ADVERTISEMENT

ನಿರುದ್ಯೋಗ ನಿವಾರಣೆಗೆ ತರಬೇತಿ ನೀಡಿ: ಮನೋಜ್ ಕುಮಾರ್ ಮೀನಾ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 6:13 IST
Last Updated 10 ಫೆಬ್ರುವರಿ 2026, 6:13 IST
ಮಂಡ್ಯ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು 
ಮಂಡ್ಯ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು    

ಮಂಡ್ಯ: ‘ಪಿ.ಎಂ. ಕಿಸಾನ್ ಯೋಜನೆಯಡಿ 21 ಕಂತುಗಳಲ್ಲಿ ₹892 ಕೋಟಿ ನೀಡಲಾಗಿದೆ. ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಕೃಷಿಯಿಂದ ಉದ್ಯಮ ಹೇಗೆ ಪ್ರಾರಂಭಿಸಬೇಕು ಎಂಬುದರ ಕುರಿತು ತರಬೇತಿ ನೀಡಿ, ಸೌಲಭ್ಯ ಕಲ್ಪಿಸಿ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಸೂಚಿಸಿದರು. 

ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಜಿಲ್ಲಾ ಮಟ್ಟದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಲ್ ಜಲ್ ಯೋಜನೆಯಡಿ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಸ್ವ ಸಹಾಯ ಗುಂಪುಗಳಿಗೆ ತರಬೇತಿ ನೀಡಲಾಗಿದೆ. ಆ ಹೆಣ್ಣು ಮಕ್ಕಳಿಗೆ ಕೇವಲ ತರಬೇತಿ ನೀಡಿದರೆ ಸಾಲದು, ತರಬೇತಿಗೆ ತಕ್ಕ ಹಾಗೆ ಕೆಲಸಗಳನ್ನು ನೀಡಿ. ಆಗ ಮಾತ್ರ ತರಬೇತಿ ನೀಡಿದ್ದು ಸಾರ್ಥಕವಾಗುತ್ತದೆ ಎಂದು ಹೇಳಿದರು.

ADVERTISEMENT

‘ಪ್ರಸಕ್ತ ವರ್ಷ ಜಿಲ್ಲೆಗೆ ಅಗತ್ಯವಿರುವ ನೀರಿನ ಪ್ರಮಾಣ ಲಭ್ಯವಿದೆ. ಹಾಗಾಗಿ ಬೇಸಿಗೆಯಲ್ಲಿ ಬೆಳೆ ಮತ್ತು ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುವುದಿಲ್ಲ. ಜನರಿಗೆ ಜಲ ಜೀವನ್ ಮಿಷನ್ ಮೂಲಕ ಶುದ್ಧ ಕುಡಿಯುವ ನೀರನ್ನು ಮನೆ– ಮನೆಗೆ ತಲುಪಿಸಿ. ಪ್ರತಿ ವಾರ ನೀರಿನ ಗುಣಮಟ್ಟವನ್ನು ಪರಿಶೀಲಿಸಿ’ ಎಂದು ಸೂಚಿಸಿದರು.

ಪ್ರಾಥಮಿಕ ಹಂತದಲ್ಲಿಯೇ ಹಸಿ ಕಸ ಮತ್ತು ಒಣ ಕಸಗಳನ್ನು ಬೇರ್ಪಡಿಸುವಂತೆ ಅರಿವು ಮೂಡಿಸಿ. ಮಂಡ್ಯ ನಗರದಲ್ಲಿ ಸ್ವಚ್ಛತೆ ಕಾಪಾಡುವುದು ಎಲ್ಲರ ಹೊಣೆ ಎಂದರು.

