ಕಲೆ: ಭಾವು ಪತ್ತಾರ್
(ಪ್ರಾತಿನಿಧಿಕ ಚಿತ್ರ)
ಮಂಡ್ಯ: ನಾಗರಿಕರ ಸಮಸ್ಯೆ, ಸಲಹೆ, ದೂರು ಆಲಿಸಲು ಪೊಲೀಸ್ ಸಿಬ್ಬಂದಿಯೇ ಮನೆ ಬಾಗಿಲಿಗೆ ಬರುವಂಥ ವಿನೂತನ ಪರಿಕಲ್ಪನೆಯಾದ ‘ಮನೆ–ಮನೆಗೆ ಪೊಲೀಸ್’ ಕಾರ್ಯಕ್ರಮವನ್ನು ಇಲಾಖೆ ಜಾರಿಗೊಳಿಸಿದೆ.
ಪ್ರಸ್ತುತ ಪೊಲೀಸ್ ವ್ಯವಸ್ಥೆಯು ಬಹುತೇಕವಾಗಿ ‘ಪ್ರತಿಕ್ರಿಯೆ ಸೇವೆ’ಯನ್ನು ಮಾತ್ರವೇ ಇಲ್ಲಿಯವರೆಗೆ ಒದಗಿಸುತ್ತಿತ್ತು. ಅಂದರೆ, ಸಾರ್ವಜನಿಕರು ನೀಡುವ ದೂರುಗಳ ಆಧಾರದ ಮೇಲೆ ಪ್ರತಿಕ್ರಿಯಿಸುತ್ತಿತ್ತು. ಈ ವ್ಯವಸ್ಥೆಯನ್ನು ‘ಸಕ್ರಿಯ ಸೇವೆ’ಯಾಗಿಸಿ (ಪ್ರೊ ಆ್ಯಕ್ಟಿವ್ ಪೊಲೀಸಿಂಗ್) ಜನಸ್ನೇಹಿಯನ್ನಾಗಿಸುವತ್ತ ಹೆಜ್ಜೆ ಇಡಲಾಗಿದೆ.
ಜನರು ಮತ್ತು ಪೊಲೀಸರ ನಡುವೆ ನಿಕಟ ಸಂಬಂಧ ಏರ್ಪಟ್ಟು, ಸಮಾಜದಲ್ಲಿ ಗಂಭೀರ ಸಮಸ್ಯೆ ಉದ್ಭವಿಸುವ ಮೊದಲೇ ಪರಿಹಾರೋಪಾಯಗಳೊಂದಿಗೆ ಸನ್ನದ್ಧರಾಗಿಸುವ ಕಾರ್ಯಕ್ರಮ ಇದಾಗಿದೆ.
ಮನೆಗಳ ಸಮೂಹ ರಚನೆ:
ಮಂಡ್ಯ ಜಿಲ್ಲೆಯ ಏಳು ತಾಲ್ಲೂಕುಗಳ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಪೊಲೀಸ್ ಠಾಣೆಗಳ ಸರಹದ್ದುಗಳ ಭೌಗೋಳಿಕ ಪ್ರದೇಶಗಳನ್ನು ವಿಂಗಡಿಸಿಕೊಳ್ಳುವುದು (ಇ–ಬೀಟ್ ವ್ಯವಸ್ಥೆ ಅನ್ವಯ) ಮತ್ತು ಮನೆಗಳನ್ನು ಪಟ್ಟಿ ಮಾಡಿಕೊಳ್ಳುವುದು. ನಂತರ ಆ 40–50 ಮನೆಗಳ ಸಮೂಹವನ್ನು ರಚಿಸಿಕೊಂಡು, ಬೀಟ್ ಪೊಲೀಸ್ ಸಿಬ್ಬಂದಿ ಎಲ್ಲ ಮನೆಗಳಿಗೆ ಭೇಟಿ ನೀಡುವ ಉದ್ದೇಶ ಹೊಂದಿದ್ದಾರೆ.
ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪೊಲೀಸ್ ಠಾಣೆ ಮತ್ತು ಪೊಲೀಸ್ ಅಧಿಕಾರಿಗಳ ದೂರವಾಣಿ ಸಂಖ್ಯೆ, ನಿಯಂತ್ರಣ ಕೊಠಡಿ 112 ಸಂಖ್ಯೆ ನೀಡಿ, ಎಂತಹದ್ದೇ ಪರಿಸ್ಥಿತಿಯಲ್ಲಿ ಪೊಲೀಸ್ ಇಲಾಖೆಗೆ ಕರೆ ಮಾಡುವಂತೆ ಉತ್ತೇಜಿಸಬೇಕು ಎಂದು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.
