
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿದರು
ಮಂಡ್ಯ: ಜಿಲ್ಲೆಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ನಾಲ್ವರು ಮತ್ತು ದರೋಡೆ ಪ್ರಕರಣದಲ್ಲಿ ಐವರು ಸೇರಿದಂತೆ ಒಟ್ಟು 9 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೊಲೆ ಪ್ರಕರಣದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು ಮಿಣಜಿಬೋರಕೊಪ್ಪಲು ಗ್ರಾಮದ ಶಿವಕುಮಾರ್, ಪಾಲಹಳ್ಳಿಯ ಹರ್ಷ, ಕ್ಯಾತನಹಳ್ಳಿಯ ಅಭಿಷೇಕ್, ಬ್ಯಾಟೆತಿಮ್ಮನಕೊಪ್ಪಲು ಶಿವು ಬಂಧಿತರು.
ದರೋಡೆ ಪ್ರಕರಣದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ತಾಲ್ಲೂಕು ಶೇಷಗಿರಿಹಳ್ಳಿ ಕಾಲನಿಯ ಗಂಗರಾಜು ಅಲಿಯಾಸ್ ಗಂಗ (ರಮೇಶ್), ರಾಮನಗರ ಟೌನ್ ನಿವಾಸಿಗಳಾದ ಮಂಜುನಾಥ್ ಅಲಿಯಾಸ್ ಕೆಂಪ, ಎಂ.ಶಶಿಕುಮಾರ್ ಅಲಿಯಾಸ್ ಗೆಂಡೆ, ಐಜೂರು ಕೃಷ್ಣ ಅಲಿಯಸ್ ರಾಜು, ಮದ್ದೂರು ಟೌನ್ ನಿವಾಸಿ ಎಂ.ಕೆ. ಸಂದೇಶ್ ಅಲಿಯಾಸ್ ಕಲರ್ ಬಂಧಿತರು ಎಂದು ಮಾಹಿತಿ ನೀಡಿದರು.
ಬಂಧಿತ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಎರಡೂ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬಹುಮಾನ ಘೋಷಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಈ. ಗಂಗಾಧರಸ್ವಾಮಿ, ಇನ್‌ಸ್ಪೆಕ್ಟರ್ ಶರತ್‌ಕುಮಾರ್ ಇತರರು ಹಾಜರಿದ್ದರು.
ಶ್ರೀರಂಗಪಟ್ಟಣ ತಾಲ್ಲೂಕು ಮಿಣಜಿಬೋರಕೊಪ್ಪಲು ಗ್ರಾಮದ ಹೊರವಲಯದ ಖಾಲಿ ಜಾಗದಲ್ಲಿ ಅದೇ ಗ್ರಾಮದ ಶಿವಕುಮಾರ್ ಮತ್ತು ಸ್ನೇಹಿತರು ನ.18ರಂದು ಪಾರ್ಟಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಶಿವಕುಮಾರ್ ಮತ್ತು ಕ್ಯಾತನಹಳ್ಳಿ ಶಶಾಂಕ್‌ಗೌಡ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿ ಶಶಾಂಕ್ ಮೇಲೆ ಶಿವಕುಮಾರ್ ಹಲ್ಲೆ ನಡೆಸಿದ್ದ.
ಆಗ ಕಿವಿ ಮತ್ತು ಮೂಗಿನಲ್ಲಿ ರಕ್ತ ಬಂದಿದ್ದರಿಂದ ಹರ್ಷ, ಅಭಿಷೇಕ್, ಶಿವು ಅವರು ಶಶಾಂಕ್‌ಗೌಡ ಅವರನ್ನು ಬೈಕ್‌ನಲ್ಲಿ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದ. ಆಗ ಅಲ್ಲೇ ಇದ್ದ ಆಟೊದಲ್ಲಿ ಕ್ಯಾತನಹಳ್ಳಿಗೆ ಶಶಾಂಕ್‌ನ ಶವವನ್ನು ಅವರ ಮನೆಗೆ ತೆಗೆದುಕೊಂಡು ಹೋಗಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಸುಳ್ಳು ಹೇಳಿದ್ದರು.
