ADVERTISEMENT

ಮಂಡ್ಯ | 'ಮೈಷುಗರ್ ಖಾಸಗೀಕರಣಕ್ಕೆ ಆಗ್ರಹ

ತಾಲ್ಲೂಕಿನ ವಿವಿಧ ಗ್ರಾಮದ ರೈತರಿಂದ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 5:53 IST
Last Updated 30 ಆಗಸ್ಟ್ 2025, 5:53 IST
ಮೈಷುಗರ್‌ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಬೇಕೆಂದು ಆಗ್ರಹಿಸಿ ಮಂಡ್ಯ ತಾಲ್ಲೂಕು  ರೈತರು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರ ಮೂಲಕ ಶಾಸಕ ಪಿ.ರವಿಕುಮಾರ್‌ಗೌಡ ಮತ್ತು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು
ಮೈಷುಗರ್‌ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಬೇಕೆಂದು ಆಗ್ರಹಿಸಿ ಮಂಡ್ಯ ತಾಲ್ಲೂಕು  ರೈತರು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರ ಮೂಲಕ ಶಾಸಕ ಪಿ.ರವಿಕುಮಾರ್‌ಗೌಡ ಮತ್ತು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು   

ಮಂಡ್ಯ: ಮೈಷುಗರ್‌ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಿ ಮಂಡ್ಯ ತಾಲ್ಲೂಕು ಕಬ್ಬು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಾಲ್ಲೂಕಿನ ವಿವಿಧ ಗ್ರಾಮದ ರೈತರು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರ ಮೂಲಕ ಶಾಸಕ ಪಿ.ರವಿಕುಮಾರ್‌ಗೌಡ ಮತ್ತು ಸರ್ಕಾರಕ್ಕೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.

ಮಂಡ್ಯ ತಾಲ್ಲೂಕಿನ ರೈತರ ಬಾಳಿಗೆ ಆಸರೆಯಾಗಿ ನಿಂತು ಅಭಿವೃದ್ಧಿಗೆ ಪೂರಕವಾಗಲೆಂದು ಬ್ರಿಟಿಷರ ಕಾಲದಲ್ಲಿ ಪ್ರಸಿದ್ಧ ವಿಜ್ಞಾನಿ ಕೋಲನ್ ನೇತೃತ್ವದಲ್ಲಿ ಮೈಸೂರು ಮಹಾರಾಜರು ಸ್ಥಾಪಿಸಿದ ಮೈಷುಗರ್ ಸಕ್ಕರೆ ಕಾರ್ಖಾನೆಗೆ ದಶಕಗಳಿಂದ ಗ್ರಹಣ ಹಿಡಿದಿದೆ. ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಖಾನೆ ನಡೆಸಲು ಪ್ರತೀ ವರ್ಷ ಅನುದಾನ ಬಿಡುಗಡೆ ಆಗುತ್ತಿದೆ. ಇಲ್ಲಿವರೆಗೂ ತೆರಿಗೆದಾರರ ದುಡ್ಡು ಸಾಕಷ್ಟು ಪ್ರಮಾಣದಲ್ಲಿ ವ್ಯಯವಾಗಿದ್ದರೂ ಸಹ ಕಬ್ಬು ಬೆಳೆದ ರೈತನಿಗೆ ಬೆಲೆಯಿಲ್ಲದಂತಾಗಿದೆ ಎಂದು ಆರೋಪಿಸಿದರು.

ತಾಲ್ಲೂಕಿನಲ್ಲಿ  8 ಲಕ್ಷ ಟನ್‌ ಕಬ್ಬು ಬೆಳೆಯಲಾಗುತ್ತಿದೆ. ಸಕ್ಕರೆ ಕಾರ್ಖಾನೆಯ ಅವ್ಯವಸ್ಥೆಯಿಂದಾಗಿ ಸಕಾಲದಲ್ಲಿ ಕಬ್ಬು ಕಟಾವಾಗುತ್ತಿಲ್ಲ. ಪ್ರತೀ ವರ್ಷ ಸರ್ಕಾರಿ ಅನುದಾನ ಪಡೆದು ಕೇವಲ ಎರಡು ಲಕ್ಷ ಟನ್ ಕಬ್ಬು ಅರೆಯುತ್ತಾರೆ.   ಕಾರ್ಖಾನೆಯೂ ಸರಿಯಾಗಿ  ನಡೆಯದೆ ಸಕ್ಕರೆ ಉತ್ಪಾದನೆಯೂ ಆಗದೆ  ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

 ಸಹಕಾರಿ-ಸರ್ಕಾರಿ ವ್ಯವಸ್ಥೆಯಿಂದ ಅವ್ಯವಸ್ಥೆಗೆ ಒಳಗಾಗಿದ್ದ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಷುಗರ್ ಕಂಪೆನಿಯವರಿಗೆ ಲೀಸ್ ನೀಡಿದಾಗ ಕಾರ್ಖಾನೆಯ ಸಮಸ್ಯೆ ಸರಿಪಡಿಸಿ ರೈತರ ಕಬ್ಬು ಸಕಾಲದಲ್ಲಿ ಕಟಾವು ಆಗಿ, ಕಬ್ಬಿನ ಹಣ ನೀಡುತ್ತಿರುವುದರಿಂದ ರೈತರಲ್ಲಿ ಮಂದಹಾಸ ಮೂಡಿದೆ. ಹಾಗಾಗಿ ಮೈಷುಗರ್‌ ಕಾರ್ಖಾನೆಯನ್ನೂ ಖಾಸಗಿಯವರಿಗೆ ವಹಿಸಬೇಕೆಂದು ಎಂದು ಒತ್ತಾಯಿಸಿದರು.

  ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು   ವ್ಯವಸ್ಥಿತ, ಸಕಾಲದಲ್ಲಿ ಹಣ ಪಾವತಿಸುವಂತಹ ಖಾಸಗಿ ಸಂಸ್ಥೆಗೆ ವಹಿಸಿದಲ್ಲಿ ಈ ಭಾಗದ ಕಬ್ಬು ಬೆಳೆಗಾರರು, ಕಬ್ಬು ಕಟಾವುದಾರರು ಹಾಗೂ ಸಾಗಾಣಿಕೆದಾರರಿಗೆ ನಿರಂತರ ಉದ್ಯೋಗ, ಸಂಪಾದನೆಗೆ ಲಭಿಸುತ್ತದೆ.   ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ರೈತರಾದ ಎಸ್.ರವಿ, ಶಿವಪ್ರಸಾದ್, ಕೃಷ್ಣ, ಸತೀಶ್, ಮಹದೇವಯ್ಯ, ಪವನ್, ಮಹೇಶ್, ಪ್ರಕಾಶ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.