ಮಂಡ್ಯ: ಪೊಲೀಸ್ ಠಾಣೆಗಳ ಮಾಹಿತಿಯನ್ನು ವಿದ್ಯಾರ್ಥಿ ದಿಸೆಯಲ್ಲಿಯೇ ತಿಳಿದುಕೊಳ್ಳುವ ಮೂಲಕ ಅದರ ಕಾರ್ಯವೈಖರಿ ಬಗ್ಗೆಯೂ ಪರಿಚಯ ಮಾಡಿಕೊಳ್ಳಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಚೀವರ್ಸ್ ಇಂಟರ್ ನ್ಯಾಷನಲ್ ಸ್ಕೂಲ್, ಅನನ್ಯ ಹಾರ್ಟ್ ಸಂಸ್ಥೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಪೊಲೀಸ್ ಇಲಾಖೆ ಪರಿಚಯ ಕುರಿತಂತೆ ಶಾಲಾ ಮಕ್ಕಳಿಗೆ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮಂಡ್ಯ ನಗರದಲ್ಲಿ ಸಂಚಾರ, ಮಹಿಳಾ, ಸೆಂಟ್ರಲ್, ಗ್ರಾಮಾಂತರ, ಪೂರ್ವ ಮತ್ತು ಪಶ್ಚಿಮ ಪೊಲೀಸ್ ಠಾಣೆಗಳಿವೆ. ಇನ್ನೂ ಮಂಡ್ಯ ತಾಲ್ಲೂಕಿಗೆ ಬಂದರೆ ಶಿವಳ್ಳಿ, ಬಸರಾಳು ಹಾಗೂ ಕೆರಗೋಡು ಪೊಲೀಸ್ ಠಾಣೆಗಳಿವೆ. ಹೀಗೆ ಮಂಡ್ಯ ಸೇರಿದಂತೆ ಏಳು ತಾಲ್ಲೂಕುಗಳಲ್ಲಿಯೂ ಆಯಾ ವ್ಯಾಪ್ತಿಯಲ್ಲಿ ಪೊಲೀಸ್ ಠಾಣೆಗಳಿವೆ, ಕಾನ್‌ಸ್ಟೆಬಲ್, ಹೆಡ್‌ಕಾನ್‌ಸ್ಟೆಬಲ್, ಎಎಸ್‌ಐ, ಪಿಎಸ್‌ಐ, ಸಿಪಿಐ, ಡಿವೈಎಸ್‌ಪಿ, ಎಎಸ್‌ಪಿ, ಎಸ್ಪಿ, ಎಸಿಪಿ, ಕಮಿಷನರ್ ಸೇರಿದಂತೆ ಹೀಗೆ ಹಲವು ಹುದ್ದೆಗಳು ಪೊಲೀಸ್ ಇಲಾಖೆಯಲ್ಲಿ ಇವೆ ಎಂದು ವಿವರಿಸಿದರು.
ಇಲಾಖೆಯಲ್ಲಿ ಶಿಸ್ತು ಹೆಚ್ಚಿರುತ್ತದೆ. ಮೇಲಾಧಿಕಾರಿಗಳ ಜೊತೆ ಯಾವ ರೀತಿ ನಡೆದುಕೊಳ್ಳುವುದು ಮತ್ತು ರಾಜಕಾರಣಿಗಳು ಹಾಗೂ ಸಾರ್ವಜನಿಕರ ರಕ್ಷಣೆ ಸೇರಿದಂತೆ ಹಲವು ಬೆಗೆಯ ಜವಾಬ್ದಾರಿಗಳಿವೆ. ಪೊಲೀಸ್ ಅಧಿಕಾರಿಗಳ ಕೆಲಸಗಳಿಗೆ ತಕ್ಕಂತೆ ಆಯಾ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಹೊಣೆಗಾರಿಕೆ ಅಥವಾ ಸಂದರ್ಭಕ್ಕೆ ತಕ್ಕಂತೆ ಸಿಬ್ಬಂದಿಗಳನ್ನು ಬಳಸಿ ಕೆಲಸ ಮಾಡಲಾಗುವುದು, ಅಪರಾಧ ಪ್ರಕರಣ ಸೇರಿದಂತೆ ಇತರೆ ಕೃತ್ಯಗಳ ತಡೆಗೆ ಯಾವ ಕಾನೂನು ಪಾಲನೆ ಮಾಡಬೇಕೆಂಬುದೇ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಇ.ಗಂಗಾಧರಸ್ವಾಮಿ, ಶಾಲೆ ಆಡಳಿತಾಧಿಕಾರಿ ರಾಮ್‌ಸಿಂಗ್, ಶಿಕ್ಷಕರಾದ ದರ್ಶನ್, ಶ್ವೇತಾ, ದೀಪಾ, ಪಂಚಲಿಂಗ, ಅನನ್ಯ ಹಾರ್ಟ್ ಸಂಸ್ಥೆಯ ಬಿ.ಎಸ್.ಅನುಪಮಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.