
ಮಂಡ್ಯ ನಗರದ ತೋಟಗಾರಿಕೆ ಕಚೇರಿ ಆವರಣದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಜೋಡಿಸಿಟ್ಟಿರುವ ಹೂವಿನ ಕುಂಡಗಳು
ಮಂಡ್ಯ: ತೋಟಗಾರಿಕೆ ಇಲಾಖೆ ವತಿಯಿಂದ ಪ್ರತಿ ವರ್ಷದಂತೆ ‘ತೋಟಗಾರಿಕೆ ಫಲಪುಷ್ಪ ಪ್ರದರ್ಶನ–2026’ ಕಾರ್ಯಕ್ರಮವನ್ನು ಜ.23ರಿಂದ 27ರವರೆಗೆ ಐದು ದಿನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ತಿಳಿಸಿದರು.
ಈ ಬಾರಿ ಎಲ್ಲ ಇಲಾಖೆಗಳಿಂದ ಮನರಂಜನೆ, ಮಾಹಿತಿ ಮತ್ತು ಜಾಗೃತಿ ಅಂಶಗಳನ್ನು ಒಳಗೊಂಡ ವಿಶೇಷಗಳು ಇರಲಿವೆ. ಎರಡೂವರೆ ಲಕ್ಷಕ್ಕೂ ಹೆಚ್ಚು ಹೂವುಗಳಿಂದ ಕ್ಯಾಪ್ಸಿಕಂ ಮನೆ, ಡಾಲ್ಫಿನ್, ಜೇನಿನ ಪರಿಕಲ್ಪನೆ, ಅಣಬೆ ಬೇಸಾಯ, ವಿವಿಧ ಹಣ್ಣುಗಳ ಮಾದರಿ ಮತ್ತು ಜಿರಾಫೆಯ ಆಕರ್ಷಕ ಹೂವಿನ ಆಕೃತಿಗಳು ಅನಾವರಣಗೊಳ್ಳಲಿವೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
80 ಸಾವಿರಕ್ಕೂ ಹೆಚ್ಚು 25 ಬಗೆಯ ಆಲಂಕಾರಿಕ ಗಿಡಗಳನ್ನು ಹೂಕುಂಡಗಳಲ್ಲಿ ಹಾಗೂ 50 ಸಾವಿರ ಹೂವಿನ ಸಸಿಗಳನ್ನು ನಡೆದಾಡುವ ಇಕ್ಕೆಲಗಳಲ್ಲಿ ಜೋಡಿಸಲಾಗುತ್ತದೆ. ಭತ್ತ ನಾಟಿ ಮಾಡುವ ಯಂತ್ರ ಮತ್ತು ರೈತ ಮಹಿಳೆಯನ್ನು ಹೂವಿನ ಕಲಾಕೃತಿಯಲ್ಲಿ ಪ್ರದರ್ಶಿಸಲಾಗುವುದು ಎಂದರು.
ಆರೋಗ್ಯ ಇಲಾಖೆಯಿಂದ ‘ಅಮೃತಧಾರೆ’ ಯೋಜನೆಯಡಿ ಮಗುವಿಗೆ ತಾಯಿಹಾಲು ನೀಡುವ ಹಾಗೂ ಸಹಜ ಹೆರಿಗೆಗಗಳ ಕುರಿತ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಸಾಲುಮರದ ತಿಮ್ಮಕ್ಕ ಸಾಧನೆ, ಅಕ್ಕನ ಮನೆಯ ಮೀನು ಊಟ, ರೇಷ್ಮೆ ಹುಳು ಹಾಗೂ ಪ್ರವಾಸಿ ತಾಣಗಳ ಕಲಾಕೃತಿಗಳು ಈ ಬಾರಿ ಗಮನಸೆಳೆಯಲಿವೆ ಎಂದರು.
ಮಹಿಳಾ ಕ್ರಿಕೆಟ್‌ನಲ್ಲಿ ಮಹಿಳೆಯರು ಗೆದ್ದಿರುವ ವಿಶ್ವಕಪ್ ಮತ್ತು ಅಂಧರ ವಿಶ್ವಕಪ್ ಬಗ್ಗೆ ಪ್ರತಿಕೃತಿಗಳನ್ನು ನಿರ್ಮಿಸಲಾಗುವುದು. ಮತದಾನದ ಬಗ್ಗೆ ಸೆಲ್ಫಿ ಪಾಯಿಂಟ್, ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸುವ ‘ಹೂವಿನ ಹೆಲ್ಮೆಟ್’ ಸಿದ್ಧಪಡಿಸಲಾಗಿದೆ. ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಸೀರೆಗಳನ್ನು ಒದಗಿಸಲು ತಯಾರಿ ನಡೆಸಿದ್ದೇವೆ ಎಂದು ಸಿಇಒ ನಂದಿನಿ ತಿಳಿಸಿದರು.
ವಯಸ್ಕರಿಗೆ ₹30 6ರಿಂದ 12 ವರ್ಷದೊಳಗಿನ ಮಕ್ಕಳಿಗೆ ₹20 ಪ‍್ರವೇಶ ದರವಿದೆ. ಸಮವಸ್ತ್ರ ಧರಿಸಿದ ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕೆ.ಆರ್.ನಂದಿನಿ ಸಿಇಒ ಮಂಡ್ಯ ಜಿಲ್ಲಾ ಪಂಚಾಯಿತಿ
‘60 ತರಹೇವಾರಿ ಮಳಿಗೆಗಳು’
‘ಐದು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಅಂದಾಜು ₹35 ಲಕ್ಷ ವೆಚ್ಚವಾಗಲಿದೆ. ಎನ್.ಆರ್.ಎಲ್.ಎಂ.ಗೆ ಸಂಬಂಧಿಸಿದ 10 ಮಳಿಗೆಗಳು ಆಹಾರೇತರ 20 ಮಳಿಗೆಗಳು 7 ಖಾದಿ ಮಳಿಗೆಗಳು 5 ತೋಟಗಾರಿಕೆ ಮಳಿಗೆಗಳು ಸೇರಿದಂತೆ ಒಟ್ಟು 60 ಮಳಿಗೆಗಳು ಇರಲಿವೆ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ರೂಪಶ್ರೀ ಕೆ.ಎನ್. ತಿಳಿಸಿದರು. ಫಲಪುಷ್ಪ ಪ್ರದರ್ಶನವನ್ನು ಜ.23ರಂದು ಬೆಳಿಗ್ಗೆ 8.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದು ಶಾಸಕ ಪಿ. ರವಿಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಶಾಸಕರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.