ADVERTISEMENT

ಮಂಡ್ಯ: ಜ.24ರಿಂದ ಫಲಪುಷ್ಪ ಪ್ರದರ್ಶನ

ವಿವಿಧ ಬಣ್ಣದ 9 ಲಕ್ಷ ಸೇವಂತಿಗೆ, ಗುಲಾಬಿ ಹೂಗಳಿಂದ ಪ್ರವಾಸಿ ತಾಣ, ದೇವಾಲಯಗಳ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 22 ಜನವರಿ 2025, 14:04 IST
Last Updated 22 ಜನವರಿ 2025, 14:04 IST
ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧವಾಗಿರುವ ಮಂಡ್ಯ ನಗರದ ತೋಟಗಾರಿಕೆ ಇಲಾಖೆ ಆವರಣ
ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧವಾಗಿರುವ ಮಂಡ್ಯ ನಗರದ ತೋಟಗಾರಿಕೆ ಇಲಾಖೆ ಆವರಣ   

ಮಂಡ್ಯ: ಜಿಲ್ಲಾ ಪಂಚಾಯಿತಿ, ತೋಟಗಾರಿಕಾ ಸಂಘ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ‘ಪ್ರತಿ ತುತ್ತಿಗೂ ರೈತರನ್ನು ಸ್ಮರಿಸೋಣ’ ಶೀರ್ಷಿಕೆಯಡಿ ಜ.24ರಿಂದ 28ರವರೆಗೆ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ– 2025 ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐದು ದಿನ ನಡೆಯುವ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲೆಯ ರೈತರು, ಸಾರ್ವಜನಿಕರು, ನಾಗರಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಫಲಪುಷ್ಪ ಪ್ರದರ್ಶನ ಯಶಸ್ಸಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ತೋಟಗಾರಿಕೆ ಕಚೇರಿ ಆವರಣ ಹಾಗೂ ಕಾವೇರಿ ಉದ್ಯಾನದಲ್ಲಿ ಮನಸೂರೆಗೊಳ್ಳುವ ವಿವಿಧ ಆಲಂಕಾರಿಕ ಹೂ ಕುಂಡಗಳ ಜೋಡಣೆ, ವಿವಿಧ ತರಕಾರಿ ಬೆಳೆಗಳು ಹಾಗೂ ಪೌಷ್ಟಿಕ ಕೈತೋಟ ಮಾದರಿ ಹಾಗೂ ತರಕಾರಿ ಕೆತ್ತನೆ ಪ್ರದರ್ಶನ ಮತ್ತು ಜಿಲ್ಲೆಯ ತೋಟಗಾರಿಕೆ ಬೆಳೆಗಳ ವೈವಿಧ್ಯ ಮಾದರಿಗಳ ಪ್ರದರ್ಶನ ಹಾಗೂ ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಮತ್ತು ವಿವಿಧ ಅಭಿವೃದ್ಧಿ ಇಲಾಖೆಗಳ ಕಾರ್ಯಕ್ರಮಗಳ ಸಮಗ್ರ ಮಾಹಿತಿಯನ್ನು ಫಲಪುಷ್ಪ ಪ್ರದರ್ಶನದಲ್ಲಿ ನೀಡಲಾಗುವುದು’ ಎಂದರು.

ADVERTISEMENT

‘ಪ್ರತಿ ದಿನ ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ದಿನ ಸಂಜೆ 6ರಿಂದ ರಾತ್ರಿ 10ರವರೆಗೆ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಯಸ್ಕರಿಗೆ ಟಿಕೆಟ್ ದರ ₹30, 6–12 ವರ್ಷದ ಮಕ್ಕಳಿಗೆ ₹20 ಹಾಗೂ ಸಮವಸ್ತ್ರ ಧರಿಸಿ ಬರುವ ಶಾಲಾ ಮಕ್ಕಳ ಗುಂಪುಗಳಿಗೆ ಹಾಗೂ 6 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಉಚಿತ’ ಎಂದು ಹೇಳಿದರು.

1.50 ಲಕ್ಷ ಆಲಂಕಾರಿಕ ಗಿಡ: ‘40 ಬಗೆಯ ಹೂವುಗಳ 35 ಸಾವಿರಕ್ಕೂ ಹೆಚ್ಚು ಆಲಂಕಾರಿಕ ಕುಂಡಗಳ ಜೋಡಣೆ, ತರಹೇವಾರಿ ಆಲಂಕಾರಿಕ ಗಿಡಗಳಾದ ಪೆಟೊನಿಯಾ, ಸಾಲ್ವಿಯಾ, ಅಂಟಿರೈನಾ, ಸೆಲೋಶಿಯಾ, ಮಾರಿಗೋಲ್ಡ್, ಜೀನಿಯಾ, ಸೇವಂತಿಗೆ, ಪಾಯ್ನಿಸೆಟಿಯಾ ಸೇರಿದಂತೆ ಒಟ್ಟು 1.50 ಲಕ್ಷ ಆಲಂಕಾರಿಕ ಹೂಗಳ ಪ್ರದರ್ಶನ ಇರಲಿದೆ’ ಎಂದರು. 

