ಈ ಬಾರಿ ನೋಯಿಡಾ, ವಾರಾಣಸಿ, ದೆಹಲಿಗೆ ಪ್ರವಾಸ | ಕಳೆದ ವರ್ಷ ₹25 ಲಕ್ಷ ವೆಚ್ಚದಲ್ಲಿ ಚಂಡೀಗಡಕ್ಕೆ ಪ್ರವಾಸ | ದುಂದು ವೆಚ್ಚಕ್ಕೆ ಕಡಿವಾಣ ಬೀಳಲಿ: ಸಾರ್ವಜನಿಕರ ಆಗ್ರಹ
ಮಂಡ್ಯ: ಇಲ್ಲಿಯ ನಗರಸಭೆ ಆಡಳಿತ ಮಂಡಳಿಯ ಅಧಿಕಾರವಧಿ 3 ತಿಂಗಳು ಮಾತ್ರ ಬಾಕಿ ಉಳಿದಿದ್ದು, ಕಡೇ ಅವಧಿಯಲ್ಲಿ ಚುನಾಯಿತ ಸದಸ್ಯರು ಮತ್ತು ಅಧಿಕಾರಿಗಳ ತಂಡ ₹30 ಲಕ್ಷ ವೆಚ್ಚದ ‘ಅಧ್ಯಯನ ಪ್ರವಾಸ’ ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಪ್ರಸ್ತುತ ಆಡಳಿತ ಮಂಡಳಿಯ ಅಧಿಕಾರವಧಿ ನವೆಂಬರ್ 2ಕ್ಕೆ ಕೊನೆಗೊಳ್ಳಲಿದೆ. ಅಧ್ಯಯನ ಪ್ರವಾಸ ಮಾಡಿ, ಉಳಿದಿರುವ 3 ತಿಂಗಳಲ್ಲಿ ಮಂಡ್ಯವನ್ನು ‘ಮಾದರಿ ನಗರ’ವನ್ನಾಗಿ ಮಾಡಲು ಸಾಧ್ಯವೇ? ಇದು ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವ ‘ಮೋಜಿನ ಪ್ರವಾಸ’ ಎಂದು ನಾಗರಿಕರು ದೂರಿದ್ದಾರೆ.
31 ನಗರಸಭೆ ಸದಸ್ಯರು, ನಾಲ್ವರು ನಾಮನಿರ್ದೇಶಿತ ಸದಸ್ಯರು ಹಾಗೂ ಐವರು ಅಧಿಕಾರಿಗಳ ತಂಡ ಆಗಸ್ಟ್ 4ರಂದು ಮಂಡ್ಯದಿಂದ ಹೊರಟು ಆಗಸ್ಟ್ 10ರವರೆಗೆ 7 ದಿನ ಉತ್ತರ ಪ್ರದೇಶದ ನೋಯಿಡಾ, ವಾರಾಣಸಿ ಹಾಗೂ ದೆಹಲಿ ಪ್ರವಾಸಕ್ಕೆ ಹೋಗಿದೆ.
ಉದ್ದೇಶವೇನು?
ಉತ್ತರ ಪ್ರದೇಶದ ನೋಯಿಡಾ, ವಾರಾಣಸಿ ಹಾಗೂ ದೆಹಲಿ ಮಹಾನಗರ ಪಾಲಿಕೆಗಳಿಗೆ ಭೇಟಿ ನೀಡುವುದು. ಅಲ್ಲಿ ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆ, ವ್ಯವಸ್ಥಿತ ನಗರ ಯೋಜನೆ ಕ್ರಮಗಳು, ಕುಡಿಯುವ ನೀರು ಸರಬರಾಜು, ಎಲ್‌ಇಡಿ ಬೀದಿದೀಪಗಳ ನಿರ್ವಹಣೆ, ಮೂಲಸೌಕರ್ಯಗಳ ಅಭಿವೃದ್ಧಿ ಇತ್ಯಾದಿ ವ್ಯವಸ್ಥೆಗಳನ್ನು ಅಧ್ಯಯನ ಮಾಡುವುದು. ನಂತರ ಮಂಡ್ಯ ನಗರವನ್ನು ‘ಮಾದರಿ ನಗರ’ವನ್ನಾಗಿ ಅಭಿವೃದ್ಧಿಗೊಳಿಸುವುದು ಅಧ್ಯಯನ ಪ್ರವಾಸದ ಉದ್ದೇಶವಾಗಿದೆ.
ಈ ಅಧ್ಯಯನ ಪ್ರವಾಸ ಕೈಗೊಳ್ಳಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಬರೆದ ಪತ್ರಕ್ಕೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಹಲವಾರು ಷರತ್ತುಗಳನ್ನು ವಿಧಿಸಿ, ಜುಲೈ 17ರಂದು ಒಪ್ಪಿಗೆ ನೀಡಿದ್ದರು.