ಠಾಣಾಧಿಕಾರಿಗಳು ತಮ್ಮ ಬೀಟ್ ಅಧಿಕಾರಿ ಮತ್ತು ಸಿಬ್ಬಂದಿ ಸಂವಹಿಸುವ ಸಾರ್ವಜನಿಕ ಅಹವಾಲುಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು. ಪರಿಹಾರ ಒದಗಿಸಲು ಸ್ಥಳಕ್ಕೆ ಭೇಟಿ ನೀಡಬೇಕು. ಬೇರೆ ಇಲಾಖೆಗೆ ಸಂಬಂಧಿಸಿದ ಅಹವಾಲು ಇದ್ದರೆ, ಆಯಾಯ ಇಲಾಖೆಗೆ ಕಳುಹಿಸುವಂತೆ ಸೂಚಿಸಲಾಗಿದೆ.
ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ:
ಭದ್ರತಾ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವಂತೆ ಮನೆಯ ನಿವಾಸಿಗಳನ್ನು ಕೋರುವುದು ಹಾಗೂ ಸ್ಥಳೀಯ ಪೌರಾಡಳಿತ ಇಲಾಖೆ ವತಿಯಿಂದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕುವಂತೆ ಕ್ರಮವಹಿಸಬೇಕು. ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಮಾನವ ಕಳ್ಳಸಾಗಾಣಿಕೆ, ಮಕ್ಕಳ ಭಿಕ್ಷಾಟನೆ, ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ಸೇರಿದಂತೆ ಸಾಮಾಜಿಕ ಪಿಡುಗುಗಳಿಗೆ ಸಂಬಂಧಿಸಿದಂತೆ ಅರಿವು ಮೂಡಿಸಬೇಕು ಎಂದು ಪೊಲೀಸ್ ಮಹಾನಿರ್ದೇಶಕರು ನಿರ್ದೇಶನ ನೀಡಿದ್ದಾರೆ.
ಪ್ರಶಸ್ತಿ ಪ್ರದಾನ:
ಪ್ರತಿ ತಿಂಗಳ ಎರಡನೇ ಶನಿವಾರ ಠಾಣಾ ವ್ಯಾಪ್ತಿಯ ಎಲ್ಲ ಮನೆಗಳ ಸಮೂಹದ ಮುಖ್ಯಸ್ಥರು ಹಾಗೂ ಇತರೆ ನಾಗರಿಕರೊಂದಿಗೆ ‘ಸಾರ್ವಜನಿಕ ಸಂಪರ್ಕ ಸಭೆ’ ನಡೆಸಬೇಕು. ಅತ್ಯುತ್ತಮ ಸಲಹೆ ನೀಡುವ, ಉತ್ತಮ ಹಾಗೂ ಚತುರರಾಗಿ ಮಾಹಿತಿ ನೀಡುವ ಹಾಗೂ ಪೊಲೀಸರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಿ, ಸ್ವಾತಂತ್ರ್ಯ ದಿನಾಚರಣೆ ಅಥವಾ ಗಣರಾಜ್ಯೋತ್ಸವ ದಿನದಂದು ‘ಅತ್ಯುತ್ತಮ ಪೊಲೀಸ್ ಸಲಹೆಗಾರರು’ ಹಾಗೂ ‘ಅತ್ಯುತ್ತಮ ಪೊಲೀಸ್ ಸ್ನೇಹಿತರು’ ಎಂಬ ಪ್ರಶಸ್ತಿಗಳನ್ನು ಪ್ರದಾನ ಮಾಡುವಂತೆ ಡಿಜಿಪಿ ಸೂಚಿಸಿದ್ದಾರೆ.