‘ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಜಿಲ್ಲೆಗಳ ಕೈಮಗ್ಗ, ನೇಕಾರರ ಸಹಕಾರ ಸಂಘಗಳು ಭಾಗವಹಿಸಿ, ಕೈಮಗ್ಗ ನೇಕಾರರಿಂದ ತಯಾರಿಸಿರುವ ಹತ್ತಿ, ರೇಷ್ಮೆ, ಮೊಳಕಾಲ್ಮೂರು ರೇಷ್ಮೆ ಸೀರೆ, ಚಿಂತಾಮಣಿ ರೇಷ್ಮೆ ಸೀರೆ, ಕಾಟನ್ ಸೀರೆ, ಪಂಚೆ, ಬೆಡ್‌ಶೀಟ್, ಟವಲ್, ಲುಂಗಿ ಹಾಗೂ ಇತರೆ ಕೈಮಗ್ಗ ಉತ್ಪನ್ನಗಳನ್ನು ಶೇ 20ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಿದ್ದಾರೆ’ ಎಂದರು.

‘ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಪಶು ಸಂಗೋಪನೆ ಇಲಾಖೆ, ಆರೋಗ್ಯ ಇಲಾಖೆ, ಕೈಗಾರಿಕೆ ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ವತಿಯಿಂದ ಕಲಾಕೃತಿಗಳನ್ನು ಹಾಗೂ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಗುವುದು’ ಎಂದು ಹೇಳಿದರು.

‘ಜಿಲ್ಲಾ ವ್ಯಾಪ್ತಿಯ ತಾಲ್ಲೂಕುಗಳಲ್ಲಿ ರೈತರು ಬೆಳೆದಿರುವ ವಿವಿಧ ಹಣ್ಣು, ತರಕಾರಿ ಮತ್ತು ಪ್ಲಾಂಟೇಷನ್ ಹಾಗೂ ಇತರೆ ತೋಟಗಾರಿಕೆ ಬೆಳೆಗಳ ಮಾದರಿಗಳ ಪ್ರದರ್ಶನವಿರುತ್ತದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ ಕೆ.ಎನ್., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಬಿ.ಎನ್. ಸುವೇದಾ, ಜಿಲ್ಲಾ ತೋಟಗಾರಿಕೆ ಸಂಘದ ಜಂಟಿ ಕಾರ್ಯದರ್ಶಿ ಎಸ್.ಪಿ. ಶ್ರೀಧರ್ ಹಾಗೂ ನಿರ್ದೇಶಕರಾದ ಎಂ.ಆರ್. ಅರವಿಂದ್ ಹಾಜರಿದ್ದರು.

ಹೂಗಳಲ್ಲಿ ಅರಳಲಿರುವ ರಂಗನತಿಟ್ಟು

‘ಪ್ರಸ್ತುತ ಸಾಲಿನ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಬಣ್ಣದ 9 ಲಕ್ಷ ಸೇವಂತಿಗೆ ಮತ್ತು ವಿವಿಧ ಬಣ್ಣದ ಗುಲಾಬಿ ಹೂವುಗಳನ್ನು ಬಳಸಿ ಪ್ರಸಿದ್ಧ ದೇವಾಲಯ ಹಾಗೂ ಪ್ರವಾಸಿ ತಾಣಗಳನ್ನು ನಿರ್ಮಿಸಿ ಆಕರ್ಷಿಸಲಾಗುವುದು’ ಎಂದು ತೋಟಗಾರಿಕೆ ಉಪನಿರ್ದೇಶಕಿ ರೂಪಶ್ರೀ ತಿಳಿಸಿದರು.

‘ಜಿಲ್ಲೆಯ ಪ್ರಸಿದ್ಧ ದೇವಾಲಯವಾದ ಮೇಲುಕೋಟೆಯ ಯೋಗನರಸಿಂಹ ಸ್ವಾಮಿ ದೇವಾಲಯ ರಂಗನತಿಟ್ಟು ಹಳ್ಳಿ ಸೊಗಡಿನ ರೈತನ ಮನೆ ಏಳು ಬೆಟ್ಟದ ಒಡೆಯ ಮಲೆ ಮಹದೇಶ್ವರ ದೇವಾಲಯಗಳು ಫಲಪುಷ್ಪ ಪ್ರದರ್ಶನದ ಆಕರ್ಷಣೆಗಳಾಗಲಿವೆ’ ಎಂದರು.

‘ಯುವ ಜನತೆಯನ್ನು ಸೆಳೆಯಲು ಹತ್ತು ಕಡೆಗಳಲ್ಲಿ ಸೆಲ್ಫಿ ಪಾಯಿಂಟ್ ಹೂವಿನ ಆಕೃತಿಯ ಕ್ಷಯರೋಗ ಕುರಿತು ಜಾಗೃತಿ ನರೇಗಾ ಯೋಜನೆಯ ಮಾಹಿತಿಯನ್ನೊಳಗೊಂಡ ಸ್ತಬ್ಧಚಿತ್ರ ವಿವಿಧ ಆಕರ್ಷಕ ಬಗೆಯ ಅಡಿನಿಯಂ ಗಿಡಗಳ ಪ್ರದರ್ಶಿಕೆ ಬೋನ್ಸಾಯ್ ಗಿಡಗಳ ಪ್ರದರ್ಶಿಕೆ ವಿವಿಧ ತರಕಾರಿ ಹಣ್ಣುಗಳನ್ನು ಬಳಸಿ ಕಲಾಕೃತಿಗಳ ಕೆತ್ತನೆ ಹಾಗೂ ಇಕೆಬನಾ ಜೋಡಣೆ ಆಕರ್ಷಿಸಲಿವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.