ಮಂಡ್ಯ: ಮಳೆಯಿಂದ ಹಾನಿಗೊಳಗಾದ ಕೆಎಚ್‌ಬಿ ಕಾಲೊನಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್ ಅವರು ಅಧಿಕಾರಿ ತಂಡದ ಜೊತೆಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಗರದ ಕೆ.ಎಚ್.ಬಿ ಕಾಲೊನಿಯಲ್ಲಿ ನೀರು ನಿಂತು ಸಮಸ್ಯೆ ಉಂಟಾಗಿದೆ ಎಂದು ಸಾರ್ವಜನಿಕರು ಸಚಿವರು, ಶಾಸಕರ ಬಳಿ ಸಮಸ್ಯೆ ಹೇಳಿಕೊಂಡರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ‘₹15 ರಿಂದ 20 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಪ್ರಸ್ತುತ ಹರಿದು ಬರುತ್ತಿರುವ ಹೆಚ್ಚುವರಿ ನೀರನ್ನು ತಡೆಗಟ್ಟಲು ಸುಮಾರು ಎರಡೂವರೆ ಕಿ.ಮೀ. ಸೇತುವೆ ನಿರ್ಮಾಣ ಮಾಡಲು ಈಗಾಗಲೇ ₹15 ಕೋಟಿ ಟೆಂಡರ್ ನೀಡಲಾಗಿದೆ. ಒಟ್ಟು ₹41 ಕೋಟಿಯನ್ನು ಕೆ.ಎಚ್.ಬಿ. ಕಾಲೊನಿಯ ಮೂರನೇ ವಾರ್ಡ್ ಅಭಿವೃದ್ಧಿಗೆಂದು ನೀಡಲಾಗಿದೆ. ಅದರಲ್ಲಿ ಕೆಲವು ಭಾಗದಲ್ಲಿ ಪ್ರಕರಣ ಸಿ.ಬಿ.ಐ ನಲ್ಲಿ ಇರುವುದರಿಂದ ಅ ಭಾಗಗಳಲ್ಲಿ ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ’ ಎಂದರು.
‘ಮಳೆಯನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ, ಪ್ರಸ್ತುತದಲ್ಲಿ ಕೆಎಚ್‌ಬಿ ಕಾಲೊನಿ ಪರಿಸ್ಥಿತಿಯನ್ನು ಅವಲೋಕಿಸಿ ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು. ₹41 ಕೋಟಿ ಅಲ್ಲದೆ ಈಗ ಉಂಟಾಗಿರುವ ಸಮಸ್ಯೆಗಳಿಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಂದಾಯ ಇಲಾಖೆ ನಗರಸಭೆಯಿಂದ ಬರುವ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಜಿಲ್ಲಾಧಿಕಾರಿ ಕುಮಾರ, ಜಿ.ಪಂ. ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭಾಗವಹಿಸಿದ್ದರು.
ಮಳೆಯಿಂದಾಗಿ ರಾಜ್ಯದಲ್ಲಿ 13 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಸುಮಾರು 80 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಮಳೆ ನಿಂತ ನಂತರ ಸರ್ವೆ ನಡೆಸಿ ನಿಖರವಾದ ಬೆಳೆ ಹಾನಿ ಮಾಹಿತಿ ನೀಡಲಾಗುವುದುಎನ್.ಚಲುವರಾಯಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.