ಮಂಡ್ಯ: ಜಿಲ್ಲೆಯಾದ್ಯಂತ ಗುರುವಾರ ರಾತ್ರಿಯಿಂದ ವರುಣನ ಆರ್ಭಟ ಶುರುವಾಗಿದ್ದು, ಶುಕ್ರವಾರ ರಾತ್ರಿಯೂ ಮುಂದುವರಿಯಿತು. ಜೋರು ಮಳೆಯಿಂದ ಕೃಷಿ ಬೆಳೆಗಳು ಕೊಚ್ಚಿ ಹೋಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ.
ಮಂಡ್ಯ ನಗರದ ಚಿಕ್ಕಮಂಡ್ಯ ಕೆರೆಯಂಗಳದಲ್ಲಿನ ಕೆಎಚ್‌ಬಿ ಬಡಾವಣೆಯ ಮುಖ್ಯ ರಸ್ತೆಗಳು ಮಳೆ ನೀರಿನಲ್ಲಿ ಮುಳುಗಿದ್ದವು. ವಿಶ್ವೇಶ್ವರಯ್ಯ ನಾಲೆ ಮಳೆ ನೀರಿನಿಂದ ತುಂಬಿ ಹರಿದಿದ್ದರಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡವು.
ಇದರಿಂದ ರಸ್ತೆಗಳ ಸಂಪರ್ಕ ಕಡಿತಗೊಂಡು ವಾಹನ ಸವಾರರು ಪರದಾಡಿದರು. ಮನೆಯ ಹೊರಗಡೆ ನಿಲ್ಲಿಸಿದ್ದ ವಾಹನಗಳು ನೀರಿನಲ್ಲಿ ಅರ್ಧದಷ್ಟು ಮುಳುಗಿದ್ದವು. ಮನೆಯ ಒಳಗಿದ್ದವರು ಹೊರ ಬರಲಾಗದ ಸ್ಥಿತಿ ನಿರ್ಮಾಣವಾಗಿತ್ತು. ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ತೆರಳಲು ಪರದಾಡಿದರು.
ತಗ್ಗು ಪ್ರದೇಶದಲ್ಲಿನ ಕೆಲವು ಮನೆಗಳಿಗೂ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಅಕ್ಷರಶಃ ಪರದಾಡಿದರು. ಜೋರು ಮಳೆಯಾದರೆ ಪ್ರತಿ ವರ್ಷ ಇದೇ ರೀತಿ ತಗ್ಗಿನ ಮನೆಗಳಿಗೆ ನೀರು ನುಗ್ಗಿ, ಪರದಾಟವಾಗುತ್ತದೆ ಎಂದು ಕೆಎಚ್‌ಬಿ ಬಡವಾಣೆ ನಿವಾಸಿಗಳು ಸಮಸ್ಯೆ ತೋಡಿಕೊಂಡರು.
ಸುಮಾರು 500 ಎಕರೆಗೂ ಹೆಚ್ಚು ವಿಸ್ತೀರ್ಣವಿದ್ದ ಚಿಕ್ಕಮಂಡ್ಯ ಕೆರೆಯನ್ನು ಮೂರು ದಶಕಗಳ ಹಿಂದೆಯೇ ಮುಚ್ಚಿ, ವಿವೇಕಾನಂದನಗರ, ಬೀಡಿ ಕಾರ್ಮಿಕರ ಕಾಲನಿ ಮತ್ತು ಕೆಎಚ್‌ಬಿ ಬಡಾವಣೆ ನಿರ್ಮಿಸಲಾಗಿತ್ತು. ಪ್ರತಿ ಬಾರಿ ಜೋರು ಮಳೆಯಾದಾಗಲೆಲ್ಲಾ ಈ ಮೂರು ಬಡಾವಣೆಗಳು ಸಮಸ್ಯೆಗೆ ಸಿಲುಕುತ್ತವೆ. ಇತ್ತೀಚೆಗೆ ಬೀಡಿ ಕಾರ್ಮಿಕರ ಕಾಲನಿಯ ಹಿಂಭಾಗದಲ್ಲಿ ದೊಡ್ಡ ನಾಲೆಗೆ(ರಾಜಕಾಲುವೆ) ತಡೆಗೋಡೆ ನಿರ್ಮಿಸಿದ್ದರಿಂದ ಈಗ ಬೀಡಿ ಕಾರ್ಮಿಕರ ಕಾಲೊನಿಗೆ ಮಳೆ ನೀರು ನುಗ್ಗಿರಲಿಲ್ಲ. ದೊಡ್ಡಸೇತುವೆ ಬಳಿ ತಡೆಗೋಡೆ ಕಾಮಗಾರಿಯಿಂದಾಗಿ ನಾಲೆಗೆ ಭಾರಿ ಪ್ರಮಾಣದ ಮಣ್ಣನ್ನು ಒತ್ತರಿಸಲಾಗಿತ್ತು. ಇದರಿಂದ ನಾಲೆ ಮೇಲ್ಬಾಗದ ಹೊಳಲು, ಬಿ.ಹೊಸಹಳ್ಳಿ, ಸಂಪಹಳ್ಳಿ, ಗಾಣದಾಳು, ಕಲ್ಲಹಳ್ಳಿ ಭಾಗದಿಂದ ಬಂದ ಮಳೆ ನೀರೆಲ್ಲಾ ಕೆಎಚ್‌ಬಿ ಬಡಾವಣೆಗೆ ನುಗ್ಗಿದೆ. ಇದರಿಂದ ಶುಕ್ರವಾರ ಸಾಕಷ್ಟು ಅವಾಂತರ ಸೃಷ್ಟಿಯಾಗಿತ್ತು. ಕೆಎಚ್‌ಬಿ ಬಡಾವಣೆಯು ಮತ್ತೆ ಕೆರೆಯಂತಾಗಿತ್ತು.
