ADVERTISEMENT

ನಮ್ಮ ಊರು– ನಮ್ಮ ಶಾಲೆ–ನಮ್ಮ ಹೆಮ್ಮೆ: ಗ್ರಾಮಸ್ಥರಿಂದ ಸರ್ಕಾರಿ ಶಾಲೆಗೆ ಹೊಸ ರೂಪ

ಧ್ಯೇಯದೊಂದಿಗೆ ಶಾಲಾ ಕಟ್ಟಡಕ್ಕೆ ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 19:49 IST
Last Updated 22 ಸೆಪ್ಟೆಂಬರ್ 2019, 19:49 IST
ಗ್ರಾಮಸ್ಥರ ಶ್ರಮದಾನದಿಂದ ಹೊಸ ರೂಪ ಪಡೆದಿರುವ ಬಿ.ಹೊಸೂರು ಗ್ರಾಮದ ಸರ್ಕಾರಿ ಶಾಲೆ
ಗ್ರಾಮಸ್ಥರ ಶ್ರಮದಾನದಿಂದ ಹೊಸ ರೂಪ ಪಡೆದಿರುವ ಬಿ.ಹೊಸೂರು ಗ್ರಾಮದ ಸರ್ಕಾರಿ ಶಾಲೆ   

ಮಂಡ್ಯ: ಕಳೆದೆರಡು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದ, ತಾಲ್ಲೂಕಿನ ಬಿ.ಹೊಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು ಗ್ರಾಮಸ್ಥರೇ ದುರಸ್ತಿ ಮಾಡಿದ್ದಾರೆ.

ಎಸ್‌ಡಿಎಂಸಿ ಸದಸ್ಯರು, ಹಳೆಯ ವಿದ್ಯಾರ್ಥಿಗಳು ಮುಂದೆ ನಿಂತು ತಮ್ಮೂರಿನ ಶಾಲೆಗೆ ಹೊಸ ರೂಪ ಕೊಟ್ಟಿದ್ದಾರೆ.

ಶಾಲೆಯ ಎರಡು ಕೊಠಡಿಗಳನ್ನು ದುರಸ್ತಿ ಮಾಡಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಕಿವಿಗೊಟ್ಟಿರಲಿಲ್ಲ. ಹೀಗಾಗಿ, ತಾವೇ ಒಂದಾಗಿ ನಿಂತು ಹಣ ಸಂಗ್ರಹಿಸಿ, ದಾನಿಗಳ ಸಹಾಯ ಪಡೆದು ದುರಸ್ತಿ ಮಾಡಿದ್ದಾರೆ.

ADVERTISEMENT

ಹೆಂಚುಗಳು ಕಳಚಿ ಬಿದ್ದಿದ್ದರಿಂದ ಮಳೆ, ಗಾಳಿ ಬಂದಾಗ ಮಕ್ಕಳು ಆತಂಕದಲ್ಲೇ ಪಾಠ ಕಲಿಯುತ್ತಿದ್ದರು. ಚಾವಣಿಯ ಮರದ ತುಂಡುಗಳು ಗೆದ್ದಲು ಹಿಡಿದು ಕಳಚಿ ಬೀಳುವ ಹಂತದಲ್ಲಿದ್ದವು. ಇದನ್ನು ಗಮನಿಸಿದ ಎಸ್‌ಡಿಎಂಸಿ ಸದಸ್ಯರು ಊರಿನವರೊಂದಿಗೆ ಚರ್ಚಿಸಿ, ‘ನಮ್ಮ ಊರು– ನಮ್ಮ ಶಾಲೆ– ನಮ್ಮ ಹೆಮ್ಮೆ’ ಎಂಬ ಧ್ಯೇಯದೊಂದಿಗೆ ಶಾಲಾ ಅಭಿವೃದ್ಧಿಗೆ ಮುಂದಾದರು.

ಗ್ರಾಮಸ್ಥರ ಶ್ರಮದಾನ: ಮರದ ಸಾಮಗ್ರಿಗಳನ್ನು ಖರೀದಿಸಲು ಹಾಗೂ ಗಾರೆ, ಮರಗೆಲಸದವರಿಗೆ ಕೊಡಲು ಮಾತ್ರ ಹಣ ಖರ್ಚಾಗಿದೆ. ಉಳಿದ ಕೆಲಸಗಳನ್ನು ಊರಿನ ಜನರೇ ಮಾಡಿದ್ದಾರೆ. ಎಲ್ಲರ ಶ್ರಮದಾನದಿಂದ ಕೊಠಡಿಗಳು ಹೊಸ ರೂಪ ಪಡೆದಿವೆ. ಇದಲ್ಲದೆ ಬಿರುಕು ಬಿಟ್ಟ ಗೋಡೆಗೆ ಗಾರೆ ಹಾಕಿಸಿ, ಪಾಯದ ಸುತ್ತ ಮಣ್ಣು ಹಾಕಿ ಭದ್ರ ಮಾಡಿದ್ದಾರೆ.

