
ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಗುರುವಾರ ಆರಂಭವಾದ ‘ಐತಿಹಾಸಿಕ ದಾಖಲೆ ಮತ್ತು ಛಾಯಾಚಿತ್ರಗಳ ಪ್ರದರ್ಶನ’ವನ್ನು ಕಾಲೇಜಿನ ವಿದ್ಯಾರ್ಥಿನಿಯರು ವೀಕ್ಷಿಸಿದರು
– ಪ್ರಜಾವಾಣಿ ಚಿತ್ರ
ಮಂಡ್ಯ: ಜಿಲ್ಲೆಯ ಅಸ್ಮಿತೆಗಳಾದ ಕೃಷ್ಣರಾಜ ಸಾಗರ, ಮೈಷುಗರ್ ಕಾರ್ಖಾನೆ, ಶಿವಪುರ ಧ್ವಜ ಸತ್ಯಾಗ್ರಹ ಸೌಧ, ಕಾವೇರಿ ಜಲ ವಿದ್ಯುತ್ ಯೋಜನೆ, ಇರ್ವಿನ್ ಕಾಲುವೆ, ಜನರಲ್ ಆಸ್ಪತ್ರೆ, ಕರಿಘಟ್ಟದ ರಥೋತ್ಸವ, ಕೃಷಿ ಬ್ಯಾಂಕುಗಳು, ಮೇಲುಕೋಟೆಯ ಉತ್ಸವ, ಬಾಲಕಿಯರ ಪ್ರೌಢಶಾಲೆ ಮುಂತಾದವುಗಳ ಐತಿಹಾಸಿಕ ಹಿನ್ನೆಲೆ ಮೇಲೆ ಅಪೂರ್ವ ದಾಖಲೆಗಳು ಬೆಳಕು ಚೆಲ್ಲಿದವು.
ಸಕ್ಕರೆ ನಾಡಿನ ಸಿಹಿ ತುಣುಕುಗಳಂತೆ ಗೋಚರಿಸಿದ ‘ಐತಿಹಾಸಿಕ ದಾಖಲೆಗಳು ಮತ್ತು ಛಾಯಾಚಿತ್ರಗಳ ಪ್ರದರ್ಶನ’ ಗುರುವಾರ ಆರಂಭವಾದದ್ದು ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಸಭಾಂಗಣದಲ್ಲಿ.
ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿ, ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ನ.27ರಿಂದ ನ.29ರವರೆಗೆ ಮೂರು ದಿನ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮಂಡ್ಯ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಕೆ.ವೀರಣ್ಣಗೌಡ, ಎ.ಕೆಂಚಪ್ಪ, ಎಂ.ಪುಟ್ಟೇಗೌಡ, ಎಂ.ಆರ್.ಎನ್. ಶಾಸ್ತ್ರಿ, ಪಿ.ಎನ್. ನರಸಿಂಹಯ್ಯ, ಕೆ.ಆರ್. ಗುಂಡೂರಾವ್ ಇತ್ಯಾದಿ ಮಹಾಪುರುಷರ ವಿವರಗಳನ್ನು ಓದಿದ ಜಿಲ್ಲೆಯ ವಿದ್ಯಾರ್ಥಿಗಳು ಹೆಮ್ಮೆ ಪಟ್ಟರು.
1917ರಲ್ಲಿ ಕನ್ನಂಬಾಡಿಯಲ್ಲಿರುವ ‘ಕಾವೇರಿ ಜಲಾಶಯ’ವನ್ನು ‘ಕೃಷ್ಣರಾಜ ಸಾಗರ’ (ಕೆ.ಆರ್.ಎಸ್) ಎಂದು ಮರುನಾಮಕರಣ ಮಾಡಿರುವ ಸರ್ಕಾರಿ ಆದೇಶ, ಪ್ಲೇಗ್ ಸೋಂಕಿತ ಜನರು ಚುಂಚನಗಿರಿ ಜಾತ್ರೆ ಮತ್ತು ಮೇಲುಕೋಟೆಯ ವೈರಮುಡಿ ಉತ್ಸವಕ್ಕೆ ಆಗಮಿಸುವುದನ್ನು ನಿಷೇಧಿಸಿರುವ 1899ರ ಆದೇಶದ ಪ್ರತಿಗಳು ನೋಡುಗರ ಗಮನ ಸೆಳೆದವು.
