ADVERTISEMENT

‘ಮಿಮ್ಸ್‌‘ ಜಾಗ ಒತ್ತುವರಿ ತೆರವಿಗೆ ನಿರ್ಲಕ್ಷ್ಯ: DC ಸೇರಿಮೂವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 4:29 IST
Last Updated 26 ಸೆಪ್ಟೆಂಬರ್ 2025, 4:29 IST
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಮಿಮ್ಸ್‌) ಹೊರನೋಟ 
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಮಿಮ್ಸ್‌) ಹೊರನೋಟ    

ಮಂಡ್ಯ: ಇಲ್ಲಿಯ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌) ಆವರಣದಲ್ಲಿ ನೆಲಸಿರುವ ತಮಿಳು ಕಾಲೊನಿ ನಿವಾಸಿಗಳನ್ನು ಹೊಸದಾಗಿ ಕಟ್ಟಿರುವ 576 ಮನೆಗಳಿಗೆ ಸ್ಥಳಾಂತರ ಮಾಡಿ, ಆಸ್ಪತ್ರೆಗೆ ಸೇರಿದ 18 ಎಕರೆ ಜಾಗದ ಒತ್ತುವರಿ ತೆರವುಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ, ಲೋಕಾಯುಕ್ತ ಸಂಸ್ಥೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರಕರಣ ದಾಖಲಿಸಲಾಗಿದೆ. 

ಮಂಡ್ಯ ಜಿಲ್ಲಾಧಿಕಾರಿ ಕುಮಾರ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಅಶೋಕ್‌ ಮತ್ತು ಮಿಮ್ಸ್‌ ನಿರ್ದೇಶಕ ಡಾ.ನರಸಿಂಹಮೂರ್ತಿ ಈ ಮೂವರ ವಿರುದ್ಧ ಕರವೇ (ಶಿವರಾಮೇಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಡಿ.ಜಯರಾಮ ದೂರು ಸಲ್ಲಿಸಿದ್ದಾರೆ.  

‘ಕಳೆದ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ವಾಸ್ತವಾಂಶ ಮನದಟ್ಟು ಮಾಡಿ, ಆಸ್ಪತ್ರೆಗೆ ಸೇರಿದ ಜಾಗವನ್ನು ಒತ್ತುವರಿ ತೆರವುಗೊಳಿಸುವಲ್ಲಿ ವಿಫಲರಾಗಿ ರಾಜಕೀಯ ಒತ್ತಡಕ್ಕೆ ಮಣಿಯಲಾಗಿದೆ. ಇದರಿಂದ ಮಂಡ್ಯ ಜಿಲ್ಲೆಯ 23 ಲಕ್ಷ ಮಂದಿ ಅಗತ್ಯ ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ. 

ADVERTISEMENT

ಅಗತ್ಯ ಸ್ಥಳಾವಕಾಶ ಇಲ್ಲವೆಂದು 100 ಹಾಸಿಗೆಗಳ ‘ತಾಯಿ ಮತ್ತು ಮಕ್ಕಳ ಆಸ್ಪತ್ರೆ’ಯನ್ನು ಯಾವುದೇ ಸಾರಿಗೆ ಸೌಲಭ್ಯ ಇಲ್ಲದ ಮಂಡ್ಯ ನಗರದಿಂದ 12 ಕಿ.ಮೀ. ದೂರದ ಬಿ. ಹೊಸೂರು ಕಾಲೊನಿ ಬಳಿ ನಿರ್ಮಿಸಿದ್ದು, ಇದುವರೆಗೆ ಉದ್ಘಾಟನೆಯಾಗಿಲ್ಲ. ಜತೆಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಅಪಘಾತ ತುರ್ತು ಚಿಕಿತ್ಸಾ ಘಟಕ ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ವಿಸ್ತರಣೆ ಮಾಡಲು ತೊಡಕಾಗಿದೆ ಎಂದು ದೂರಲಾಗಿದೆ. 

‘ತಮಿಳು ಕಾಲೊನಿ ನಿವಾಸಿಗಳು 2023ರಲ್ಲಿ ರಾಜ್ಯ ಹೈಕೋರ್ಟ್‌ನಲ್ಲಿ ಸ್ಥಳಾಂತರ ಮಾಡದಂತೆ ‘ತಾತ್ಕಾಲಿಕ ತಡೆಯಾಜ್ಞೆ’ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಡೆಯಾಜ್ಞೆ ತೆರವುಗೊಳಿಸಿ, ಮಂಡ್ಯ ಜನರಿಗೆ ವೈದ್ಯಕೀಯ ಸೇವೆ ದೊರೆಯುವಂತೆ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಓಟ್‌ ಬ್ಯಾಂಕ್‌ ರಾಜಕಾರಣ ಕೊನೆಗಾಣಿಸಬೇಕು’ ಎಂದು ರಕ್ಷಣಾ ವೇದಿಕೆಯ ಮುದ್ದೇಗೌಡ, ಆಟೊ ವೆಂಕಟೇಶ್‌, ಶಿವರಾಮ್‌ ಮುಂತಾದವರು ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.