
ಮಂಡ್ಯ: ಕನ್ನಡ ರಾಜ್ಯೋತ್ಸವ ದಿನದಂದು ಕುವೆಂಪು ರಚಿತ ನಾಡಗೀತೆ ನೂರು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸಹಸ್ರಾರು ಕಂಠಗಳಿಂದ ನಾಡಗೀತೆ ಗಾಯನ (ಶತಮಾನದ ಸಂಭ್ರಮಕ್ಕೆ ಸಹಸ್ರ ಕಂಠಗಳಿಂದ ನಾಡಗೀತೆ ಗಾಯನ) ಮಾಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
ಕನ್ನಡ ರಾಜ್ಯೋತ್ಸವ ಆಚರಿಸುವ ಸಂಬಂಧ ಶನಿವಾರ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯ ಶಾಲೆಗಳಿಂದ ಆಸಕ್ತ ಸಾವಿರ ಮಕ್ಕಳನ್ನು ಆಯ್ಕೆ ಮಾಡಿ ಅವರಿಗೆ ಮುಂಚಿತವಾಗಿ ನಾಡಗೀತೆ ಗಾಯನದ ತರಬೇತಿ ನೀಡಿ ಎಂದು ಹೇಳಿದರು.
ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಈಗಾಗಲೇ ಸ್ವಾಗತ ಸಮಿತಿ, ವೇದಿಕೆ ಸಮಿತಿ, ಸಂಸ್ಕೃತಿಕ ಸಮಿತಿಯನ್ನು ರಚಿಸಲಾಗಿದೆ. ಎಲ್ಲಾ ಸಮಿತಿಯ ಸದಸ್ಯರು ನಿಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ನಿಯಮಾನುಸಾರ ಎಲ್ಲರಿಗೂ ಆಹ್ವಾನ ಪತ್ರಿಕೆಗಳನ್ನು ನೀಡಿ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಮಾತನಾಡಿ, ‘ಎಲ್ಲ ಶಾಲಾ ವಿದ್ಯಾರ್ಥಿಗಳಿಗೂ ಬಿಳಿ ಸಮವಸ್ತ್ರ ಧರಿಸಿ ಕಾರ್ಯಕ್ರಮಕ್ಕೆ ಹಾಜರಾಗಬೇಕು. ಇವತ್ತಿನಿಂದಲೇ ನಾಡಗೀತೆ ಗಾಯನಕ್ಕೆ ಆಸಕ್ತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಲಯಬದ್ಧವಾಗಿ ನಾಡಗೀತೆ ಹಾಡುವ ಕುರಿತಾಗಿ ತರಬೇತಿ ನೀಡಿ. ಎಲ್ಲ ವಿದ್ಯಾರ್ಥಿಗಳಿಗೆ ತರಬೇತಿ ದಿನಗಳಲ್ಲಿ ಹಾಗೂ ಕನ್ನಡ ರಾಜ್ಯೋತ್ಸವ ದಿನದಂದು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ವಿಶ್ವನಾಥ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಪ್ರತೀಕ್, ನಗರಸಭೆ ಪೌರಾಯುಕ್ತೆ ಪಂಪಶ್ರೀ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚಲುವಯ್ಯ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು ಇದ್ದರು.
32 ಶಾಲೆಗಳಿಂದ ಪಥಸಂಚಲನ ನಾಲ್ಕು ಸಮಿತಿಗಳ ರಚನೆ ಬಿಳಿ ಸಮವಸ್ತ್ರ ಧರಿಸಿ ಬರಲು ಸೂಚನೆ
ಸಮ್ಮೇಳನ ಬಿಂಬಿಸುವ ‘ಟ್ಯಾಬ್ಲೊ’ ಪ್ರದರ್ಶನ
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಿಂಬಿಸುವ ಟ್ಯಾಬ್ಲೊ ಪ್ರದರ್ಶನ ಮಾಡಲಾಗುವುದು. ಜೊತೆಗೆ ವಿವಿಧ ಇಲಾಖೆಗಳ 20 ಟ್ಯಾಬ್ಲೊಗಳ ಪ್ರದರ್ಶನ ನಡೆಸಲಾಗುವುದು ತಾಯಿ ಭುವನೇಶ್ವರಿಗೆ ವಿಶೇಷ ಅಲಂಕಾರ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ 32 ಶಾಲೆಗಳಿಂದ ಪಥಸಂಚಲನ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವಂತಹ ಕಾರ್ಯಕ್ರಮಗಳಿಗೆ ಮಾತ್ರ ಅವಕಾಶ ನೀಡಿ. ಜಿಲ್ಲೆಯ ಐದು ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲಾ ಪ್ರದರ್ಶನ ನಡೆಸಲಾಗುವುದು ಎಂದು ಮಾಹಿತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.