ADVERTISEMENT

ಮಂಡ್ಯ ರೈತರಿಗೆ ನೀರಿನ ಬೆಲೆ ಗೊತ್ತಿಲ್ಲ: ಡಿಸಿಪಿ ಎ.ಎನ್‌. ಪ್ರಕಾಶ್‌ಗೌಡ ಹೇಳಿಕೆ

‘ಸಂಕ್ರಾಂತಿ ಸಂಭ್ರಮ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 1:22 IST
Last Updated 18 ಜನವರಿ 2021, 1:22 IST
ಶ್ರೀರಂಗಪಟ್ಟಣ ತಾಲ್ಲೂಕು ಪಾಲಹಳ್ಳಿಯಲ್ಲಿ ಭಾನುವಾರ ಪಿಇಎಸ್‌ ಕಾನೂನು ಕಾಲೇಜು ಹಿರಿಯ ಎನ್‌ಎಸ್‌ಎಸ್‌ ವೇದಿಕೆ ಹಾಗೂ ರಂಗನತಿಟ್ಟು ಕೃಷಿ ಉತ್ಪನ್ನ ಮತ್ತು ಮಾರುಕಟ್ಟೆ ಸಹಕಾರ ಸಂಘ ಭಾನುವಾರ ಏರ್ಪಡಿಸಿದ್ದ ‘ಸಂಕ್ರಾಂತಿ ಸಂಭ್ರಮ’ದಲ್ಲಿ ನಿವೃತ್ತ ನಗರ ಯೋಜನಾ ನಿರ್ದೇಶಕ ಪಿ.ಎಸ್‌. ನಟರಾಜ್‌ ಸಹಕಾರ ಸಂಘದ ಲಾಂಛನ ಅನಾವರಣ ಮಾಡಿದರು
ಶ್ರೀರಂಗಪಟ್ಟಣ ತಾಲ್ಲೂಕು ಪಾಲಹಳ್ಳಿಯಲ್ಲಿ ಭಾನುವಾರ ಪಿಇಎಸ್‌ ಕಾನೂನು ಕಾಲೇಜು ಹಿರಿಯ ಎನ್‌ಎಸ್‌ಎಸ್‌ ವೇದಿಕೆ ಹಾಗೂ ರಂಗನತಿಟ್ಟು ಕೃಷಿ ಉತ್ಪನ್ನ ಮತ್ತು ಮಾರುಕಟ್ಟೆ ಸಹಕಾರ ಸಂಘ ಭಾನುವಾರ ಏರ್ಪಡಿಸಿದ್ದ ‘ಸಂಕ್ರಾಂತಿ ಸಂಭ್ರಮ’ದಲ್ಲಿ ನಿವೃತ್ತ ನಗರ ಯೋಜನಾ ನಿರ್ದೇಶಕ ಪಿ.ಎಸ್‌. ನಟರಾಜ್‌ ಸಹಕಾರ ಸಂಘದ ಲಾಂಛನ ಅನಾವರಣ ಮಾಡಿದರು   

ಶ್ರೀರಂಗಪಟ್ಟಣ: ‘ಮಂಡ್ಯ ಜಿಲ್ಲೆಯಲ್ಲಿ ಯಥೇಚ್ಛವಾಗಿ ನೀರು ಸಿಗುತ್ತಿದ್ದು, ನೀರಿನ ಬೆಲೆ ಗೊತ್ತಿಲ್ಲದ ಇಲ್ಲಿನ ರೈತರು ನೀರನ್ನು ಪೋಲು ಮಾಡುತ್ತಿದ್ದಾರೆ’ ಎಂದು ಮೈಸೂರು ನಗರ ಉಪ ಪೊಲೀಸ್‌ ಆಯುಕ್ತ ಎ.ಎನ್‌. ಪ್ರಕಾಶ್‌ಗೌಡ ಹೇಳಿದರು.