ಮರದ ತುಂಡುಗಳನ್ನು ಊರಿನಲ್ಲಿ ಸಂಗ್ರಹಿಸಿ, ಮಿಲ್‌ನಲ್ಲಿ ಕತ್ತರಿ ಹೊಡೆಸಿ. ತಮ್ಮ ತಮ್ಮ ಮನೆಗಳಲ್ಲಿ ಹೆಚ್ಚುವರಿಯಾಗಿದ್ದ ಹೆಂಚುಗಳನ್ನು ಶಾಲೆಗೆ ಕೊಟ್ಟಿದ್ದಾರೆ. ಚಾವಣಿಗೆ ಹೊದಿಸಿದ್ದ ಎಲ್ಲಾ ಹಳೆಯ ಹೆಂಚುಗಳನ್ನು ಕೆಳಗಿಳಿಸಿ, ನೀರಿನಿಂದ ಒಂದೊಂದಾಗಿ ಸ್ವಚ್ಛಗೊಳಿಸಿ ಮತ್ತೆ ಅಳವಡಿಸಿದ್ದಾರೆ. ಗೋಡೆಗಳಿಗೆ ಸಿಮೆಂಟ್‌ನಿಂದ ಕ್ಯೂರಿಂಗ್‌ ಮಾಡಿದ್ದಾರೆ. ಶಾಲೆಯ ಹಿರಿಯ ವಿದ್ಯಾರ್ಥಿ ಬಿ.ಹೊಸೂರು ಕಾಲೊನಿಯ ರವಿ ವೃತ್ತಿಯಲ್ಲಿ ಪೇಂಟರ್‌ ಆಗಿದ್ದು, ತಾವು ಓದಿದ ಶಾಲೆಗೆ ಉಚಿತವಾಗಿ ಬಣ್ಣ ಹಚ್ಚಿಕೊಟ್ಟಿದ್ದಾರೆ.

ಹೆಚ್ಚಿದ ದಾಖಲಾತಿ: 2 ವರ್ಷಗಳ ಹಿಂದೆ 90ರ ಆಸುಪಾಸಿನಲ್ಲಿದ್ದ ದಾಖಲಾತಿ ಸಂಖ್ಯೆ ಪ್ರಸಕ್ತ ಸಾಲಿನಲ್ಲಿ 133 ಆಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಶಾಲೆಯಲ್ಲಿ ಮಕ್ಕಳ ಮನೆ ಪ್ರಾರಂಭಿಸಿದ್ದು, ಚಿಣ್ಣರನ್ನು ಆಕರ್ಷಿಸುತ್ತಿದೆ.

‘ಶಾಲೆಯಲ್ಲಿ 8 ಕೊಠಡಿಗಳಿವೆ. ಮುಖ್ಯ ಶಿಕ್ಷಕರ ಕೊಠಡಿಯಲ್ಲೂ ತರಗತಿ ನಡೆಯುತ್ತಿದ್ದು, ಇನ್ನಷ್ಟು ಕೊಠಡಿಗಳ ಅಗತ್ಯವಿದೆ. ಇಂಗ್ಲಿಷ್‌ ಶಿಕ್ಷಕರ ಕೊರತೆಯನ್ನು ಮನಗಂಡ ಎಸ್‌ಡಿಎಂಸಿ ಸದಸ್ಯರು, ಹೊರಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ನೇಮಕ ಮಾಡಿಕೊಂಡು 1ರಿಂದ 4ನೇ ತರಗತಿವರೆಗಿನ ಮಕ್ಕಳಿಗೆ ಪಾಠದ ವ್ಯವಸ್ಥೆ ಮಾಡಿದ್ದಾರೆ. ಗ್ರಾಮಸ್ಥರೇ ಶಾಲಾ ಕಟ್ಟಡ ದುರಸ್ತಿ ಮಾಡಿರುವುದು ಖುಷಿ ತಂದಿದೆ. ಖಾಸಗಿ ಶಾಲೆ ಮೀರಿಸುವಂತೆ ಶಾಲೆಯ ಆವರಣವನ್ನು ನಿರ್ಮಾಣ ಮಾಡುವ ಆಸೆ ಇದೆ’ ಎಂದು ಮುಖ್ಯಶಿಕ್ಷಕಿ ಸುಜಾತಾ ತಿಳಿಸಿದರು.

ಈ ಶಾಲೆಯ ಆವರಣದಲ್ಲಿ ಕೈದೋಟವೂ ಇದ್ದು, ಇದರಲ್ಲಿ ಹಣ್ಣು–ತರಕಾರಿ ಬೆಳೆಯಲಾಗು
ತ್ತಿದೆ. ಅವುಗಳನ್ನೇ ಅಡುಗೆಗೆ ಬಳಸುತ್ತಿದ್ದಾರೆ.

***

ಶಾಲೆಯನ್ನೇ ದೇವಾಲಯ ಎಂದು ಭಾವಿಸಿ, ಗ್ರಾಮಸ್ಥರು ಶಾಲೆಗೆ ಹೊಸ ರೂಪ ನೀಡಿದ್ದಾರೆ. ಕರ್ನಾಟಕ ಪಬ್ಲಿಕ್‌ ಶಾಲೆ ಆರಂಭಿಸಬೇಕೆಂಬ ಬಯಕೆ ಗ್ರಾಮಸ್ಥರಲ್ಲಿದೆ.

–ನಾಗರಾಜು, ಕ್ಷೇತ್ರ ಸಂಪನ್ಮೂಲ ಅಧಿಕಾರಿ, ಮಂಡ್ಯ ಉತ್ತರ ವಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.