ADVERTISEMENT

ಮಂಡ್ಯ ಸಾಹಿತ್ಯ ಸಮ್ಮೇಳನ: ₹29.65 ಕೋಟಿ ವೆಚ್ಚ, ₹2.53 ಕೋಟಿ ಉಳಿತಾಯ; ಸಚಿವ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 12:39 IST
Last Updated 5 ಏಪ್ರಿಲ್ 2025, 12:39 IST
   

ಮಂಡ್ಯ: ‘ನಗರದಲ್ಲಿ 2024ರ ಡಿಸೆಂಬರ್‌ 20ರಿಂದ 22ರವರೆಗೆ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಟ್ಟು ₹29.65 ಕೋಟಿ ವೆಚ್ಚವಾಗಿದ್ದು, ₹2.53 ಕೋಟಿ ಉಳಿತಾಯವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸರ್ಕಾರ ಎರಡು ಹಂತಗಳಲ್ಲಿ ಒಟ್ಟು ₹30 ಕೋಟಿ ಅನುದಾನ ನೀಡಿತ್ತು. ಇದರ ಜೊತೆಗೆ ವಾಣಿಜ್ಯ ಮತ್ತು ಪುಸ್ತಕ ಮಳಿಗೆಗಳು, ಪ್ರತಿನಿಧಿಗಳ ನೋಂದಣಿ ಶುಲ್ಕ ಹಾಗೂ ನೌಕರರ ಒಂದು ದಿನ ವೇತನದ ದೇಣಿಗೆ (ಎಚ್‌.ಆರ್‌.ಎಂ.ಎಸ್‌ ನೌಕರರನ್ನು ಹೊರತುಪಡಿಸಿ) ₹1.20 ಕೋಟಿ ಹಾಗೂ ಮಂಡ್ಯ ಜಿಲ್ಲಾ ಖಜಾನೆ ವ್ಯಾಪ್ತಿಯ ಸರ್ಕಾರಿ ನೌಕರರರ ಒಂದು ದಿನದ ದೇಣಿಗೆ ₹1.08 ಕೋಟಿ ಸೇರಿದಂತೆ ಒಟ್ಟು ₹32.74 ಕೋಟಿ ಹಣ ಸಂಗ್ರಹವಾಗಿತ್ತು’ ಎಂದು ತಿಳಿಸಿದರು.

ಸಮ್ಮೇಳನಕ್ಕೆ ವಾಸ್ತವವಾಗಿ ₹25.39 ಕೋಟಿ ಭರಿಸಲಾಗಿದೆ. ₹3.17 ಕೋಟಿ ಜಿಎಸ್‌ಟಿ ಮೊತ್ತ, ಮಾರ್ಕೆಟಿಂಗ್‌ ಕಮ್ಯುನಿಕೇಷನ್‌ ಅಂಡ್‌ ಅಡ್ವರ್ಟೈಸಿಂಗ್‌ (ಎಂ.ಸಿ.ಎ) ಸೇವಾ ಶುಲ್ಕ ₹1.08 ಕೋಟಿ ಸೇರಿ ಒಟ್ಟು ವೆಚ್ಚ ₹29.65 ಕೋಟಿ ಆಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ವೇದಿಕೆ ನಿರ್ಮಾಣಕ್ಕೆ ₹8.92 ಕೋಟಿ, ಆಹಾರಕ್ಕೆ ₹6.74 ಕೋಟಿ, ವಸತಿಗೆ ₹1.97 ಕೋಟಿ, ಪ್ರಚಾರಕ್ಕೆ ₹1.29 ಕೋಟಿ, ಕುಡಿಯುವ ನೀರಿಗೆ ₹49.99 ಲಕ್ಷ, ನಗರ ಅಲಂಕಾರಕ್ಕೆ ₹74.99 ಲಕ್ಷ, ಮಾಧ್ಯಮ ಸಮನ್ವಯ ಸಮಿತಿಗೆ ₹99.99 ಲಕ್ಷ, ಸಾಂಸ್ಕೃತಿಕ ಸಮಿತಿಗೆ ₹82.43 ಲಕ್ಷ, ಮೆರವಣಿಗೆಗೆ ₹74.31 ಲಕ್ಷ, ಸ್ಮರಣಿಕೆಗೆ ₹32.20 ಲಕ್ಷ, ಪುಸ್ತಕ ಆಯ್ಕೆ ಸಮಿತಿಗೆ ₹29.98 ಲಕ್ಷ, ಸ್ಮರಣ ಸಂಚಿಕೆಗೆ ₹19.99 ಲಕ್ಷ, ಸಾರಿಗೆಗೆ ₹81.54 ಲಕ್ಷ, ನೋಂದಣಿ ಸಮಿತಿಗೆ ₹64.93 ಲಕ್ಷ, ಕನ್ನಡ ಜ್ಯೋತಿ ರಥ ನಿರ್ವಹಣಾ ಸಮಿತಿಗೆ ₹42.99 ಲಕ್ಷ ವೆಚ್ಚವಾಗಿದೆ ಎಂದು ಸಚಿವರು ಅಂಕಿಅಂಶಗಳನ್ನು ವಿವರಿಸಿದರು.

