
ಮಂಡ್ಯ: 10 ವರ್ಷಗಳ ನಂತರ ಬುಧವಾರ ನಡೆದ ಮೈಷುಗರ್ ಕಾರ್ಖಾನೆಯ ಸರ್ವ ಸದಸ್ಯರ ಸಭೆಯಲ್ಲಿ 2015–16 ಮತ್ತು 2016–17ನೇ ಸಾಲಿನ ವಾರ್ಷಿಕ ವರದಿಯನ್ನು ಗದ್ದಲ ಮತ್ತು ಗೊಂದಲದ ವಾತಾವರಣದ ನಡುವೆಯೇ ಮಂಡಿಸಲಾಯಿತು.
ಸಭೆ ಆರಂಭಕ್ಕೂ ಮುನ್ನವೇ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕಾರ್ಖಾನೆ ಪ್ರವೇಶ ದ್ವಾರದಲ್ಲಿ ರೈತ ಮುಖಂಡರು ಹಾಗೂ ಷೇರುದಾರರನ್ನೇ ತಡೆದು ತಪಾಸಣೆ ಮಾಡಲಾಯಿತು. ನಂತರ ಕಾರ್ಖಾನೆಯೊಳಗೆ ನಡೆಯುತ್ತಿದ್ದ ಸಭೆಗೆ ಕಳುಹಿಸಲಾಗುತ್ತಿತ್ತು. ಕೆಲವು ಷೇರುದಾರರ ದಾಖಲಾತಿ ಸರಿಯಿದ್ದರೂ ತಾಂತ್ರಿಕ ಕಾರಣಗಳಿಂದ ಅವರನ್ನು ಬಾಗಿಲ ಬಳಿಯೇ ತಡೆಯಲಾಗುತ್ತಿತ್ತು. ಇದರಿಂದ ಕುಪಿತಗೊಂಡ ರೈತ ಮುಖಂಡರು ಅಧ್ಯಕ್ಷರ ನಡೆಗೆ ವಿರೋಧ ವ್ಯಕ್ತಪಡಿಸಿದರು.
2015-16ನೇ ಸಾಲಿನ 82ನೇ ವಾರ್ಷಿಕ ವರದಿಯ ಸಭೆ ಆರಂಭವಾಗುತ್ತಿದ್ದಂತೆ, ‘ಸಭೆ ಇರುವ ಬಗ್ಗೆ ಮಾಹಿತಿಯೇ ಇಲ್ಲ, ಷೇರುದಾರರಿಗೆ ಏಕೆ ಸಭೆಗೆ ಆಹ್ವಾನಿಸಿಲ್ಲ. ಸಭೆಗೆ ಬಾರದ ಹಾಗೆ ಪೊಲೀಸರನ್ನು ಮುಂದಿಟ್ಟುಕೊಂಡು ಬಾಗಿಲಲ್ಲೇ ತಡೆಯುವ ಕೆಲಸ ಮಾಡಲಾಗುತ್ತಿದೆ ಎಂದು ಅಧ್ಯಕ್ಷ ಸಿ.ಡಿ. ಗಂಗಾಧರ್ ಅವರನ್ನು ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಅವರು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಉತ್ತರಿಸಿದ ಸಿ.ಡಿ. ಗಂಗಾಧರ್ ಅವರು, ‘ಮನೆ ಕುಟುಂಬದವರಲ್ಲಿ ಯಾರಾದರೂ ಒಬ್ಬ ಸದಸ್ಯರಿದ್ದರೂ ಅವರ ಹೆಸರಿನಲ್ಲಿ ಬರಬಹುದು. ಈಗಾಗಲೇ ಪ್ರತಿ ಷೇರುದಾರರ ಮನೆ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿದ್ದು, ಅವುಗಳು ಶೇ 50ರಷ್ಟು ವಾಪಸ್ ಬಂದಿವೆ. ಕೆಲವು ಷೇರುದಾರರು ಪಾಕಿಸ್ತಾನ, ಅಮೆರಿಕದಲ್ಲಿದ್ದಾರೆ ಎಂಬ ಮಾಹಿತಿ ಇದೆ ಎಂದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ರೈತ ಮುಖಂಡ ಮುದ್ದೇಗೌಡ ಅವರು, ‘ವ್ಯವಸ್ಥಿತವಾಗಿ ಸಭೆ ನಡೆಯುತ್ತಿಲ್ಲ. ಏಕೆಂದರೆ ಮಾಹಿತಿಯನ್ನೇ ನೀಡದೆ ಯಾವ ಸಭೆ ಮಾಡುತ್ತೀರಾ, ನೀವು ಸುಳ್ಳು ಹೇಳುತ್ತಿದ್ದೀರಾ’ ಎಂದು ಕೆಂಡಾಮಂಡಲವಾದರು.