ಮಂಡ್ಯ ನಗರದ ಹೊರವಲಯದ ಹೊಳಲು ಮುಖ್ಯರಸ್ತೆಯ ಅಕ್ಕಪಕ್ಕದ ಭತ್ತದ ಗದ್ದೆಗಳು ಜಲಾವೃತಗೊಂಡಿದ್ದವು. ಭತ್ತದ ಪೈರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಅಪಾರ ನಷ್ಟ ಉಂಟಾಗಿದೆ ಎಂದು ರೈತರು ಗೋಳು ತೋಡಿಕೊಂಡರು.
ಜೆಸಿಬಿ ಯಂತ್ರಗಳಿಂದ ಕಾರ್ಯಾಚರಣೆ: ಬೀಡಿ ಕಾರ್ಮಿಕರ ಕಾಲನಿ ಹಿಂಭಾಗದ ಸೇತುವೆ ಬಳಿ ನಾಲೆಗೆ ಅಡ್ಡಲಾಗಿದ್ದ ಹಾಕಿದ್ದ ಮಣ್ಣು ಮತ್ತು ನಾಲೆಯೊಳಗಿದ್ದ ಮಣ್ಣನ್ನು ಶುಕ್ರವಾರ ಮುಂಜಾನೆಯೇ ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು.
ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್) ಅವರು ಶುಕ್ರವಾರ ಮುಂಜಾನೆಯೇ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯಾಚರಣೆ ನಡೆಸಿ, ನಾಲೆಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಿದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತೆ ಯು.ಪಿ. ಪಂಪಶ್ರೀ, ಆರೋಗ್ಯ ನಿರೀಕ್ಷಕರು, ಅಧಿಕಾರಿಗಳು ಮತ್ತು ಪೌರಕಾರ್ಮಿಕರು ಭಾಗವಹಿಸಿದ್ದರು.
ಗುರುವಾರ ರಾತ್ರಿ 9ರ ಸಮಯದಲ್ಲಿ ಶುರುವಾದ ಮಳೆಯು ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿದಿತ್ತು. ಬಳಿಕ ಶುಕ್ರವಾರ ಮುಂಜಾನೆವರೆವಿಗೂ ಮಳೆಯು ಧಾರಾಕಾರವಾಗಿ ಸುರಿದಿತ್ತು. ಅ.9ರಂದು ಬೆಳಗ್ಗೆಯಿಂದ 10ರಂದು ಬೆಳಗ್ಗೆ ಮಂಡ್ಯ ಜಿಲ್ಲೆಯಲ್ಲಿ ವಾಡಿಕೆ ಮಳೆ ಪ್ರಮಾಣ 5.2 ಮಿ.ಮೀ. ಇದೆ. ಆದರೆ ಪ್ರಸ್ತುತ 53.4 ಮಿ.ಮೀ. ಮಳೆಯಾಗಿದ್ದು ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದಿದೆ. ಶ್ರೀರಂಗಪಟ್ಟಣದಲ್ಲಿ ಅತಿ ಹೆಚ್ಚು (76.3ಮಿ.ಮೀ.) ಮಳವಳ್ಳಿ ತಾಲೂಕಿನಲ್ಲಿ ಅತಿ ಕಡಿಮೆ (33.4) ಮಳೆಯಾಗಿದೆ. ಉಳಿದಂತೆ ಮದ್ದೂರು ತಾಲೂಕಿನಲ್ಲಿ 82.5 ಮಿ.ಮೀ. ಮಂಡ್ಯದಲ್ಲಿ 57.8. ಮೀ.ಮೀ. ಕೆ.ಆರ್.ಪೇಟೆಯಲ್ಲಿ 57.4 ಮಿ.ಮೀ. ಪಾಂಡವಪುರದಲ್ಲಿ 76.3 ಮಿ.ಮೀ. ನಾಗಮಂಗಲದಲ್ಲಿ 39.8.ಮಿ.ಮೀ. ಮಳೆ ಸುರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.