ಮಾದರಿ ಸಮ್ಮೇಳನ:

‘87ನೇ ನುಡಿಜಾತ್ರೆಯಲ್ಲಿ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲವೂ ಅಚ್ಚುಕಟ್ಟಾಗಿ ನಡೆದವು. ಸಮ್ಮೇಳನದಲ್ಲಿ ಊಟ, ವಸತಿ ಸೇರಿದಂತೆ ಮೂಲಸೌಕರ್ಯವನ್ನು ಜಿಲ್ಲಾಡಳಿತ ಸಮರ್ಪಕವಾಗಿ ಕಲ್ಪಿಸಿತ್ತು. ಈ ಸಮ್ಮೇಳನ ಅತ್ಯಂತ ಯಶಸ್ವಿಯಾಗಿದ್ದು, ಮಂಡ್ಯ ಚರಿತ್ರೆಯಲ್ಲಿ ದಾಖಲಾಗುತ್ತದೆ. ಸಾರ್ವಜನಿಕರ ತೆರಿಗೆ ಹಣವನ್ನು ವ್ಯವಸ್ಥಿತವಾಗಿ ಖರ್ಚು ಮಾಡಲಾಗಿದೆ. ಇದರ ಮೇಲೆಯೂ ಟೀಕೆ–ಟಿಪ್ಪಣಿಗಳು ಬಂದರೆ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆ’ ಎಂದು ಸಚಿವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌. ನಂದಿನಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಮೀರಾ ಶಿವಲಿಂಗಯ್ಯ ಮತ್ತು ಕಸಾಪ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಉಳಿಕೆ ಹಣದಲ್ಲಿ ಕನ್ನಡ ಭವನ: ‘ಉಳಿತಾಯವಾಗಿರುವ ₹2.53 ಕೋಟಿಯನ್ನು ಸಮ್ಮೇಳನದ ಸವಿನೆನಪಿಗಾಗಿ ನಿರ್ಮಿಸಲಿರುವ ‘ಕನ್ನಡ ಭವನ’ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತದೆ. ಇದರ ಜೊತೆಗೆ ಸರ್ಕಾರದಿಂದ ₹2.50 ಕೋಟಿ ಅನುದಾನ ಬಿಡುಗಡೆ ಮಾಡುತ್ತೇವೆ. ಈಗಾಗಲೇ ಮೂರು ಕಡೆ ನಿವೇಶನಗಳನ್ನು ನೋಡಿದ್ದು, ಸರ್ಕಾರದಿಂದ ಅನುಮತಿ ಪಡೆದ ನಂತರ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತೇವೆ’ ಎಂದು ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.