ADVERTISEMENT

ಮಂಡ್ಯ | ನೂರಡಿ ರಸ್ತೆಗೆ ಹೆಸರು: ಸದಸ್ಯರ ನಡುವೆ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 2:10 IST
Last Updated 16 ಸೆಪ್ಟೆಂಬರ್ 2025, 2:10 IST
ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್) ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಶಾಸಕ ಪಿ.ರವಿಕುಮಾರ್‌ ಅವರು ಮಾತನಾಡಿದರು
ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್) ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಶಾಸಕ ಪಿ.ರವಿಕುಮಾರ್‌ ಅವರು ಮಾತನಾಡಿದರು   

ಮಂಡ್ಯ: ನಗರದ ನೂರಡಿ ರಸ್ತೆಗೆ ನಾಡಪ್ರಭು ಕೆಂಪೇಗೌಡ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಹೆಸರಿಡುವ ಸಂಬಂಧ ನಗರಸಭೆ ಸದಸ್ಯರ ನಡುವೆ ಕೆಲಕಾಲ ಜಟಾ‍ಪಟಿ ನಡೆದು, ಗೊಂದಲ ಸೃಷ್ಟಿಯಾಯಿತು.

ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಸೋಮವಾರ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್) ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಆಡಳಿತಾರೂಢ ಹಾಗೂ ವಿಪಕ್ಷದ ಸದಸ್ಯರ ನಡುವೆ ಜಟಾಪಟಿ ನಡೆಯಿತು.

ಸದಸ್ಯ ಶ್ರೀಧರ್ ಮಾತನಾಡಿ, 1976ರ ಜೂನ್ 15ರಂದು ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ನೂರಡಿ ರಸ್ತೆಗೆ ಹೆಸರಿಡುವ ಸಂಬಂಧ ಚರ್ಚೆಯಾಗಿ ಅಂಬೇಡ್ಕರ್ ರಸ್ತೆ ಎಂದು ನಾಮಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದು ಕಾರ್ಯರೂಪಕ್ಕೆ ಬಂದಿಲ್ಲ. ಕಳೆದ ಮೇ 12 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಎಚ್.ಎಸ್.ಮಂಜು ಅವರು ಚರ್ಚಿಸಿ, ಇಬ್ಬರೂ ಮಹಾನ್ ವ್ಯಕ್ತಿಗಳ ಹೆಸರನ್ನು ರಸ್ತೆಗೆ ನಾಮಕರಣ ಮಾಡುವುದು ಸೂಕ್ಷ್ಮ ವಿಷಯವಾಗಿದ್ದು, ಶಾಸಕರ ಸಮ್ಮುಖದಲ್ಲಿ ವಿಶೇಷ ಸಭೆ ನಡೆಸಿ, ಚರ್ಚಿಸಿ ನಂತರ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂದು ತಿಳಿಸಿದ್ದರು ಎಂದರು.

ADVERTISEMENT

1976ರ ಜೂನ್ 15ರಂದು ತೀರ್ಮಾನಿಸಿರುವಂತೆ ಅಂಬೇಡ್ಕರ್ ಅವರ ಹೆಸರನ್ನು ಇಡುವುದು ಸೂಕ್ತವಾಗಿದ್ದು, ಇದಕ್ಕೆ ಶಾಸಕರು ತೀರ್ಮಾನ ಮಾಡಿ ಇಬ್ಬರೂ ನಾಯಕರಿಗೆ ನ್ಯಾಯ ಕೊಡಲಿ ಎಂದು ಸಭೆಯ ಗಮನಕ್ಕೆ ತಂದರು.

