ಮಂಡ್ಯ: ‘ಜಿಲ್ಲೆಯಲ್ಲಿ ಮನೆ- ಮನೆಗೆ ಹೋಗಿ ಇ- ಖಾತಾ ಅಭಿಯಾನವನ್ನು ಚುರುಕುಗೊಳಿಸಿ’ ಎಂದು ಜಿಲ್ಲಾಧಿಕಾರಿ ಕುಮಾರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ನಗರ ಅಭಿವೃದ್ಧಿ ಕುರಿತು ಸಭೆ ನಡೆಸಿ ಮಾತನಾಡಿದರು.
ಸಾರ್ವಜನಿಕರಲ್ಲಿ ಮಾಹಿತಿಯ ಕೊರತೆಯಿದ್ದು, ಜಿಲ್ಲೆಯಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ ಮತ್ತು ಜಿಲ್ಲೆಯಲ್ಲಿ ಬಾಕಿಯಿರುವ ಇ-ಖಾತೆಗಳನ್ನು ವಾರಕ್ಕೊಂದು ವಾರ್ಡ್ ಎಂಬಂತೆ ಮನೆ-ಮನೆಗೆ ತಲುಪಿ ಅಭಿಯಾನ ನಡೆಸಬೇಕು. ಅಧಿಕಾರಿಗಳು ನಿರೀಕ್ಷಿತ ಗುರಿ ತಲುಪದಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ವಸತಿ ರಹಿತರ ಪಟ್ಟಿ ತಯಾರಿಸಿ ನಿವೇಶನಕ್ಕಾಗಿ ಸ್ಥಳ ಪರಿಶೀಲಿಸಿ ಮತ್ತು ಈಗಾಗಲೇ ಅನುಮೋದನೆ ಪಡೆದಿರುವ ವಸತಿ ನಿರ್ಮಾಣದಲ್ಲಿ ಬಾಕಿಯಿರುವ ಕೆಲಸಗಳನ್ನು ಶೀಘ್ರದಲ್ಲಿ ಸಂಪೂರ್ಣಗೊಳಿಸಿ. ಕಡ್ಡಾಯವಾಗಿ ಪ್ರತಿ ಇಲಾಖೆಯ ಅಭಿವೃದ್ಧಿ ಕುರಿತು ಪತ್ರಿಕೆಯಲ್ಲಿ ಮಾಹಿತಿ ಪ್ರಕಟಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪೌರಕಾರ್ಮಿಕರಿಗೆ ಸವಲತ್ತುಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದ್ದು, ಪೌರಕಾರ್ಮಿಕರಿಗೆ ಸುರಕ್ಷತಾ ಉಪಕರಣಗಳನ್ನು ಕಡ್ಡಾಯವಾಗಿ ನೀಡಿ, ಬಳಕೆ ಮಾಡಲು ತಿಳಿಸಬೇಕು. ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸುವಲ್ಲಿ ಕ್ರಮಕೈಗೊಳ್ಳಿ. ವಿಮೆ ಮತ್ತು ಇ.ಎಸ್.ಐ, ಪಿ.ಎಫ್. ಸೌಲಭ್ಯದ ಜತೆಗೆ ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ವಸತಿ ಸೌಲಭ್ಯವನ್ನು ಒದಗಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕ ಶೌಚಾಲಯದ ಸ್ವಚ್ಛತೆ ಕಡೆಗೆ ಗಮನ ವಹಿಸಿ ಮತ್ತು ಕಸ ವಿಲೇವಾರಿಯಲ್ಲಿ ಸಮಸ್ಯೆ ಕಂಡುಬಡಿದ್ದು, ಒಣ ಕಸ, ಹಸಿಕಸ ಬೇರ್ಪಡಿಸುವಲ್ಲಿ ಮತ್ತು ಕಸ ಸಂಗ್ರಹ, ವಿಲೇವಾರಿಯಲ್ಲಿ ಶಿಸ್ತಿನಿಂದ ಕೆಲಸ ನಿರ್ವಹಿಸಿ ಎಂದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಟಿ.ಎನ್. ನರಸಿಂಹಮೂರ್ತಿ, ನಗರಸಭೆ ಆಯುಕ್ತ ಯು.ಪಿ. ಪಂಪಶ್ರೀ, ಎಂಜಿನಿಯರ್‌ಗಳಾದ ರುದ್ರೇಗೌಡ ಮತ್ತು ಪ್ರತಾಪ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.