ಷರತ್ತುಗಳು:
2025–26ನೇ ಸಾಲಿನ ನಗರಸಭೆಯ ಆಯವ್ಯಯ ಅಂದಾಜಿನಲ್ಲಿ ಮೀಸಲಿರಿಸಿರುವ ವೆಚ್ಚದಲ್ಲಿ ಪ್ರವಾಸ ಕೈಗೊಂಡು, ನಂತರ ಖರ್ಚು–ವೆಚ್ಚಗಳ ಮಾಹಿತಿಯ ದಾಖಲೆ ಮತ್ತು ರಸೀತಿಗಳನ್ನು ಲೆಕ್ಕಶಾಖೆಗೆ ಸಲ್ಲಿಸುವಂತೆ ಸೂಚಿಸಿದ್ದರು.
ಪ್ರಸ್ತಾವದಲ್ಲಿ ಸಲ್ಲಿಸಿರುವ 35 ಚುನಾಯಿತ ಪ್ರತಿನಿಧಿಗಳು, 5 ನಾಮನಿರ್ದೇಶಿತ ಸದಸ್ಯರು ಮತ್ತು ಇಬ್ಬರು ಅಧಿಕಾರಿಗಳ ತಂಡಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಯಾವುದೇ ಸಂದರ್ಭದಲ್ಲಿಯೂ ಇತರರನ್ನು ಪ್ರವಾಸಕ್ಕೆ ಕರೆದೊಯ್ಯುವಂತಿಲ್ಲ. ಅಧ್ಯಯನ ಪ್ರವಾಸಕ್ಕೆ ನಿಗದಿಪಡಿಸಿದ ನಗರವನ್ನು ಹೊರತುಪಡಿಸಿ ಇತರೆ ಸ್ಥಳಗಳಿಗೆ ಭೇಟಿ ನೀಡುವಂತಿಲ್ಲ. ಅಧ್ಯಯನ ಪ್ರವಾಸದ ನಂತರ ಅಲ್ಲಿ ನಡೆಸಿದ ಅಧ್ಯಯನ ಮತ್ತು ಪ್ರಯೋಜನಗಳ ಕುರಿತು ನಗರಸಭೆ ಕಾರ್ಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂಬ ಷರತ್ತುಗಳನ್ನು ಪೌರಾಡಳಿತದ ನಿರ್ದೇಶಕರು ಹಾಕಿದ್ದಾರೆ.
‘ಕೆಲವು ಸದಸ್ಯರು ತಮ್ಮೊಂದಿಗೆ ಕುಟುಂಬ ಸದಸ್ಯರನ್ನೂ ಕರೆದೊಯ್ದಿದ್ದಾರೆ. ಇನ್ನೂ ಕೆಲವು ಸದಸ್ಯರು ತಮ್ಮ ಬದಲಿಗೆ ತಮ್ಮ ಕುಟುಂಬಸ್ಥರನ್ನು ಕಳುಹಿಸಿಕೊಟ್ಟಿದ್ದಾರೆ’ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.
ಮಂಡ್ಯವನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿಗೊಳಿಸಲು ಉತ್ತಮ ಪ್ರದೇಶ ಮತ್ತು ದೆಹಲಿಯ ಮಹಾನಗರ ಪಾಲಿಕೆಗಳಿಗೆ ಸದಸ್ಯರು ಮತ್ತು ಅಧಿಕಾರಿಗಳು ‘ಅಧ್ಯಯನ ಪ್ರವಾಸ’ ಕೈಗೊಂಡಿದ್ದಾರೆಪಂಪಾಶ್ರೀ ಪೌರಾಯುಕ್ತರು ಮಂಡ್ಯ ನಗರಸಭೆ
ಪ್ರವಾಸದಿಂದ ಆಗುವ ಪ್ರಯೋಜನವೇನು?
