ಮಂಡ್ಯ: ‘ರೈತರ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸಭೆ ಕರೆದು ಪರಿಹರಿಸದಿದ್ದರೆ ಆ.15ರಂದು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣಕ್ಕೆ ಅವಕಾಶ ನೀಡುವುದಿಲ್ಲ, ಜೊತೆಗೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಎಚ್ಚರಿಸಿದರು.
‘ರೈತರೇ ಈ ದೇಶದ ಬೆನ್ನೆಲುಬು ಎಂಬುದನ್ನು ಎಲ್ಲ ರಾಜಕೀಯ ಪಕ್ಷಗಳು ಹೇಳುತ್ತವೆ. ಆದರೆ ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ ರೈತರ ಸಮಸ್ಯೆಗಳನ್ನು ಯಾವುದೇ ರಾಜಕೀಯ ಪಕ್ಷಗಳಾಗಲಿ ಅಥವಾ ಅಧಿಕಾರಿಗಳಾಗಲಿ ಪರಿಹರಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು.
‘ರಾತ್ರೋರಾತ್ರಿ ರಾಜಕೀಯ ಸಮಾವೇಶಕ್ಕೆ ಹತ್ತಾರು ಜೆಸಿಬಿ, ಟ್ರ್ಯಾಕ್ಟರ್‌ಗಳು ಸೇರಿದಂತೆ ಯಂತ್ರೋಪಕರಣಗಳನ್ನು ಬಳಸಿಕೊಂಡು ಪೆಂಡಾಲ್ ನಿರ್ಮಿಸಿ ಮಾಡಿ ಸುತ್ತಮುತ್ತಲ ಪ್ರದೇಶವನ್ನು ಸಮತಟ್ಟು ಮಾಡಿ ಸಮಾವೇಶ ಮಾಡುತ್ತೀರಿ, ಆದರೆ ನಾಲಾ ಆಧುನೀಕರಣದ ಹೆಸರಿನಲ್ಲಿ ಮಾತ್ರ ರಾಜಕೀಯ ಮಾಡಿ ವಿಳಂಬ ಅನುಸರಿಸುತ್ತೀರಾ, ಇದರಿಂದ ಕೆಆರ್‌ಎಸ್ ಅಣೆಕಟ್ಟೆಯಿಂದ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸಿ, ಕಾವೇರಿ ನೀರನ್ನು ವ್ಯಥಾಸುಮ್ಮನೆ ಸಮುದ್ರದ ಪಾಲು ಮಾಡುತ್ತಿದ್ದೀರಾ’ ಎಂದು ಕಿಡಿಕಾರಿದರು.
‘ಜಿಲ್ಲೆಯ ಕೊನೆ ಭಾಗವಾದ ಮದ್ದೂರು, ಕೊಪ್ಪ, ಮಳವಳ್ಳಿ ನಾಲೆಗಳಿಗೆ ನೀರು ಹರಿಸದೆ ರೈತರಿಗೆ ಅನ್ಯಾಯ ಮಾಡಿದ್ದಾರೆ. ಇನ್ನೂ ಮೈಷುಗರ್ ಕಾರ್ಖಾನೆಯ ವಿಚಾರಕ್ಕೆ ಬಂದರೆ ಒಪ್ಪಿಗೆ ಕಬ್ಬನ್ನು ಸರಿಯಾದ ಸಮಯದಲ್ಲಿ ನುರಿಸದೆ ವಿಳಂಬ ಮಾಡುತ್ತಿರುವ ಅಧ್ಯಕ್ಷರು ಕಾರ್ಖಾನೆಯ ಅಧಿಕಾರಿಗಳ ಜೊತೆ ಶಾಮೀಲಾಗಿ ಭ್ರಷ್ಟಾಚಾರದಲ್ಲಿ ತೊಡಗಿರುವಂತೆ ಕಾಣುತ್ತಿದೆ’ ಎಂದು ಆರೋಪಿಸಿದರು.
ರೈತ ಸಂಘದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ, ‘ಹದಗೆಟ್ಟ ಶಿಕ್ಷಣ ವ್ಯವಸ್ಥೆ ಬಗ್ಗೆ ಸಚಿವರು ಗಮನ ಹರಿಸುತ್ತಿಲ್ಲ, 10 ವರ್ಷಗಳಿಂದ ಮುಚ್ಚಿರುವ 351 ಸರ್ಕಾರಿ ಶಾಲೆಗಳನ್ನು ತೆರೆಯಬೇಕು. ಇದರಿಂದ ಬಡ ಮಕ್ಕಳಿಗೆ ಅನುಕೂಲವಾಗುತ್ತದೆ. ನೀವು ಸಹ ನಿರ್ಲಕ್ಷ್ಮ ಮಾಡಿದರೆ ನಾವೆಲ್ಲರೂ ನಿಮ್ಮ ಮುಖಕ್ಕೆ ಶಿಕ್ಷಣ ಸಚಿವ ಎನ್ನುವುದನ್ನು ನೋಡದೇ ಮುಖಕ್ಕೆ ಮಸಿ ಬಳಿಯುತ್ತೇವೆ’ ಎಂದು ಎಚ್ಚರಿಸಿದರು.
ರೈತ ಸಂಘದ ತಾಲ್ಲೂಕು ಗೌರವ ಅಧ್ಯಕ್ಷ ಶಿವಳ್ಳಿ ಚಂದ್ರಶೇಖರ್, ಮುಖಂಡರಾದ ಬೋರಲಿಂಗೇಗೌಡ ಪಣಕನಹಳ್ಳಿ, ಶಿವರಾಮ್ ಹಲ್ಲೇಗೆರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.