ADVERTISEMENT

ಕೊಕ್ಕೊ ವಿಶ್ವ ಚಾಂಪಿಯನ್‌: ಮಿಂಚಿದ ಮಂಡ್ಯ ಪ್ರತಿಭೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2025, 12:59 IST
Last Updated 21 ಜನವರಿ 2025, 12:59 IST
ಎಂ.ಕೆ. ಗೌತಮ್‌
ಎಂ.ಕೆ. ಗೌತಮ್‌   

ಮಂಡ್ಯ: ಮದ್ದೂರು ತಾಲ್ಲೂಕಿನ ಡಿ.ಮಲ್ಲಿಗೆರೆ ಗ್ರಾಮದ ಎಂ.ಕೆ. ಗೌತಮ್‌ ಅವರು ದೆಹಲಿಯಲ್ಲಿ ನಡೆದ ಕೊಕ್ಕೊ ವಿಶ್ವ ಚಾಂಪಿಯನ್‌ ಚೊಚ್ಚಲ ಪಂದ್ಯದಲ್ಲಿ ಭಾಗವಹಿಸಿ ಗೆಲುವು ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಪ್ರಸ್ತುತದಲ್ಲಿ ಬೆಂಗಳೂರಿನ ಎಚ್‌.ಎಸ್.ಆರ್‌ ಲೇಔಟ್‌ನ ಅಂಚೆ ಕಚೇರಿಯಲ್ಲಿ ಪೋಸ್ಟ್‌ ಮ್ಯಾನ್‌ ಆಗಿ ಕೆಲಸ ನಿರ್ವವಹಿಸುತ್ತಿರುವ ಗೌತಮ್‌ ಅವರು ಕಪನಿಗೌಡ ಮತ್ತು ಎಸ್‌.ರೇಖಾವತಿ ದಂಪತಿಯ ಪುತ್ರರಾಗಿದ್ದಾರೆ.

‘ನಮ್ಮ ಮಗ 16 ವರ್ಷಗಳಿಂದ ಅಂದರೆ ಆರನೇ ತರಗತಿಯಿಂದಲೂ ಬೆಂಗಳೂರಿನ ಚಾಮರಾಜಪೇಟೆ ರಾಮಮಂದಿರ ಶಾಲೆಯಲ್ಲಿ ಕೊಕ್ಕೊ ಕ್ರೀಡೆ ಆಡುತ್ತಿದ್ದಾನೆ. ಎಸ್‌ಎಸ್‌ಎಲ್‌ಸಿಯಲ್ಲಿ ವಿಜಯನಗರ ಯಂಗ್‌ ಪಯೋನಿಯರ್ಸ್‌ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಪ್ರವೇಶ ಪಡೆದು ಕೊಕ್ಕೊ ತರಬೇತಿ ಮುಂದುವರಿಸಿದ್ದ. ಅಲ್ಲಿಂದಲೇ ಕೊಕ್ಕೊ ಯಾತ್ರೆ ಶುರುವಾಗಿ ವಿಶ್ವ ಮೆಚ್ಚುವ ಸಾಧನೆ ಮಾಡಿದ್ದಾನೆ’ ತಂದೆ ಕಪನಿಗೌಡ ಸಂತಸ ವ್ಯಕ್ತಪಡಿಸಿದರು.

ADVERTISEMENT

‘ಕೊಕ್ಕೊ ಇಷ್ಟಪಟ್ಟು ಆಡುತ್ತಿರುವೆ. ನನಗೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ರಾಷ್ಟ್ರಮಟ್ಟದ ಸೀನಿಯರ್‌ ಕೊಕ್ಕೊ ಸ್ಪರ್ಧೆ ಆಯೋಜನೆಯು ಮರೆಯಲಾಗದ ಸ್ಪರ್ಧೆ ಆಗಿತ್ತು. ಏಕೆಂದರೆ ಅಲ್ಲಿ ಮೂರನೇ ಬಹುಮಾನ ನಮ್ಮ ತಂಡಕ್ಕೆ ಒಲಿದಿತ್ತು. ಆದರೆ, ಈಗ ದೆಹಲಿಯಲ್ಲಿ ನಡೆದ ವಿಶ್ವಕಪ್‌–2025ರ ಕೊಕ್ಕೊ ಸ್ಪರ್ಧೆಯಲ್ಲಿ ಗೆಲುವು ಪಡೆಯುವ ಮೂಲಕ ಸಾಧನೆ ಮಾಡಿದ ತೃಪ್ತಿ ನನಗಿದೆ. ಈ ಗೆಲುವನ್ನು ನನ್ನ ರಾಜ್ಯ ಮತ್ತು ನನ್ನೂರಿನ ಮಂಡ್ಯ ಜಿಲ್ಲೆಗೆ ಅರ್ಪಿಸುವೆ’ ಎಂದು ದೆಹಲಿಯಿಂದ ‘ಪ್ರಜಾವಾಣಿ’ ಜೊತೆ ಎಂ.ಕೆ.ಗೌತಮ್‌ ಅಭಿಪ್ರಾಯ ಹಂಚಿಕೊಂಡರು.

ಎಚ್‌ಡಿಕೆ ಅಭಿನಂದನೆ: ಮಲ್ಲಿಗೆರೆ ಗ್ರಾಮದ ಎಂ.ಕೆ.ಗೌತಮ್‌ ಅವರಿಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.