ಸದಸ್ಯ ನಾಗೇಶ್ ಮಾತನಾಡಿ, ಇಲಾಖೆಯ ಅಧಿಕಾರಿಗಳಿಂದ ನೂರಡಿ ರಸ್ತೆಗೆ ಹೆಸರಿಡುವಲ್ಲಿ ವಿಳಂಬವಾಗಿದೆ. ಎಲ್ಲ ವಿಷಯದಲ್ಲೂ ಅಧಿಕಾರಿಗಳು ವಿಳಂಬ ಮಾಡುತ್ತಿರುವುದರಿಂದ ಸಮುದಾಯಗಳ ನಡುವೆ ಪರಸ್ಪರ ವೈಮನಸ್ಸು ಬರಲು ಕಾರಣವಾಗಿದೆ ಎಂದು ಬೇಸರ ಹೊರಹಾಕಿದರು. ಈ ವೇಳೆ ಮಧ್ಯಪ್ರವೇಶಿಸಿದ ಇನ್ನುಳಿದ ಸದಸ್ಯರಾದ ಎಂ.ರಾಮಲಿಂಗೇಗೌಡ, ಮೀನಾಕ್ಷಿ ಪುಟ್ಟಸ್ವಾಮಿ ಅವರು, ಈಗಾಗಲೇ ಮಂಡ್ಯ ನಗರದಲ್ಲಿ ಅಂಬೇಡ್ಕರ್ ವೃತ್ತ, ಅಂಬೇಡ್ಕರ್ ಭವನ, ಅಂಬೇಡ್ಕರ್ ಪ್ರತಿಮೆ ಇವೆ. ಆದರೆ, ನಾಡಪ್ರಭು ಕೆಂಪೇಗೌಡ ಅವರ ಹೆಸರಿನಲ್ಲಿ ಒಂದೂ ವೃತ್ತವೂ ಇಲ್ಲ, ಅವರ ಪ್ರತಿಮೆ, ಭವನವೂ ಇಲ್ಲ. ಹಾಗಾಗಿ ಕೆಂಪೇಗೌಡರ ಹೆಸರನ್ನಿಡಬೇಕೆಂದು ಸಭೆಗೆ ಒತ್ತಾಯಿಸಿದರು.

ಶಾಸಕ ಪಿ.ರವಿಕುಮಾರ್‌ ಮಾತನಾಡಿ, ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಎಲ್ಲರಿಗೂ ಅಧಿಕಾರ ಸಿಕ್ಕಿದೆ. ಹಾಗೆಯೇ ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸಿ ಲಕ್ಷಾಂತರ ಮಂದಿಗೆ ಬದುಕು ರೂಪಿಸಿದ್ದಾರೆ. ಇವರ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ, ಹಾಗಾಗಿ ಬೆಸಗರಹಳ್ಳಿ ರಾಮಣ್ಣ ವೃತ್ತದಿಂದ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ವರೆಗಿನ ರಸ್ತೆಗೆ ಬಿ.ಆರ್.ಅಂಬೇಡ್ಕರ್ ಹೆಸರು, ಕನ್ನಿಕಾ ಪರಮೇಶ್ವರಿ ದೇವಸ್ಥಾನದಿಂದ ಗೌರಿಶಂಕರ ಸಮುದಾಯ ಭವನದವರೆಗಿನ ರಸ್ತೆಗೆ ನಾಡಪ್ರಭು ಕೆಂಪೇಗೌಡರ ಹೆಸರಿಡೋಣವೆಂದರು. ಜೊತೆಗೆ ಜೆ.ಸಿ.ವೃತ್ತದಲ್ಲಿ ₹2 ಕೋಟಿ ವೆಚ್ಚದಲ್ಲಿ ಕೆಂಪೇಗೌಡರ ಪ್ರತಿಮೆ, ಕಲ್ಲಹಳ್ಳಿ ಬಳಿ 2 ಎಕರೆ ಜಾಗದಲ್ಲಿ ಕೆಂಪೇಗೌಡರ ಭವನ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಅಧ್ಯಕ್ಷ ಎಂ.ವಿ. ಪ್ರಕಾಶ್ (ನಾಗೇಶ್) ಅವರು, ಶಾಸಕ ಪಿ.ರವಿಕುಮಾರ್ ಅವರು ತಮ್ಮ ಅಭಿಪ್ರಾಯವನ್ನು ಸಭೆಗೆ ತಿಳಿಸಿ ಸಲಹೆ ನೀಡಿದ್ದಾರೆ. ಈ ಸಂಬಂಧವಾಗಿ ಇಬ್ಬರು ಮಹನೀಯರ ಹೆಸರುಗಳನ್ನು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಸರ್ಕಾರ ಅಂತಿಮವಾಗಿ ಯಾರ ಹೆಸರನ್ನು ಇಡಲು ಸೂಚಿಸುವುದೋ ಅವರ ಹೆಸರನ್ನು ನೂರಡಿ ರಸ್ತೆಗೆ ಇಡಲಾಗುವುದು ಎಂದು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಉಪಾಧ್ಯಕ್ಷ ಎಂ.ಪಿ.ಅರುಣ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ರವಿ, ಆಯುಕ್ಷೆ ಪಂಪಾಶ್ರೀ ಭಾಗವಹಿಸಿದ್ದರು.