ಅಪರಾಧ ತಡೆಗಟ್ಟಲು ಜನರೊಂದಿಗೆ ಪೊಲೀಸ್ ಬಾಂಧವ್ಯ | ಪ್ರತಿ ತಿಂಗಳು ಸಾರ್ವಜನಿಕ ಸಂಪರ್ಕ ಸಭೆ | ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ
‘ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಒತ್ತು’
‘ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಗರಿಷ್ಠ ಒತ್ತು ನೀಡಬೇಕು. ಒಂಟಿ ಮಹಿಳೆಯರು ಏಕಾಂಗಿ ಹಿರಿಯ ನಾಗರಿಕರು ವಿಶೇಷ ಚೇತನರು ಅನಾರೋಗ್ಯಪೀಡಿತ ವ್ಯಕ್ತಿಗಳಿಗೆ ಹೆಚ್ಚಿನ ಬೆಂಬಲ ಸಹಾಯದ ಅವಶ್ಯ ಇರುತ್ತದೆ. ಇಂಥವರು ವಾಸಿಸುವ ಮನೆಗಳಿಗೆ ಪೊಲೀಸ್ ಸಿಬ್ಬಂದಿ ಸಾಧ್ಯವಾದಷ್ಟು ನಿತ್ಯ ಭೇಟಿ ನೀಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ನಿರ್ಭಯವಾಗಿ ವಾಸಿಸುವ ವಾತಾವರಣ ಕಲ್ಪಿಸಬೇಕು’ ಎಂದು ಹೆಚ್ಚುವರಿ ಎಸ್ಪಿ ತಿಮ್ಮಯ್ಯ ಅವರು ಬೀಟ್ ಸಿಬ್ಬಂದಿಗೆ ಮಾರ್ಗದರ್ಶನ ಮಾಡಿದ್ದಾರೆ.
ರಿಜಿಸ್ಟರ್ ನಿರ್ವಹಣೆಗೆ ಸೂಚನೆ
‘ಮನೆ–ಮನೆಗಳಲ್ಲಿ ಸ್ವೀಕೃತವಾಗುವ ಎಲ್ಲ ಅಹವಾಲು ಅಥವಾ ದೂರುಗಳ ಪಟ್ಟಿಯನ್ನು ಒಂದು ರಿಜಿಸ್ಟರ್‌ನಲ್ಲಿ ದಾಖಲು ಮಾಡಬೇಕು. ಅಹವಾಲುಗಳ ವಿವರ ದೂರುದಾರರ ಹೆಸರು ಸಂಪರ್ಕ ಸಂಖ್ಯೆ ವಿಳಾಸ ಕೈಗೊಂಡ ಕ್ರಮಗಳು ಒದಗಿಸಲಾದ ಪರಿಹಾರ ಮುಂತಾದ ಮಾಹಿತಿಯನ್ನು ನಮೂದಿಸಬೇಕು. ನಂತರ ಕ್ರೋಡೀಕೃತ ಅಂಕಿಅಂಶಗಳ ಮಾಹಿತಿಯನ್ನು ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದೇವೆ’ ಎನ್ನುತ್ತಾರೆ ಹೆಚ್ಚುವರಿ ಎಸ್ಪಿ ಗಂಗಾಧರಸ್ವಾಮಿ ಎಸ್.ಇ. ಮಾಹಿತಿ ನೀಡಿದ್ದಾರೆ.
640 ಸಿಬ್ಬಂದಿಗೆ ತರಬೇತಿ
‘ಮನೆ–ಮನೆಗೆ ಪೊಲೀಸ್’ ಕಾರ್ಯಕ್ರಮದ ಪರಿಣಾಮಕಾರಿ ಜಾರಿಗಾಗಿ ಮಂಡ್ಯ ಜಿಲ್ಲೆಯಲ್ಲಿರುವ 320 ಬೀಟ್‌ಗಳ 640 ಪೊಲೀಸ್ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಿದ್ದೇವೆ. ಈಗಾಗಲೇ ಮನೆ–ಮನೆಗೆ ನಮ್ಮ ಸಿಬ್ಬಂದಿ ಭೇಟಿ ನೀಡಿ ಅಹವಾಲು ಆಲಿಸುತ್ತಿದ್ದು 15–20 ದಿನಗಳಲ್ಲಿ ಎಲ್ಲ ಮನೆಗಳಿಗೆ ಭೇಟಿ ನೀಡಲಿದ್ದಾರೆ. ತಿಂಗಳಿಗೆ ಕನಿಷ್ಠ 2 ಬಾರಿಯಾದರೂ ಮನೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಲು ಸೂಚಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.