ಈ ಬಗ್ಗೆ ಶಶಾಂಕ್‌ನ ತಾಯಿ ಶ್ರೀರಂಗಪಟ್ಟಣ ಪೊಲೀಸರಿಗೆ ದೂರು ನೀಡಿದ್ದರು. ಶವ ಪರೀಕ್ಷೆ ನಡೆಸಿದ ವೈದ್ಯರು, ಶಶಾಂಕ್‌ನ ದೇಹದ ಮೇಲಾಗಿರುವ ಗಾಯಗಳು ಅಪಘಾತದಿಂದ ಆಗಿರುವ ಸಾಧ್ಯತೆ ಕಡಿಮೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಆತನ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ರಾಜ್ಯದ ಹಲವೆಡೆ 90ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿ ಸೇರಿದಂತೆ ಐವರು ಅಂತರ್ ಜಿಲ್ಲಾ ದರೋಡೆಕೋರರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯ (ರಾಮನಗರ) ಬಿಡದಿ ತಾಲ್ಲೂಕು ಶೇಷಗಿರಿಹಳ್ಳಿ ಕಾಲನಿಯ ಗಂಗರಾಜು ಅಲಿಯಾಸ್ ಗಂಗ ಉರುಫ್ ರಮೇಶ್ (56), ರಾಮನಗರ ಟೌನ್ ನಿವಾಸಿಗಳಾದ ಮಂಜುನಾಥ್ ಅಲಿಯಾಸ್ ಕೆಂಪ (25), ಎಂ.ಶಶಿಕುಮಾರ್ ಅಲಿಯಾಸ್ ಗೆಂಡೆ(25), ಐಜೂರು ಕೃಷ್ಣ ಅಲಿಯಸ್ ರಾಜು (25), ಮದ್ದೂರು ಟೌನ್ ನಿವಾಸಿ ಎಂ.ಕೆ.ಸಂದೇಶ್ ಅಲಿಯಾಸ್ ಕಲರ್(2) ಬಂಧಿತರು. ಇವರಿಂದ ₹5.50 ಲಕ್ಷ ಮೌಲ್ಯದ ಸುಮಾರು 55 ಗ್ರಾಂ ತೂಕದ ಚಿನ್ನಾಭರಣಗಳು, ಕೃತ್ಯಕ್ಕೆ ಬಳಸಿದ ಒಂದು ಪಲ್ಸರ್ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಶ್ರೀರಂಗಪಟ್ಟಣ ತಾಲ್ಲೂಕು ಕೂಡಲಕುಪ್ಪ ಗ್ರಾಮದ ನಿಸರ್ಗ ಎಂಬುವವರ ಮನೆಗೆ ನ.6ರಂದು ನಸುಕಿನ ಜಾವ ದರೋಡೆಕೋರರು ನುಗ್ಗಿ ನಿಸರ್ಗ ಮತ್ತವರ ತಾಯಿಯನ್ನು ಬೆದರಿಸಿ ಹಣ ಮತ್ತು ಚಿನ್ನಾಭರಣ ಕಸಿದುಕೊಂಡು ಪರಾರಿಯಾಗಿದ್ದರು. ಜತೆಗೆ ಪಕ್ಕದ ಮನೆಯ ಸುವರ್ಣಲತಾ ಎಂಬುವರ ಮನೆಗೂ ನುಗ್ಗಿದ ಆರೋಪಿಗಳು ಅಲ್ಲಿಯೂ ಚಿನ್ನಾಭರಣ ಲೂಟಿ ಮಾಡಿದ್ದರು.
ಬೆಂಗಳೂರು ನಗರದ ಸೆಂಟ್ರಲ್ ಠಾಣೆಯಲ್ಲಿ 56 ದರೋಡೆ ಪ್ರಕರಣಗಳು, ಮಂಡ್ಯ ಪಶ್ಚಿಮ ಠಾಣೆಯಲ್ಲಿ 8 ದರೋಡೆ, ಹಲಗೂರು ಪೊಲೀಸ್ ಠಾಣೆಯಲ್ಲಿ 26 ದರೋಡೆ, ಸುಲಿಗೆ, ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.