ಮಂಡ್ಯ: ‘ಹೂಳು ತುಂಬಿರುವ ನಾಲೆಯಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರಕ್ಕೆ ತೊಂದರೆಯಾಗಿ ಜಮೀನುಗಳಲ್ಲಿ ಅಪಾರ ಪ್ರಮಾಣದ ನೀರು ನಿಲ್ಲುತ್ತಿರುವುದರಿಂದ ಬೆಳೆ ನಷ್ಟವಾಗುತ್ತಿದೆ. ಇದನ್ನು ತಪ್ಪಿಸಬೇಕು’ ಎಂದು ಆಗ್ರಹಿಸಿ ತಾಲ್ಲೂಕಿನ ದೊಡ್ಡಗರುಡನಹಳ್ಳಿ ಗ್ರಾಮದ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ದೊಡ್ಡಗರುಡನಹಳ್ಳಿ ಬಳಿಯ ವಿಶ್ವೇಶ್ವರಯ್ಯ ನಾಲೆ(ಕೊಪ್ಪ ವಿಭಾಗ)ಯ ಬಳಿ ಜಮಾವಣೆಗೊಂಡ ರೈತರು, ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ನಾಲೆಯಲ್ಲಿ ಹೂಳು ತುಂಬಿರುವುದರಿಂದ ಸರಾಗವಾಗಿ ನೀರು ಹರಿಯುವುದಕ್ಕೆ ಆಗುತ್ತಿಲ್ಲ, ಜೊತೆಗೆ ರಸ್ತೆ ಮತ್ತು ಏರಿಯ ಮೇಲೆಲ್ಲಾ ನೀರು ಹರಿದು ಜಮೀನುಗಳಿಗೆ ನುಗ್ಗುತ್ತಿದೆ. ಇದರಿಂದಾಗಿ ರೈತರ ಬೆಳೆ ನಾಶವಾಗುತ್ತಿದೆ. ಈ ಬಗ್ಗೆ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸೇರಿದಂತೆ ನೀರುಗಂಟಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್’ಲ ಎಂದು ಆರೋಪಿಸಿದರು.
‘ಇಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ನಾಲೆ ಮೇಲೆ ನೀರು ಹರಿಯುತ್ತಿರುವುದರಿಂದ ಏರಿಗಳಲ್ಲಿ ಮಣ್ಣಿನ ಸವೆತ ಉಂಟಾಗಿ ಬಂಡಿ ಜಾಡಿನ ರಸ್ತೆ ಮತ್ತು ಪ್ರಮುಖ ರಸ್ತೆಗಳಲ್ಲಾ ಕೊರಕಲು ಗುಂಡಿಗಳಾಗುತ್ತಿವೆ. ದೊಡ್ಡಗರುಡನಹಳ್ಳಿ ಬಳಿ ಮಂಡ್ಯ-ನಾಗಮಂಗಲ ರಸ್ತೆಯ ಮೇಲೂ ನೀರು ಹರಿಯುತ್ತಿದೆ. ಇದನ್ನು ತಕ್ಷಣ ಸರಿಪಡಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು, ಜೊತೆಗೆ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಗ್ರಾಮದ ಆನಂದ್, ಕುಮಾರ್, ಕೆಂಪೇಗೌಡ, ರೈತರಾದ ಪಟೇಲ್ ಆನಂದ್, ಚನ್ನಕೇಶವ, ಮರೀಗೌಡ, ರುದ್ರೇಶ, ಪುಟ್ಟಸ್ವಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.