ADVERTISEMENT

ಮಂಡ್ಯ | ಕಾರ್ಖಾನೆ ಸ್ಥಾಪನೆಗೆ ಕ್ರಮ: ಸೂಕ್ತ ಜಾಗ ಗುರುತಿಸಲು HDK ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 3:10 IST
Last Updated 17 ಅಕ್ಟೋಬರ್ 2025, 3:10 IST
<div class="paragraphs"><p>ಮಂಡ್ಯ ನಗರದ ಸಂತೇಬೀದಿಯಲ್ಲಿ ನಿರ್ಮಿಸಿರುವ ಜಯಚಾಮರಾಜೇಂದ್ರ ಮಾರುಕಟ್ಟೆಯನ್ನು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. ನಗರಸಭೆ ಉಪಾಧ್ಯಕ್ಷ ಅರುಣ್‌ಕುಮಾರ್‌, ಅಧ್ಯಕ್ಷ ಎಂ.ವಿ ಪ್ರಕಾಶ್‌, ಜಿಲ್ಲಾಧಿಕಾರಿ ಕುಮಾರ, ಶಾಸಕ ಪಿ.ರವಿಕುಮಾರ್‌ ಪಾಲ್ಗೊಂಡಿದ್ದರು&nbsp;&nbsp;</p></div>

ಮಂಡ್ಯ ನಗರದ ಸಂತೇಬೀದಿಯಲ್ಲಿ ನಿರ್ಮಿಸಿರುವ ಜಯಚಾಮರಾಜೇಂದ್ರ ಮಾರುಕಟ್ಟೆಯನ್ನು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. ನಗರಸಭೆ ಉಪಾಧ್ಯಕ್ಷ ಅರುಣ್‌ಕುಮಾರ್‌, ಅಧ್ಯಕ್ಷ ಎಂ.ವಿ ಪ್ರಕಾಶ್‌, ಜಿಲ್ಲಾಧಿಕಾರಿ ಕುಮಾರ, ಶಾಸಕ ಪಿ.ರವಿಕುಮಾರ್‌ ಪಾಲ್ಗೊಂಡಿದ್ದರು  

   

–ಪ್ರಜಾವಾಣಿ ಚಿತ್ರ

ಮಂಡ್ಯ: ‘ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವರ್ತಕರ ಮಾರುಕಟ್ಟೆಯ ಮಳಿಗೆಗಳನ್ನು ಹಲವು ವರ್ಷಗಳಿಂದ ಶ್ರಮವಹಿಸಿ ವ್ಯಾಪಾರ ಮಾಡಿಕೊಂಡು ಬರುತ್ತಿರುವಂತಹ ವರ್ತಕರಿಗೆ ಹಂಚಲಾಗುವುದು. ಇದರಲ್ಲಿ ಯಾವುದೇ ಗೊಂದಲ ಬೇಡ’ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ADVERTISEMENT

ನಗರದ ಪೇಟೆ ಬೀದಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜಯಚಾಮರಾಜೇಂದ್ರ ಒಡೆಯರ್ ಮಾರುಕಟ್ಟೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕಾರ್ಖಾನೆ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗೆ ಸೂಕ್ತ ಜಾಗ ಗುರುತಿಸಲು ನಿರ್ದೇಶನ ನೀಡಿದ್ದೇನೆ ಎಂದರು.

ಮಂಡ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸ್ಥಳದ ಸಮಸ್ಯೆ ಇದೆ ಹಾಗೂ ಕಾರ್ಖಾನೆ ನಿರ್ಮಾಣ ಮಾಡಲು ಮೂಲಸೌಕರ್ಯ ಒದಗಿಸುವ ಜವಾಬ್ದಾರಿ ಸರ್ಕಾರದ ಮೇಲೆ ಇದೆ. ಪ್ರಸ್ತುತ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯ ವ್ಯಾಪ್ತಿಯಲ್ಲೇ ಸುಮಾರು 47 ಬೃಹತ್ ಕೈಗಾರಿಕೆಗಳು ಇವೆ. ಆದರೆ ಲಾಭದಲ್ಲಿ ನಡೆಯುತ್ತಿರುವುದು ಬಿ.ಎಚ್.ಇ.ಎಲ್ ಸಂಸ್ಥೆ ಮಾತ್ರ. ಎಚ್.ಎಂ.ಟಿ ಸಂಸ್ಥೆಯನ್ನು ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