ಶೇ 89ರಷ್ಟು ತೆರಿಗೆ ಸಂಗ್ರಹ: ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ‘ಆಸ್ತಿ ತೆರಿಗೆಯ ವಸೂಲಾತಿಯಲ್ಲಿ ಈಗಾಗಲೇ ಶೇ 89ರಷ್ಟು ತೆರಿಗೆ ಸಂಗ್ರಹಿಸಲಾಗಿದೆ. ಉಳಿದ ತೆರಿಗೆಯನ್ನು ಮಾರ್ಚ್ ಅಂತ್ಯದೊಳಗೆ ಸಂಗ್ರಹಿಸಲಾಗುತ್ತದೆ’ ಎಂದು ಹೇಳಿದರು.

ಎಂಎಲ್ಎ ಮತ್ತು ಎಂಎಲ್‌ಸಿ ಅನುದಾನದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ. ಈ ವರ್ಷ ಪಿಎಂಎಫ್ಎಂಇ ಯೋಜನೆಯಡಿ ಜಿಲ್ಲೆಯ 328 ಅರ್ಹ ರೈತ ಫಲಾನುಭವಿಗಳಿಗೆ ₹83.42 ಕೋಟಿ ಸಾಲ ಹಾಗೂ ₹27.72 ಕೋಟಿ ಸಹಾಯಧನ ನೀಡಲಾಗಿದೆ ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿಗಳಾದ ಶಿವಮೂರ್ತಿ ಮತ್ತು ಶ್ರೀನಿವಾಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. 

‘ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸಿ’

‘ಜಿಲ್ಲೆಯ ಅಂಗನವಾಡಿಗಳಲ್ಲಿ 61 ಸಾವಿರಕ್ಕೂ ಹೆಚ್ಚು ಮಕ್ಕಳಿದ್ದು ಪೌಷ್ಟಿಕ ಕೊರತೆ ಉಂಟಾಗದಂತೆ ಕ್ರಮ ವಹಿಸಿ. ಗುಣಮಟ್ಟದ ಪೌಷ್ಟಿಕ ಆಹಾರಗಳನ್ನು ಮಕ್ಕಳಿಗೆ ನೀಡಿ. ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಬರೆಯಲಿರುವ ಮಕ್ಕಳಿಗೆ ವಿಶೇಷವಾಗಿ ಭಾಷಾ ವಿಷಯ ಹಾಗೂ ಗಣಿತ ವಿಷಯಗಳಲ್ಲಿ ಮೇಲೆ ಹೆಚ್ಚಿನ ಒತ್ತು ನೀಡಿ. ಶಾಲಾ ಶಿಕ್ಷಕರು ಮಕ್ಕಳಿಗೆ ಸೂಕ್ತವಾಗಿ ಪಾಠ ಮಾಡುತ್ತಿದ್ದಾರಾ ಎಂಬುದನ್ನು ಪರಿಶೀಲಿಸಿ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

‘ಜಲಜೀವನ ಮಿಷನ್‌: ಅನುದಾನದ ಕೊರತೆ’

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ ಮಾತನಾಡಿ ‘ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಈಗಾಗಲೇ ಶೇ 79ರಷ್ಟು ಕಾಮಗಾರಿ ಮುಗಿದಿದ್ದು ಅನುದಾನದ ಕೊರತೆಯಿಂದ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ’ ಎಂದು ಹೇಳಿದರು. ‘ಅಕ್ಕನ ಬುತ್ತಿ’ ಎಂಬ ಹೊಸ ಯೋಜನೆಯನ್ನು ಎನ್.ಆರ್.ಎಲ್.ಎಂ ಯೋಜನೆಯಡಿ ರೂಪಿಸಲಾಗಿದೆ. ಗುಣಮಟ್ಟದ ಆಹಾರವನ್ನು ಕ್ಯಾಟರಿಂಗ್ ಮೂಲಕ ಸರ್ಕಾರಿ ಕಚೇರಿಗಳು ಮತ್ತು ಇನ್ನಿತರ ಸಂಸ್ಥೆಗಳಿಗೆ ನೀಡಲಾಗುತ್ತಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.