ತಾಲ್ಲೂಕಿನ ಪಾಲಹಳ್ಳಿಯಲ್ಲಿ ಭಾನುವಾರ ಪಿಇಎಸ್‌ ಕಾನೂನು ಕಾಲೇಜು ಹಿರಿಯ ಎನ್‌ಎಸ್‌ಎಸ್‌ ವೇದಿಕೆ ಹಾಗೂ ರಂಗನತಿಟ್ಟು ಕೃಷಿ ಉತ್ಪನ್ನ ಮತ್ತು ಮಾರುಕಟ್ಟೆ ಸಹಕಾರ ಸಂಘ ಭಾನುವಾರ ಏರ್ಪಡಿಸಿದ್ದ ‘ಸಂಕ್ರಾಂತಿ ಸಂಭ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.

‘ಕೋಲಾರದಲ್ಲಿ 1500 ಅಡಿ ಆಳಕ್ಕೆ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟ. ಹೀಗಿದ್ದರೂ ಅಲ್ಲಿನ ರೈತರು ಉತ್ತಮ ಕೃಷಿ ಮಾಡುತ್ತಾರೆ. ಆದರೆ, ಮಂಡ್ಯ ರೈತರು ನೀರಿನ ಸಂಪತ್ತನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ಕೃಷಿ ಉತ್ಪನ್ನಗಳನ್ನು ಬೆಳೆಯುವ ರೈತರಿಗಿಂತ ಮಾರಾಟ ಮಾಡುವ ವ್ಯಾಪಾರಿ ಹೆಚ್ಚು ಲಾಭ ಗಳಿಸುತ್ತಿದ್ದಾನೆ. ಪೂರ್ಣ ಪ್ರಮಾಣದ ಲಾಭ ಸಿಕ್ಕರೆ ರೈತರ ಬದುಕು ಹಸನಾಗುತ್ತದೆ. ಹಾಗಾಗಬೇಕಾದರೆ ಸಹಕಾರಿ ತತ್ವದಡಿ ಕೃಷಿ ಚಟುವಟಿಕೆ ಮತ್ತು ಕೃಷಿ ಉತ್ಪನ್ನಗಳ ಮಾರಾಟ ನಡೆಯಬೇಕು. ಕೃಷಿ ಉತ್ಪನ್ನಗಳ ಮೌಲ್ಯ ವರ್ಧಿಸಿ ರೈತನೇ ಮಾರಾಟ ಮಾಡಬೇಕು. ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಿವೃತ್ತ ರಿಜಿಸ್ಟ್ರಾರ್‌ ಆರ್‌.ಚಂದ್ರಶೇಖರ್‌ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ನಗರ ಯೋಜನಾ ನಿರ್ದೇಶಕ ಪಿ.ಎಸ್‌.ನಟರಾಜ್‌ ಸಹಕಾರ ಸಂಘದ ಲಾಂಛನ ಅನಾವರಣ ಮಾಡಿದರು.

ಪಿ.ಡಿ.ತಿಮ್ಮಪ್ಪ ಪ್ರಾಸ್ತಾವಿಕ ಮಾತನಾಡಿದರು. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಲಿಂಗೇಗೌಡ ಸೋಂಪುರ, ಜನ ಚೇತನ ಟ್ರಸ್ಟ್‌ ಅಧ್ಯಕ್ಷ ಎ.ಎನ್‌. ಪ್ರಸನ್ನಗೌಡ, ತಾ.ಪಂ. ಸದಸ್ಯೆ ಸರಸ್ವತಿ ರಮೇಶ್‌ಬಾಬು, ರಾಯಪ್ಪ, ಅನಿಲ್‌ಕುಮಾರ್‌, ಸುಂಡಹಳ್ಳಿ ಮಂಜುನಾಥ್‌ ಇದ್ದರು. ಹುರುಗಲವಾಡಿ ರಾಮಯ್ಯ ಜಾಗೃತಿ ಗೀತೆಗಳನ್ನು ಹಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನವೀನ್‌ ಚಿಕ್ಕಮಂಡ್ಯ ಅವರನ್ನು ಅಭಿನಂದಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.