ನಗರಸಭೆ ಸದಸ್ಯರು ಕಳೆದ ವರ್ಷ ಫೆಬ್ರುವರಿಯಲ್ಲೂ ₹25 ಲಕ್ಷ ವೆಚ್ಚದಲ್ಲಿ ‘ಚಂಡೀಗಡ ಅಧ್ಯಯನ ಪ್ರವಾಸ’ ಮಾಡಿದ್ದರು. ಅದರಿಂದ ಮಂಡ್ಯ ನಗರಕ್ಕೆ ಏನು ಪ್ರಯೋಜನವಾಗಿದೆ ಎಂಬುದನ್ನು ಜನರಿಗೆ ತಿಳಿಸಬೇಕು. ಈ ಬಾರಿ ಅಧಿಕಾರವಧಿ ಕೇವಲ 3 ತಿಂಗಳು ಮಾತ್ರ ಉಳಿದಿದ್ದು ಕಡೇ ಗಳಿಗೆಯಲ್ಲಿ ಪ್ರವಾಸ ಮಾಡಿ ಅಲ್ಲಿ ಕಲಿತದ್ದನ್ನು ಕಡಿಮೆ ಅವಧಿಯಲ್ಲಿ ಇಲ್ಲಿ ಅನುಷ್ಠಾನ ಮಾಡಲು ಹೇಗೆ ಸಾಧ್ಯ? ಈ ದುಂದು ವೆಚ್ಚಕ್ಕೆ ಕಡಿವಾಣ ಬೀಳಬೇಕು.ಎಂ.ಬಿ.ನಾಗಣ್ಣಗೌಡ ಕರುನಾಡ ಸೇವಕರು ಸಂಘಟನೆಯ ಮುಖಂಡ
ಜನರ ತೆರಿಗೆ ಹಣ ಪೋಲು
ಮಂಡ್ಯ ನಗರದಲ್ಲಿ ರಸ್ತೆಗಳು ಹಳ್ಳ ಹಿಡಿದಿವೆ ರಸ್ತೆಬದಿ ಕಸದ ರಾಶಿ ಗಬ್ಬು ನಾರುತ್ತಿದೆ ಶೌಚಾಲಯಗಳಿಗೆ ಬೀಗ ಜಡಿಯಲಾಗಿದೆ ನಿರ್ವಹಣೆ ಕೊರತೆಯಿಂದ ಪಾರ್ಕ್ ಪಾಳುಬಿದ್ದಿವೆ.. ಹೀಗೆ ಮೂಲಸೌಕರ್ಯದಿಂದ ಮಂಡ್ಯ ನಗರ ಬಳಲುತ್ತಿದೆ. ಪ್ರತಿ ವರ್ಷ ನಗರಸಭೆ ಸದಸ್ಯರು ಕೈಗೊಳ್ಳುವ ‘ಅಧ್ಯಯನ ಪ್ರವಾಸ’ದಿಂದ ನಗರಕ್ಕೆ ಯಾವ ಪ್ರಯೋಜನವೂ ಆಗಿಲ್ಲ. ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುವ ಬದಲು ₹30 ಲಕ್ಷವನ್ನು ಮಂಡ್ಯ ನಗರ ಅಭಿವೃದ್ಧಿಗೆ ಬಳಸಬೇಕಿತ್ತು.ಎಚ್.ಸಿ.ಮಂಜುನಾಥ್ ಜಿಲ್ಲಾ ಘಟಕದ ಅಧ್ಯಕ್ಷ ಕನ್ನಡಸೇನೆ
‘ಈ ಪ್ರವಾಸ ಸಮಂಜಸವಲ್ಲ’
ಅಧ್ಯಯನ ಪ್ರವಾಸ ಮಾಡುವುದು ತಪ್ಪಲ್ಲ. ಆದರೆ ಕಡೇ ಗಳಿಗೆಯಲ್ಲಿ ಸಾರ್ವಜನಿಕರ ತೆರಿಗೆ ಹಣದಲ್ಲಿ ಪ್ರವಾಸ ಮಾಡುವುದು ಸಮಂಜಸವಲ್ಲ. ಇದರಿಂದ ಮಂಡ್ಯ ನಗರಕ್ಕೆ ಏನು ಅನುಕೂಲ ಎಂಬುದನ್ನು ಜನಪ್ರತಿನಿಧಿಗಳಾದವರು ಪ್ರಶ್ನಿಸಿಕೊಂಡು ನಿರ್ಧಾರ ಕೈಗೊಳ್ಳಬೇಕಿತ್ತು. ಈ ಪ್ರವಾಸ ಔಚಿತ್ಯವೇ? ಅನಿವಾರ್ಯವೇ?ಸುನಂದಾ ಜಯರಾಂ ರೈತ ನಾಯಕಿ
‘ಶಿವಮೊಗ್ಗದಲ್ಲಿ ಹಿಂದೆ ಸರಿದ ಸದಸ್ಯರು’
ದೆಹಲಿ ಮತ್ತು ಹರಿಯಾಣ ರಾಜ್ಯಕ್ಕೆ ₹40 ಲಕ್ಷ ವೆಚ್ಚದಲ್ಲಿ ಅಧ್ಯಯನ ಪ್ರವಾಸ ಹೊರಡಲು ನಗರಸಭೆ ಸದಸ್ಯರು ಸಿದ್ಧತೆ ನಡೆಸಿದ್ದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಕಾರಣ ಬಿಜೆಪಿಯ 16 ಸದಸ್ಯರು ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಇದೇ ರೀತಿ ಮಂಡ್ಯ ನಗರಸಭೆ ಸದಸ್ಯರು ಮೋಜಿನ ಪ್ರವಾಸಕ್ಕೆ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುವುದಿಲ್ಲ ಎಂಬ ನಿಲುವು ತಳೆದು ಪ್ರವಾಸದಿಂದ ಹಿಂದೆ ಸರಿಯಬೇಕಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.