
ಮಂಡ್ಯ: ‘ಬಡ ರೈತರ ಹಾಗೂ ಸಾಗುವಳಿದಾರರ ಜಮೀನನ್ನು ಕಬಳಿಸಿ ನಕಲಿ ಪೋಡಿ ಮಾಡಿಸಿಕೊಂಡಿರುವ ಹಾಗೂ ರಾಜಕೀಯ ಪ್ರಭಾವಿಗಳ ದಬ್ಬಾಳಿಕೆ ನಡೆಸುತ್ತಿದ್ದಾರೆ. ಹಾಗಾಗಿ ರಕ್ಷಣೆ ಮಾಡಬೇಕು’ ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಎ.ಸಿ.ಶಿವಾನಂದಮೂರ್ತಿ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದರು.
‘ಬಡ ಸಾಗುವಳಿದಾರ ರೈತರಿಗೆ ರಕ್ಷಣೆ ನೀಡುವ ಮೂಲಕ ಅವರ ನ್ಯಾಯಯುತವಾದ ಜಮೀನನ್ನು ಕೊಡಿಸಬೇಕು. ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯ ಗಾಣಾಳು ಸ.ನಂ. 48 ರಲ್ಲಿ ಕೆಲ ಬಡ ರೈತರು ನೂರಾರು ವರ್ಷಗಳಿಂದ ಅನುಭವದಲ್ಲಿದ್ದು ಜೀವನ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ಇವರಿಗೆ ಸರ್ಕಾರದ ಭೂ ಮಂಜೂರಾತಿ ಸಮಿತಿ ಹಕ್ಕುಪತ್ರ ಸಹ ನೀಡಿದೆ’ ಎಂದು ಆರೋಪಿಸಿದರು.
‘ರೈತರಿಗೆ ನೀಡಿರುವ ಹಕ್ಕುಪತ್ರದ ಮೂಲಕದ ಪ್ರಕಾರ ಸದರಿ ರೈತರ ಹತ್ತಿರ ಪಹಣಿ, ಮ್ಯುಟೇಷನ್ ಸಹಿತ ಎಲ್ಲಾ ದಾಖಲೆಗಳಿದ್ದು ಅನುಭವದಲ್ಲಿರುತ್ತಾರೆ. ಸದರಿ ಬಡ ರೈತರ ಮೇಲೆ ಮಾಜಿ ಸಚಿವರು ಹಾಗೂ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕರೊಬ್ಬರ ಮಗನ ಹೆಂಡತಿ ಹೆಸರಿನಲ್ಲಿ ಗಾಣಾಳು ಸ.ನಂ.48 ರಲ್ಲಿ 57 ಎಕರೆ ಜಮೀನು ಖರೀದಿ ಮಾಡಿ ನಕಲಿ ಪೋಡಿ ಮಾಡಿಸಿಕೊಂಡು ಬಡ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.
ಈ ಭ್ರಷ್ಟಾಚಾರದಲ್ಲಿ ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರ ಬೆಂಬಲವಿದೆ. ಈ ರೀತಿ ಬಡ ರೈತರ ಮೇಲೆ ಬೆದರಿಕೆ ಒಡ್ಡಿ ಅವರನ್ನ ಒಕ್ಕಲೆಬ್ಬಿಸುವ ಕ್ರಮ ಖಂಡನೀಯ ಎಂದು ಕಿಡಿಕಾರಿದರು.
ಸಂಘದ ಮಳವಳ್ಳಿ ತಾಲ್ಲೂಕು ಕಾರ್ಯದರ್ಶಿ ಎನ್.ಲಿಂಗರಾಜ್ ಮೂರ್ತಿ ಮಾತನಾಡಿ, ಸುಮಾರು 60 ವರ್ಷದಿಂದ ವ್ಯವಸಾಯ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿದಾರರು ಭೂ ಮಂಜೂರಾತಿಗಾಗಿ ಫಾರಂ 53 ಹಾಗೂ 57ರಲ್ಲಿ ಅರ್ಜಿ ಸಲ್ಲಿಸಿರುತ್ತಾರೆ, ಆದರೆ ಇದನ್ನು ಅಕ್ರಮವಾಗಿ ಸರ್ವೆ ಮಾಡಿಸಿಕೊಡಲಾಗಿದೆ. ಇಂತಹ ಅನ್ಯಾಯ ತಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಸಹ ಸಂಚಾಲಕರಾದ ಎನ್.ಲಿಂಗರಾಜಮೂರ್ತಿ, ಪ್ರಮೀಳಾ ಶಿವಕುಮಾರ್, ನಾಗೇಶ್, ಕುಮಾರ್. ನಾರಾಯಣಗೌಡ, ಮಾಯಿಗೌಡ, ಮುತ್ತುರಾಜ್, ಕೃಷ್ಣ, ಅಂಕಯ್ಯ, ಜಡೆಮಾದೇಗೌಡ, ಚಿಕ್ಕರಾಚಯ್ಯ, ದೇವರಾಜ್, ಮಹದೆವಮ್ಮ, ರಾಮಚಂದ್ರಯ್ಯ ಭಾಗವಹಿಸಿದ್ದರು.
ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್ ರಾಜ್ ಮಾತನಾಡಿ ‘ಬಡ ರೈತ ಸಾಗುವಳಿದಾರನಿಗೆ ರಕ್ಷಣೆ ನೀಡಿ ಅನುಭವದಂತೆ ಪೋಡಿ ಮಾಡಿ ಕೊಡಬೇಕು. ಜಿಲ್ಲಾಧಿಕಾರಿ ಹಾಗೂ ಸರ್ವೆ ಇಲಾಖೆಯ ಡಿಡಿಎಲ್ಆರ್ ಅವರು ಮಧ್ಯಪ್ರವೇಶ ಮಾಡಿ ಪ್ರಭಾವಿಗಳ ನಕಲಿ ಪೋಡನ್ನು ರದ್ದು ಮಾಡಬೇಕು. ದೂರು ನೀಡಲು ಪೊಲಿಸರ ಬಳಿ ರೈತರು ಹೋದರೆ ಅವರನ್ನು ಬೆದರಿಸಿ ಕಳುಹಿಸಲಾಗುತ್ತಿದ್ದು ಪೊಲೀಸರ ವಿರುದ್ಧವೂ ಕ್ರಮ ಆಗಬೇಕು’ ಎಂದು ಆಗ್ರಹಿಸಿದರು. ‘ಈಗಾಗಲೇ ರೈತರು ಅನುಭವ ಮಾಡುತ್ತಿರುವ ಜಮೀನಿಗೆ ಯಾವುದೇ ತೊಂದರೆ ಆಗದಂತೆ ರಕ್ಷಣೆ ನೀಡಬೇಕು. ಗಾಣಾಳು ಸ.ನಂ.48/71 ರಲ್ಲಿ 3 ಎಕರೆ 5 ಗುಂಟೆ. ಸ.ನಂ.48ರ ಪೈಕಿ p3ಯಲ್ಲಿ 1 ಎಕರೆ 29 ಗುಂಟೆ ಜಮೀನಿದ್ದು ಈ ಜಮೀನನ್ನು ವಾರಸುದಾರ ರೈತರು 100 ವರ್ಷಗಳಿಂದಲೂ ವ್ಯವಸಾಯ ಮಾಡಿಕೊಂಡು ಬರಲಾಗುತ್ತಿದೆ. ಇಷ್ಟಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಹಾಗೂ ಖರೀದಿ ಮಾಡಿದ್ದೇವೆಂದು ಒಕ್ಕಲೆಬ್ಬಿಸಲಾಗುತ್ತಿದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.