ಹಾಲಿ ಅಧ್ಯಕ್ಷ ಮತ್ತು ಮಾಜಿ ಅಧ್ಯಕ್ಷರ ನಡುವೆ ಜಟಾಪಟಿ

ನಗರಸಭೆ ಮಾಜಿ ಅಧ್ಯಕ್ಷ ಮತ್ತು ಸದಸ್ಯ ಎಚ್.ಎಸ್. ಮಂಜು ಮಾತನಾಡಿ, ಶಾಸಕ ಪಿ.ರವಿಕುಮಾರ್‌ಗೌಡ ಅವರು ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ₹80 ಕೋಟಿ ಮಂಜೂರು ಮಾಡಿಸಿದ್ದು, ಈ ಪೈಕಿ ₹52 ಕೋಟಿಯನ್ನು ಮಂಡ್ಯ ನಗರದ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ ಎಂದಾಗ, ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಎಂ.ವಿ.ಪ್ರಕಾಶ್ ಅವರು, ಶಾಸಕರು ಈ ವಿಷಯವನ್ನು ಮೊದಲೇ ತಿಳಿಸಿದ್ದರೆ ಅವರಿಗೆ ಸನ್ಮಾನಿಸಬಹುದಿತ್ತು. ನಮಗೆ ತಿಳಿಸದೆ ನಿಮ್ಮ ಮೂಲಕ ಸಭೆಗೆ ತಿಳಿಸಿದ್ದಾರೆ. ಆದರೆ, ನಗರಸಭೆಯ ನವೀಕರಣಕ್ಕೆ ₹2 ಕೋಟಿ ನೀಡಬಹುದಿತ್ತು, ನೀವಾದರೂ ಶಾಸಕರಿಗೆ ತಿಳಿಸಬಹುದಿತ್ತು ಎಂದರು.

ಇದಕ್ಕೆ ಕೋಪಗೊಂಡ ಸದಸ್ಯ ಎಚ್.ಎಸ್.ಮಂಜು ಅವರು, ನಿಮ್ಮ ಸಂಸದರೂ ಆದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನಗರದ ಅಭಿವೃದ್ಧಿಗೆ ₹50 ಕೋಟಿ ನೀಡುವುದಾಗಿ ಹೇಳಿದ್ದರು. ಆದರೆ, ಕೇವಲ ₹5 ಲಕ್ಷನೂ ಬಂದಿಲ್ಲ ಎಂದಾಗ, ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಎಂ.ವಿ.ಪ್ರಕಾಶ್, ನಿಮ್ಮ ಕಣ್ಣ ಮುಂದೆಯೇ ₹40 ಕೋಟಿಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಕೆಲಸ ನಡೆಯುತ್ತಿದೆ. ಮುಖ್ಯಮಂತ್ರಿಯಾಗಿದ್ದಾಗ ಮಿಮ್ಸ್ ಆಸ್ಪತ್ರೆ, ಕಾವೇರಿ ನೀರಾವರಿ ನಿಗಮ, ಲೋಕೋಪಯೋಗಿ ಇಲಾಖೆಯ ಕಟ್ಟಡಗಳು ನಿರ್ಮಾಣವಾಗಿವೆ. ಅಲ್ಲದೆ, ನಗರದ ಬಸ್ ನಿಲ್ದಾಣ ನವೀಕೃತವಾಗಿದೆ. ನಿಮ್ಮ ಸರ್ಕಾರದಲ್ಲಿ ಯಾವ ಕಟ್ಟಡಗಳು ತಲೆ ಎತ್ತಿವೆ ಹೇಳಿ ನೋಡೋಣ ಎಂದು ತಿರುಗೇಟು ನೀಡಿದರು.

ಮಧ್ಯೆ ಪ್ರವೇಶಿಸಿದ ಶಾಸಕ ಪಿ.ರವಿಕುಮಾರ್‌ ಅವರು, ಸಭೆಯಲ್ಲಿ ಇಲ್ಲದೇ ಇರುವವರ ಬಗ್ಗೆ ಮಾತನಾಡುವುದು ಸರಿಯಲ್ಲ. ನಗರದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸೋಣವೆಂದು ಸಮಾಧಾನ ಪ‍ಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.