ADVERTISEMENT

ಮಂಡ್ಯ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ

ಮದ್ದೂರಿನಲ್ಲಿ ಪ್ರಕ್ಷುಬ್ಧ ವಾತಾವರಣ: 8 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 3:05 IST
Last Updated 8 ಸೆಪ್ಟೆಂಬರ್ 2025, 3:05 IST
ಮದ್ದೂರು ಪಟ್ಟಣದ ಕೆಮ್ಮಣ್ಣು ನಾಲಾ ವೃತ್ತದ ಸಮೀಪದಲ್ಲಿರುವ ಮಸೀದಿ ಮುಂಭಾಗ ಭಾನುವಾರ ರಾತ್ರಿ ಧರಣಿ ನಡೆಸುತ್ತಿದ್ದ ಗಣೇಶ ವಿಸರ್ಜನಾ ಸಮಿತಿ ತಂಡದ ಸದಸ್ಯರು ಮತ್ತು ಅಲ್ಲಿ ನೆರೆದಿದ್ದ ಗುಂಪನ್ನು ಪೊಲೀಸರು ಚದುರಿಸಿದರು   –ಪ್ರಜಾವಾಣಿ ಚಿತ್ರ 
ಮದ್ದೂರು ಪಟ್ಟಣದ ಕೆಮ್ಮಣ್ಣು ನಾಲಾ ವೃತ್ತದ ಸಮೀಪದಲ್ಲಿರುವ ಮಸೀದಿ ಮುಂಭಾಗ ಭಾನುವಾರ ರಾತ್ರಿ ಧರಣಿ ನಡೆಸುತ್ತಿದ್ದ ಗಣೇಶ ವಿಸರ್ಜನಾ ಸಮಿತಿ ತಂಡದ ಸದಸ್ಯರು ಮತ್ತು ಅಲ್ಲಿ ನೆರೆದಿದ್ದ ಗುಂಪನ್ನು ಪೊಲೀಸರು ಚದುರಿಸಿದರು   –ಪ್ರಜಾವಾಣಿ ಚಿತ್ರ    

ಮಂಡ್ಯ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಭಾನುವಾರ ರಾತ್ರಿ ಹಿಂದೂ ಮತ್ತು ಮುಸ್ಲಿಂ ಯುವಕರ ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದ್ದು, ಮದ್ದೂರು ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ನಾಲ್ವರು ಪೊಲೀಸರು ಸೇರಿದಂತೆ ಒಟ್ಟು 8 ಮಂದಿಗೆ ಗಾಯಗಳಾಗಿದ್ದು, ಅವರನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.   

ಮದ್ದೂರು ಪಟ್ಟಣದ ಸಿದ್ಧಾರ್ಥ ನಗರದ 5ನೇ ಕ್ರಾಸ್‌ನಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ನಡುವೆ ಸಾಗುತ್ತಿತ್ತು. 

ADVERTISEMENT

ರಾಮ್‌ ರಹೀಂ ನಗರದ ಮಸೀದಿ ಬಳಿ ಹೋದಾಗ ರಾತ್ರಿ 8ರ ಸುಮಾರಿಗೆ ಕಲ್ಲು ತೂರಾಟ ನಡೆದಿದೆ. ಪ್ರತಿಯಾಗಿ ಕೆಲವೇ ತಿಂಗಳ ಹಿಂದೆ ಉದ್ಘಾಟನೆಯಾಗಿದ್ದ ಮಸೀದಿ ಮೇಲೂ ಕಲ್ಲು ತೂರಾಟವಾಯಿತು. ಆಗ ಉಭಯ ಗುಂಪಿನ ನಡುವೆ ಘರ್ಷಣೆ ತೀವ್ರ ಸ್ವರೂಪ ಪಡೆಯಿತು. 

ಎರಡು ಗುಂಪುಗಳ ಮುಖಂಡರು ಅಲ್ಲಿ ಜಮಾಯಿಸಿದ್ದರು. ಬಿಜೆಪಿ, ಆರ್.ಎಸ್.ಎಸ್., ಬಜರಂಗದಳ ಕಾರ್ಯಕರ್ತರು ಕೂಡ ಸ್ಥಳಕ್ಕೆ ಧಾವಿಸಿದರು. ಸ್ಥಳದಲ್ಲಿದ್ದ ಪೊಲೀಸರು ಗುಂಪನ್ನು ಚದುರಿಸಿ, ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು. 

ಗಣೇಶ ಮೂರ್ತಿಯ ವಿಸರ್ಜನಾ ತಂಡದ ಕೆಲವು ಸದಸ್ಯರು ಪಟ್ಟಣದ ಪೇಟೆ ಬೀದಿಯ ಕೆಮ್ಮಣ್ಣು ನಾಲಾ ವೃತ್ತದ ಬಳಿಯಿರುವ ಮತ್ತೊಂದು ಮಸೀದಿ ಮುಂಭಾಗ ಧರಣಿ ನಡೆಸಿ, ನ್ಯಾಯಕ್ಕಾಗಿ ಆಗ್ರಹಿಸಿ ಘೋಷಣೆ ಮೊಳಗಿಸಿದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸ್‌ ಪಡೆ, ಪೇಟೆ ಬೀದಿಯ ಎಲ್ಲ ಅಂಗಡಿಗಳ ಬಾಗಿಲು ಮುಚ್ಚಿಸಿದರು. 

ಬೂದಿ ಮುಚ್ಚಿದ ಕೆಂಡ, ಬಿಗಿ ಭದ್ರತೆ

ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಸ್ಥಳಕ್ಕೆ ಭೇಟಿ ನೀಡಿ, ಜಿಲ್ಲೆಯ ಇತರ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಮದ್ದೂರು ಪಟ್ಟಣಕ್ಕೆ ಕರೆಸಿಕೊಂಡು ಬಂದೋಬಸ್ತ್‌ ಬಿಗಿಗೊಳಿಸಿದರು.

ಪೊಲೀಸ್‌ ಅಧಿಕಾರಿಗಳು ಎರಡು ಕೋಮುಗಳ ಮುಖಂಡರ ಜೊತೆಗೆ ಸಮಾಲೋಚಿಸಿ, ಸಮಾಧಾನಪಡಿಸಲು ಯತ್ನಿಸಿದರು. ಸದ್ಯಕ್ಕೆ ಪರಿಸ್ಥಿತಿ ತಹಬದಿಗೆ ಬಂದಿದ್ದರೂ, ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ.

ಕಳೆದ ವರ್ಷ ನಾಗಮಂಗಲ ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಮಸೀದಿ ಬಳಿಯೇ ಕಲ್ಲು ತೂರಾಟ ನಡೆದು, ಹತ್ತಾರು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಗಲಭೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.