ADVERTISEMENT

ಹಾಲು ಕರೆಯುವ ರಾಜ್ಯಮಟ್ಟದ ಸ್ಪರ್ಧೆ: ಲಕ್ಷ್ಮಿ ಡೇರಿ ಫಾರಂ ಭಕ್ತನ ಪಾಳ್ಯ ಪ್ರಥಮ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 5:30 IST
Last Updated 19 ಫೆಬ್ರುವರಿ 2026, 5:30 IST
ಭಾರತೀನಗರ ಸಮೀಪದ ಕರಡಕೆರೆ ಗ್ರಾಮದಲ್ಲಿ ಶ್ರೀಮಾರುತಿ ಗೋಪಾಲಕರ ಸಂಘದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ಮನ್ಮುಲ್ ಅಧ್ಯಕ್ಷ ಶಿವಪ್ಪ ಅವರು ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.
ಭಾರತೀನಗರ ಸಮೀಪದ ಕರಡಕೆರೆ ಗ್ರಾಮದಲ್ಲಿ ಶ್ರೀಮಾರುತಿ ಗೋಪಾಲಕರ ಸಂಘದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ಮನ್ಮುಲ್ ಅಧ್ಯಕ್ಷ ಶಿವಪ್ಪ ಅವರು ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.   

ಭಾರತೀನಗರ: ಹೈನುಗಾರರಿಗೆ ಮನ್ಮುಲ್‌ನಿಂದ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಹೇಳಿದರು.

ಸಮೀಪದ ಕರಡಕೆರೆ ಗ್ರಾಮದಲ್ಲಿ ಶ್ರೀಮಾರುತಿ ಗೋಪಾಲಕರ ಸಂಘ, ಗೆಜ್ಜಲಗೆರೆ ಸಹಕಾರ ಹಾಲು ಒಕ್ಕೂಟ ಮತ್ತು ಪಶುಪಾಲನಾ ಇಲಾಖೆ  ಸಹಯೋಗದಲ್ಲಿ ನಡೆದ ಮೊದಲನೇ ವರ್ಷದ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

‘ಹೈನುಗಾರರಿಂದ ಮಂಡ್ಯ ಹಾಲು ಒಕ್ಕೂಟ ಉಳಿದಿದೆ. ಕೆಲವೊಮ್ಮೆ ಹಾಲಿನ ಗುಣಮಟ್ಟ ಕಡಿಮೆಯಾದಾಗ ಮನ್ಮುಲ್‌ನಿಂದ ಹಣ ಕಡಿಮೆ ಸಿಗುತ್ತಿದೆ. ಆದ್ದರಿಂದ ರೈತರು ಉತ್ತಮ ಗುಣಮಟ್ಟದ ಹಾಲನ್ನು ಸಂಘಗಳಿಗೆ ಪೂರೈಕೆ ಮಾಡುವ ಮೂಲಕ ಆಗಬಹುದಾದ ನಷ್ಟದಿಂದ ತಪ್ಪಿಸಿಕೊಳ್ಳಬೇಕು’ ಎಂದು ರೈತರಿಗೆ ಕರೆ ನೀಡಿದರು.

ADVERTISEMENT

‘ಮನ್ಮುಲ್ ಎಲ್ಲಾ ಹೈನುಗಾರ ಹಿತ ದೃಷ್ಠಿಯಿಂದ ಹಲವು ಸೌಲಭ್ಯಗಳನ್ನು ಈಗಾಗಲೇ ಮ್ಯಾಟ್‌ ಗಳು ಗುಣಮಟ್ಟದ ನಂದಿನಿ ಪೀಡ್ಸ್, ಮಿನರಲ್ ಮಿಶ್ರಣದ ಪೌಢರ್, ಕೃತಕ ಗರ್ಭಧಾರಣೆ, ರಾಸುಗಳ ಆರೋಗ್ಯ ತಪಾಸಣೆ ಸೇರಿದಂತೆ ಹಲವು ಸವಲತ್ತುಗಳನ್ನು ಒದಗಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಮನ್ಮುಲ್ ಸಭೆಯಲ್ಲಿ ಮಾತನಾಡುವೆ’ ಎಂದರು.

ಮನ್ಮುಲ್ ಅಧ್ಯಕ್ಷ ಶಿವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬಹುಮಾನ ವಿತರಣೆ ಮಾಡಿದರು.

ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಕಾಂಗ್ರೆಸ್ ಮುಖಂಡ ಕೆ.ಎಂ.ರವಿ, ಸುಬ್ರಮಣ್ಯ ಮೆಡಿಕಲ್ ಗಿರೀಶ್, ಶೆಟ್ಟಹಳ್ಳಿ ಸೊಸೈಟಿ ಅಧ್ಯಕ್ಷ ಎಸ್.ಮರಿಸ್ವಾಮಿಗೌಡ, ಅಂಗಡಿ ಶೇಖರ್, ಗೋಪಾಲಕರ ಸಂಘದ ಅಧ್ಯಕ್ಷ ಬೊಮ್ಮೇಗೌಡ, ಗೌರವಾಧ್ಯಕ್ಷ ಬಂಡಿಮಾಯೀಗೌಡ, ಕಾರ್ಯದರ್ಶಿ ಎ.ಪಿ.ಅಭಿಷೇಕ್, ಉಪಾಧ್ಯಕ್ಷ ಕುಮಾರ್, ಖಜಾಂಚಿ ರಾಮಕೃಷ್ಣ, ಮನು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜೇತ ಡೇರಿ ಫಾರಂ

ನೆಲಮಂಗಲದ ಲಕ್ಷ್ಮಿ ಡೇರಿ ಫಾರಂ ಭಕ್ತನ ಪಾಳ್ಯ: 53.300 ಲೀಟರ್ (ಪ್ರಥಮ ಬಹುಮಾನ) ಬೆಂಗಳೂರು ಉತ್ತರದ ರವುತ್ತನಹಳ್ಳಿ ಜೀವಗಾನ ಡೇರಿ ಫಾರಂ 51.350 ಲೀಟರ್ ಹಾಲು (ದ್ವಿತೀಯ) ಆನೆಕಲ್ಲು ತಾಲ್ಲೂಕಿನ ಕಗಲಿಪುರದ ತನುಷ್ ಡೇರಿಫಾರಂ 49.200 ಲೀಟರ್ ಹಾಲು(ತೃತೀಯ) ಬೆಂಗಳೂರು ಪಟೇಲಮ್ಮ ಪಶುಪಾಲನಾ ಸಮಿತಿ ಪಲ್ಲವಿ ಹಾಲಿನ ಡೇರಿ ಫಾರಂ 46.350 ಲೀಟರ್ ಹಾಲು(ಚತುರ್ಥ) ಬೆಂಗಳೂರಿನ ಪಾದರಾಯನ ಪುರ ನಡುಗದೇಶ್ವರ ಡೇರಿ ಫಾರಂ 43.550 ಲೀಟರ್ ಹಾಲು(ಐದನೇ ಬಹುಮಾನ) ಹೆಚ್ಚು ಹಾಲನ್ನು ಕರೆಯುವ ಮೂಲಕ ಅನುಕ್ರಮವಾರ ₹1ಲಕ್ಷ ₹75 ಸಾವಿರ ₹50 ಸಾವಿರ ₹25 ಸಾವಿರ ₹10 ಸಾವಿರ ನಗದು ಹಾಗೂ ಪಾರಿತೋಷಕವನ್ನು  ಪಡೆದುಕೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.