‘ಸಿ.ಡಿ.ಗಂಗಾಧರ್ ಮಾತನಾಡಿ, ‘ಹೋಬಳಿ ಹಾಗೂ ಪಂಚಾಯಿತಿ ಮಟ್ಟದಲ್ಲಿ ಷೇರುದಾರರ ಬಗ್ಗೆ ಮಾಹಿತಿಯನ್ನು ಪಟ್ಟಿ ಮಾಡಿಕೊಳ್ಳಲಾಗುವುದು. ಈ ಚರ್ಚೆಯು ನಡೆಯುತ್ತಿರುವುದು 2017–18ರಲ್ಲಿ ನಾನು ಇರಲಿಲ್ಲ. ಇದರ ಬಗ್ಗೆ ಈಗಾಗಲೇ ಆಡಿಟ್ ಅಪ್‌ಡೇಟ್ ಆಗಿದೆ. ಪ್ರತಿ ಎರಡರಿಂದ ಮೂರು ತಿಂಗಳಿಗೆ ಸಾಮಾನ್ಯ ಸಭೆ ಮಾಡೇ ಮಾಡುತ್ತೇವೆ. ಏಕೆಂದರೆ 2025ರ ತನಕ ಆಡಿಟ್ ಫೈಲ್ ಮಾಡಲಿಲ್ಲ ಎಂದರೆ ಯಾವುದೇ ಸೌಲಭ್ಯ ಸಿಗುವುದಿಲ್ಲ. ಇದೇ ವರ್ಷದಲ್ಲಿಯೇ 2024–25 ಆಡಿಟ್ ಅನ್ನು ಸಭೆ ಕರೆದೆ ಮಂಡಿಸುತ್ತೇವೆ‘ ಎಂದು ಸಮಾಧಾನಪಡಿಸಲು ಯತ್ನಿಸಿದರು.
ನಂತರ 2016–17ನೇ ಸಾಲಿನ 83ನೇ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಎರಡು ವರ್ಷಗಳ ವಾರ್ಷಿಕ ವರದಿಯನ್ನು ಮಂಡಿಸಲಾಯಿತು. ಈ ಸಂದರ್ಭದಲ್ಲಿ ಸಿಐಟಿಯು ಕುಮಾರಿ ಹಾಗೂ ರೈತ ಮುಖಂಡರು, 2016–17ನೇ ಹಣಕಾಸು ವರ್ಷದಿಂದ ಸಾಕಷ್ಟು ಉತ್ಪಾದನೆ ಸಾಧ್ಯವಾಗಲಿಲ್ಲ. ಹೀಗಾಗಿ ಪ್ರಮುಖ ದುರಸ್ತಿಗಳಿಂದಾಗಿ ಉತ್ಪಾದನೆಯಲ್ಲಿ ಹಾಗೂ ಹಣಕಾಸಿನ ವಿಷಯಗಳಲ್ಲಿ ಭಾರಿ ಪ್ರಮಾಣದ ನ್ಯೂನತೆ ಕಂಡು ಬಂದವು ಎಂದು ಹೇಳುತ್ತೀರಾ. ಇದರಲ್ಲಿ ತಪ್ಪು ಯಾರದ್ದು ಇದೆ, ಅವರ ಹೆಸರನ್ನು ಹಾಗೂ ಫೋಟೊ ಸಮೇತ ಪುಸ್ತಕದಲ್ಲಿ ಮುದ್ರಿಸಬೇಕಾಗಿತ್ತು ಎಂದು ಅಧಿಕಾರಿಗಳನ್ನು ಹಾಗೂ ಅಧ್ಯಕ್ಷರ ವಿರುದ್ಧ ಹರಿಹಾಯ್ದರು.
ಸಭೆಯಲ್ಲಿ ಮೈಷುಗರ್ ವ್ಯವಸ್ಥಾಪಕ ನಿರ್ದೇಶಕ ಮಂಗಲ್‌ದಾಸ್, ಕಾರ್ಯದರ್ಶಿ ಪ್ರಸನ್ನಬೇಡಿ ಭಾಗವಹಿಸಿದ್ದರು.
ನೀವು ಸರ್ಕಾರದ ಷೇರುದಾರರೇ ಸಾಕು ಎನ್ನುವುದಾದರೆ ನಮ್ಮನ್ನೇಕೆ ಸಭೆಗೆ ಆಹ್ವಾನಿಸುತ್ತೀರಾ? ಷೇರುದಾರರ ಹೆಸರುಗಳನ್ನು ದಾಖಲೆ ಸಮೇತ ಇಟ್ಟುಕೊಳ್ಳಬೇಕುಕೆ.ಬೋರಯ್ಯ ರೈತ ಮುಖಂಡ
ಷೇರುದಾರರಿಗೆ ಸಭೆಯ ವಿಚಾರವೇ ತಿಳಿದಿಲ್ಲ. ಇವರು ಕಾರ್ಖಾನೆ ಉಳಿಸುವುದಕ್ಕೆ ಬಂದಿಲ್ಲ. ಬೇಜವಾಬ್ದಾರಿ ತನದಿಂದ ವರ್ತಿಸುವ ಆಡಳಿತ ವರ್ಗ ರೈತರ ಹಿತಾಸಕ್ತಿ ಕಾಪಾಡುತ್ತಿಲ್ಲಇಂಡುವಾಳು ಚಂದ್ರಶೇಖರ್ ಜಿಲ್ಲಾ ಘಟಕದ ಅಧ್ಯಕ್ಷ ರೈತ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.