10 ಸಾವಿರ ಉದ್ಯೋಗ ಸೃಷ್ಟಿ:

ಪುಣೆ, ಮುಂಬೈ ನಗರಗಳಲ್ಲಿರುವ ಕೈಗಾರಿಕೆಗಳಲ್ಲಿ ಕೆಲಸ ಕೊಡಿಸಲು ನಾವು ಸಿದ್ಧರಿದ್ದೇವೆ. ಆದರೆ, ಜಿಲ್ಲೆಯ ಯುವಕರು ಸ್ಥಳೀಯವಾಗಿ ಕೆಲಸ ಕೇಳುತ್ತಿದ್ದಾರೆ. ಜಿಲ್ಲೆಯಲ್ಲಿ ನಿರುದ್ಯೋಗ ಹೆಚ್ಚಾಗಲು ಇದು ಕೂಡ ಕಾರಣ. ಇನ್ನು ನಾಲ್ಕು ತಿಂಗಳಲ್ಲಿ ಭದ್ರಾವತಿ ಉಕ್ಕಿನ ಕಾರ್ಖಾನೆ ಪ್ರಾರಂಭ ಮಾಡಲಿದ್ದೇವೆ. ಇದರಿಂದ 8ರಿಂದ 10 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಭರವಸೆ ನೀಡಿದರು.

ಕೇಂದ್ರ ಸಚಿವರಿಗೆ ಶಾಸಕ ಮನವಿ:

ಶಾಸಕ ಪಿ.ರವಿಕುಮಾರ್ ಮಾತನಾಡಿ, ‘ಮಂಡ್ಯ ಮಾರುಕಟ್ಟೆ ಅತಂತ್ರದಿಂದ ಕೂಡಿತ್ತು. ನಮ್ಮ ಸರ್ಕಾರ ಬಂದ ನಂತರ ಕೇಂದ್ರ ಸರ್ಕಾರ, ನಗರಸಭೆಯ ಅನುದಾನದಿಂದ ಸುಮಾರು ₹10 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ನೂತನ ಮಾರುಕಟ್ಟೆ ಸ್ಥಾಪಿಸಲಾಗಿದೆ. ಮಂಡ್ಯ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಬೇಕು. ಮಂಡ್ಯ ಸುತ್ತಮುತ್ತ ನೂರಾರು ಎಕರೆ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ. ಜಿಲ್ಲೆಯ ಯುವಕರಿಗೆ ಅನುಕೂಲವಾಗುವಂತೆ ಕೈಗಾರಿಕೆಗಳನ್ನು ಇಲ್ಲಿ ಸ್ಥಾಪಿಸಿ’ ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು.

ನಗರಸಭೆ ಅಧ್ಯಕ್ಷ ಎಂ.ವಿ ಪ್ರಕಾಶ್ ಮಾತನಾಡಿ, ‘ಜಿಲ್ಲೆಯ ಮಾರುಕಟ್ಟೆಯನ್ನು ಜಯಚಾಮರಾಜೇಂದ್ರ ಒಡೆಯರ್ ಅವರು 1951ರಲ್ಲಿ ಶಂಕುಸ್ಥಾಪನೆ ಮಾಡಿದ್ದರು. 1960ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಡಿ ಜಡ್ತಿ ಅವರಿಂದ ಉದ್ಘಾಟನೆಯಾಗಿತ್ತು. ಸದರಿ ಮಾರುಕಟ್ಟೆ ಜಿಲ್ಲೆಯ ಹಳೆಯ ಮತ್ತು ದೊಡ್ಡ ಮಾರುಕಟ್ಟೆಯಾಗಿದೆ. ಸುಮಾರು ₹10.21 ಕೋಟಿ ಅನುದಾನದಲ್ಲಿ ನೂತನ ಮಾರುಕಟ್ಟೆನ್ನು ನಿರ್ಮಾಣ ಮಾಡಲಾಗಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನಗರಸಭೆ ಉಪಾಧ್ಯಕ್ಷ ಅರುಣ್‌ಕುಮಾರ್‌, ಪೌರಾಯುಕ್ತೆ ಪಂಪಶ್ರೀ, ಮುಡಾ ಅಧ್ಯಕ್ಷ ನಯೀಮ್ ಪಾಲ್ಗೊಂಡಿದ್ದರು. 

