
ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಚನ್ನನಕೆರೆ, ಜಕ್ಕನಹಳ್ಳಿ, ಗಣಂಗೂರು, ಕಾಳೇನಹಳ್ಳಿ, ಮುಂಡುಗದೊರೆ ಗ್ರಾಮ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಯನ್ನು ಅಕ್ರಮವಾಗಿ ನಡೆಸುತ್ತಾ ಸರ್ಕಾರಕ್ಕೆ ನೂರಾರು ಕೋಟಿ ರೂಪಾಯಿ ರಾಜಧನ ನಷ್ಟ ಮಾಡುತ್ತಿರುವ ವ್ಯಕ್ತಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ರೈತ ಸಂಘ(ಮೂಲ ಸಂಘಟನೆ), ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಗಣಿ ಮತ್ತು ಭೂ ವಿಜ್ಞಾನ ಕಚೇರಿ ಎದುರು ಜಮಾವಣೆಗೊಂಡ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಅಕ್ರಮವಾಗಿ 30ಕ್ಕೂ ಹೆಚ್ಚು ಜೆಲ್ಲಿ ಕ್ರಷರ್‌ಗಳಿಗೆ ಕಲ್ಲು ಕ್ವಾರಿ ಇರುವುದಿಲ್ಲ. ಇವರು ಸರ್ಕಾರಿ ಗೋಮಾಳ ಹಾಗೂ ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಪ್ರತಿನಿತ್ಯ 2000 ಮೆಟ್ರಿಕ್ ಟನ್ ಕಲ್ಲನ್ನು ಭಯವಿಲ್ಲದೇ ಸಾಗಿಸುತ್ತಿದ್ದಾರೆ, ಸರ್ಕಾರಕ್ಕೆ ರಾಜಧನ ಬರೋಬ್ಬರಿ ಒಂದು ದಿನಕ್ಕೆ ಒಂದು ಕ್ರಷರ್‌ನಿಂದ ₹74 ಲಕ್ಷ ವೆಂದರೆ ಇನ್ನುಳಿದ ಕ್ರಷರ್‌ಗಳಿಂದ ಕೋಟಿ ಕೋಟಿಯಷ್ಟು ನಷ್ಟವಾಗುತ್ತಿದೆ ಎಂದು ಆರೋಪಿಸಿದರು.
ಇಲ್ಲಿ ನಾಲಾ ಸುರಂಗವಿದ್ದು ಐದು ಕ್ರಷರ್‌ಗಳು ಕೇವಲ 200 ಮೀಟರ್ ಸಮೀಪದಲ್ಲಿ ಗಣಿಗಾರಿಕೆ ನಡೆಸುತ್ತಿವೆ. ಒಂದು ಕಿ.ಮೀ. ವ್ಯಾಪ್ತಿಯಿಂದ ದೂರ ಇರಬೇಕೆಂದು ಆದೇಶವೇ ಇದ್ದರೂ ಗಾಳಿಗೆ ತೂರಲಾಗಿದೆ. ಇದರ ಬಗ್ಗೆ 2012ರಲ್ಲಿಯೇ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ಪತ್ರ ಬರೆದು ಸುರಂಗಕ್ಕೆ ಅಪಾಯ ಇರುವುದನ್ನು ತಿಳಿಸಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘ (ಮೂಲ ಸಂಘಟನೆ) ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ, ಅಕ್ರಮ ಗಣಿಗಾರಿಕೆಯಿಂದ ಬಾಧಿತರಾಗಿರುವ ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಜರುಗಿಸುತ್ತಿಲ್ಲ. ಸರ್ಕಾರಕ್ಕೆ ಸಲ್ಲಬೇಕಾದ ರಾಜಧನ ₹400 ಕೋಟಿಗೂ ಹೆಚ್ಚು ನಷ್ಟವಾಗುತ್ತಿದೆ. ಸರ್ಕಾರದ ನಷ್ಟದ ಹಣಕ್ಕೆ ಗಣಿ ಅಧಿಕಾರಿಗಳು ರಾಜಕಾರಣಿಗಳು ಸಾಮೀಲಾಗಿ ಪಾಲುದಾರರಾಗಿದ್ದಾರೆ. ಈ ಅಕ್ರಮ ಗಣಿಗಾರಿಕೆ ನಿಲ್ಲಿಸಿ ಅರಣ್ಯ ಸಂಪತ್ತು ಹಾಗೂ ಸರ್ಕಾರಿ ಗೋಮಾಳ ಉಳಿಸದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಮಂಜೇಶ್‌ಗೌಡ ದೊಡ್ಡಪಾಳ್ಳ, ಸೋ.ಶಿ.ಪ್ರಕಾಶ್, ಶಿವಳ್ಳಿ ಚಂದ್ರು, ತೇಜು ಕೋಡಿಶೆಟ್ಟಿಪುರ, ಗಂಜಾಂ ರವಿಚಂದ್ರ, ಸಿದ್ದೇಗೌಡ, ಸಂತೋಷ್ ಭಾಗವಹಿಸಿದ್ದರು.
ಶ್ರೀರಂಗಪಟ್ಟಣ: ‘ಬಟ್ಟೆ ತೊಳೆಯುವುದು, ಇಸ್ತ್ರಿ ಮಾಡುವುದರ ಜತೆಗೆ ದೇವರ ಉತ್ಸವಗಳಲ್ಲಿ ಮಡಿ ಸೇವೆ, ಪಂಜಿನ ಸೇವೆಯಂತಹ ಮಹತ್ವದ ಕಾರ್ಯ ನಿರ್ವಹಿಸುತ್ತಿರುವ ಮಡಿವಾಳ ಜನಾಂಗವನ್ನು ಗೌರವದಿಂದ ಕಾಣಬೇಕು’ ಎಂದು ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಎಸ್. ಚಂದ್ರಶೇಖರ್ ಹೇಳಿದರು.
ತಾಲ್ಲೂಕಿನ ಪಾಲಹಳ್ಳಿಯಲ್ಲಿ ವೀರ ಮಡಿವಾಳ ಮಾಚಿದೇವರ ಸಂಘ ಭಾನುವಾರ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಮಾಚಿದೇವ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು. ‘ಮಡಿವಾಳ ಜನರಿಗೆ ಸರ್ಕಾರದಿಂದ ಸಾಕಷ್ಟು ಸವಲತ್ತುಗಳು ಸಿಗುತ್ತಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು’ ಎಂದು ಸಲಹೆ ನೀಡಿದರು.
ಪ್ರಗತಿಪರ ರೈತ ‘ರೇಡಿಯೊ’ ರಮೇಶ್, ಕೆ. ಚಂದನ್, ಹರ್ಷವರ್ಧನ್‌ಗೌಡ, ವೀಣಾ ಶಂಕರ್ ಮತ್ತು ಶುಶ್ರೂಷಕಿ ರೂಪಾ ಅವರಿಗೆ ‘ಮಡಿವಾಳ ಮಾಚಿದೇವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ವೀರ ಮಡಿವಾಳ ಮಾಚಿದೇವರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮರಳಾಗಾಲ ಮಂಜುನಾಥ್, ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಪಿಎಸಿಎಸ್ ನಿರ್ದೇಶಕ ಎಂ.ಎನ್. ಶ್ರೀನಿವಾಸ್, ಮುಖಂಡರಾದ ನರಸಿಂಹ, ಕೃಷ್ಣಪ್ಪ, ಗೋವಿಂದರಾಜು, ಗಾಯತ್ರಿ, ಶಂಕರ್, ಭಾರತಿ, ರೂಪಾ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.