ಮೈಸೂರು ಸಂಸ್ಥಾನದ ಅರಸರ ವಂಶಾವಳಿ, ದಿವಾನರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕ ಮತ್ತು ವಿವಾಹ ಮಹೋತ್ಸವದ ಆಹ್ವಾನ ಪತ್ರಿಕೆ, ಗಣ್ಯರು ನೀಡಿದ ಉಡುಗೊರೆ ವಿವರ, ದಸರಾ ಪರಂಪರೆ, ಜಟ್ಟಿಗಳ ಕಾಳಗದ ವಿವರ, ‘ರಾಮರಾಜ್ಯ’ ಎಂದು ಕರೆದ ಮಹಾತ್ಮ ಗಾಂಧೀಜಿಯವರ ಉಲ್ಲೇಖ ಕುರಿತ ಐತಿಹಾಸಿಕ ದಾಖಲೆಗಳು ಸುವರ್ಣ ಯುಗಕ್ಕೆ ಸಾಕ್ಷಿಯನ್ನು ಒದಗಿಸುತ್ತವೆ.
ಚಿತ್ರಕಲಾವಿದ ರಾಜ ರವಿವರ್ಮರ ಕುಂಚದ ಮೋಡಿಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ, ರವಿವರ್ಮರ ‘ಸುಂದರ ಬರವಣಿಗೆ’ಯನ್ನು ಬಹುತೇಕರು ನೋಡಿಲ್ಲ. ಅಂಥದ್ದೊಂದು ಲಿಪಿಯ ಸಂಗ್ರಹ ಇಲ್ಲಿ ಕಂಡು ಬಂದಿತು. ಮೈಸೂರು ಅರಸರ ಭಾವಚಿತ್ರಗಳು, ದಸರಾ ದರ್ಬಾರ್, ದಸರಾ ಮೆರವಣಿಗೆ, ಅರಸರೊಂದಿಗೆ ಅತಿ ಗಣ್ಯರ ಛಾಯಾಚಿತ್ರಗಳು ಗತಕಾಲದ ವೈಭವಕ್ಕೆ ಕನ್ನಡಿ ಹಿಡಿದಿವೆ.
ಕನ್ನಡ ಭಾಷಾ ಅಧಿನಿಯಮ ಕಾಯ್ದೆ 1963, ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯವಾಗಿ ಬಳಸುವ ಬಗ್ಗೆ ಆದೇಶದ ಪ್ರತಿ–1970, ಕನ್ನಡ ಭಾಷೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ತಿನಲ್ಲಿ ಚರ್ಚೆಯಾಗಿರುವ ಭಾಷಣದ ಪ್ರತಿಗಳು–1956, ಕರ್ನಾಟಕ ಏಕೀಕರಣಕ್ಕೆ ಸಂಬಂಧಿಸಿದಂತೆ ಸಾಧ್ವಿ ಪತ್ರಿಕೆಯಲ್ಲಿ ಪ್ರಕಟಗೊಂಡ ಪತ್ರಿಕಾ ತುಣುಕುಗಳ ಅಪೂರ್ಣ ಸಂಗ್ರಹ ಪ್ರದರ್ಶನದಲ್ಲಿ ಕಂಡು ಬಂದಿತು.
ಉದ್ಘಾಟನಾ ಸಮಾರಂಭದಲ್ಲಿ ಮಹಿಳಾ ಸರ್ಕಾರಿ ಕಾಲೇಜಿನ (ಸ್ವಾಯತ್ತ) ಪ್ರಾಂಶುಪಾಲ ಪ್ರೊ. ಗುರುರಾಜ್ ಪ್ರಭು ಕೆ, ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿ ಉಪನಿರ್ದೇಶಕ ಮಂಜುನಾಥ ಎಚ್.ಎಲ್, ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣಗೌಡ ಎಚ್, ಸಹ ಪ್ರಾಧ್ಯಾಪಕರಾದ ಶಿವರಾಮು ಎಸ್, ಕವಿತಾ ಹಾಗೂ ಕೆ.ಎಂ, ಶಾಂತರಾಜು ಟಿ.ಎನ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ನಿರ್ದೇಶಕ
ಇತಿಹಾಸ ಕೇವಲ ಮರಣ ಹೊಂದಿದವರ ಕಥೆಯೆಂದು ಭಾವಿಸದೆ ಜೀವಂತ ಪ್ರವಾಸ ಎಂದು ತಿಳಿಯಿರಿ. ದಾಖಲೆ ಕಳೆದುಕೊಂಡರೆ ಇತಿಹಾಸ ಕಳೆದುಕೊಂಡಂತೆ ಗವಿಸಿದ್ದಯ್ಯ.ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.