ಸುಸಜ್ಜಿತ ಆಟೊ ನಿಲ್ದಾಣ ಉದ್ಘಾಟನೆ

ಮಂಡ್ಯದ ಸಂಜಯ ನಗರ ವೃತ್ತದಲ್ಲಿ ₹35 ಲಕ್ಷ ವೆಚ್ಚದಲ್ಲಿ ನಿರ್ಮಾಣ ಆಗಿರುವ ಸುಸಜ್ಜಿತ ಆಟೊ ನಿಲ್ದಾಣವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗುರುವಾರ ಉದ್ಘಾಟಿಸಿದರು. 

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಂಡ್ಯ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಈ ಆಟೊ ನಿಲ್ದಾಣ ನಿರ್ಮಾಣ ಮಾಡಿದ್ದೇವೆ. ನಗರದಲ್ಲಿ ಆಟೊ ವ್ಯವಸ್ಥೆ ಜನತೆಯ ಸಂಚಾರಕ್ಕೆ ಬಹಳ ಅನುಕೂಲವಾಗಿದೆ. ಈ ಸಂದರ್ಭದಲ್ಲಿ ಅನುದಾನ ನೀಡಿದ ದೇವೇಗೌಡರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಚಿವರು ಹೇಳಿದರು.

ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮುಖಂಡರಾದ ರಾಮಚಂದ್ರ, ನಗರಸಭೆ ಅಧ್ಯಕ್ಷ ಪ್ರಕಾಶ್ ಪಾಲ್ಗೊಂಡಿದ್ದರು. 

‘ಮೈಷುಗರ್ ಶಾಲೆ ಅಭಿವೃದ್ಧಿಗೆ ₹10 ಕೋಟಿ’

ಮಂಡ್ಯ: ‘ಜಿಲ್ಲೆಯ ಹೆಗ್ಗುರುತುಗಳಲ್ಲಿ ಒಂದಾಗಿರುವ ಮೈಷುಗರ್ ಶಾಲೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಶೀಘ್ರವೇ ₹10 ಕೋಟಿ ಒದಗಿಸಲಾಗುವುದು’ ಎಂದು ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು. 

ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಈ ಶಾಲೆಯನ್ನು ಕೊಡುವುದು ಬೇಡ ಎಂದು ಹೇಳಿದ್ದೇನೆ. ಅಲ್ಲದೆ, ಶಾಲೆಯ ಅಭಿವೃದ್ಧಿಗೆ ನೆರವು ನೀಡುವ ಭರವಸೆ ನೀಡಿದ್ದೆ. ಆ ವಿಚಾರದಲ್ಲಿ ನಮ್ಮ ತಂಡವೊಂದು ಮಂಡ್ಯದಲ್ಲಿ ಕೆಲಸ ಮಾಡುತ್ತಿದೆ. ಯಾರೂ ಅದರ ಬಗ್ಗೆ ಲಘುವಾಗಿ ಮಾತನಾಡುವ ಅವಶ್ಯಕತೆ ಇಲ್ಲ. ಕೆಲ ದಿನಗಳಿಂದ ಕಾರಣಾಂತರಗಳಿಂದ ಮಂಡ್ಯಕ್ಕೆ ಭೇಟಿ ಕೊಡಲು ಆಗಿರಲಿಲ್ಲ. ಆದರೂ ನಾನು ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು ಪ್ರತಿನಿತ್ಯ ಜಿಲ್ಲೆಯ ಮಾಹಿತಿ ಪಡೆಯುತ್ತಿದ್ದೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡುವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.