಲಾಗಿದೆ. ಇದರ ಕುರಿತಾಗಿ ಹೆಚ್ಚಿನ ಜನರಿಗೆ ತಿಳಿಯಬೇಕು. ಕುಷ್ಠರೋಗದ ಕುರಿತು ಶಾಲಾ ಮಕ್ಕಳಿಗೆ ವಸತಿ ಶಾಲಾ ಮಕ್ಕಳಿಗೆ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು. ‘ಕುಷ್ಠರೋಗದ ಕುರಿತು ಮೂಢನಂಬಿಕೆ ಬೇಡ ಅಧಿಕಾರಿಗಳು ಕುಷ್ಠರೋಗದ ಕುರಿತು ಇರುವ ವೈಜ್ಞಾನಿಕ ಸಂಗತಿಗಳು ಹಾಗೂ ಸೂಕ್ತ ಕಾಲದಲ್ಲಿ ಚಿಕಿತ್ಸೆ ಕೊಡಿಸುವುದರ ಕುರಿತು ಸಾರ್ವಜನಿಕರಿಗೆ ತಿಳಿಸಿ. ಕುಷ್ಠರೋಗಕ್ಕೆ ತುತ್ತಾದ ವ್ಯಕ್ತಿಯನ್ನು ಸಮಾಜ ಬೇರೆಯ ರೀತಿಯಲ್ಲಿ ನೋಡುತ್ತದೆ. ಪ್ರೀತಿ ವಾತ್ಸಲ್ಯದಿಂದ ಕುಷ್ಠರೋಗಿಗಳನ್ನು ಕಾಣಬೇಕು’ ಎಂದು ಅರಿವು ಮೂಡಿಸಿ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.