
ಮಂಡ್ಯ: ‘ಮನುವಾದ ತೊಲಗಲಿ ಸಂವಿಧಾನ ಉಳಿಯಲಿ’ ಎಂಬ ಘೋಷಣೆಯೊಂದಿಗೆ ಮನುಸ್ಮೃತಿ ಪ್ರತಿಗಳನ್ನು ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ನಗರದಲ್ಲಿ ಗುರುವಾರ ಸುಟ್ಟು ಹಾಕಿ ಮನುಸ್ಮೃತಿ ವಿರೋಧಿ ದಿನ ಆಚರಿಸಿದರು.
ನಗರದ ಜೆ.ಸಿ. ವೃತ್ತದ ಬಳಿ ಜಮಾವಣೆಗೊಂಡ ಮುಖಂಡರು, 1927ರ ಡಿ.25ರಂದು ಅಂಬೇಡ್ಕರ್ ಅವರು ಮನಸ್ಕೃತಿ ಸುಟ್ಟು ಹಾಕಿದ ಐತಿಹಾಸಿಕ ದಿನವಾಗಿದ್ದು, ಉಚ್ಚ, ನೀಚ, ಅಸ್ಪೃಶ್ಯ ಮೇಲು ಕೀಳಿನ ಸಂಹಿತೆಗೆ ಬೆಂಕಿ ಇಟ್ಟು ಬರೋಬ್ಬರಿ 98 ವರ್ಷಗಳೇ ಕಳೆದಿವೆ. ಸಮತೆಯ ಜ್ಯೋತಿಯನ್ನು ಬೆಳಗಲು ಈ ಮನಸ್ಮೃತಿ ಸುಡಲಾಗುತ್ತಿದೆ ಎಂಬ ಘೋಷಣೆಗಳು ಕೇಳಿ ಬಂದವು.
ಸಂವಿಧಾನ ಸಮರ್ಪಣೆಯಾದ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ಮುಖವಾಣಿ ‘ಆರ್ಗನೈಸರ್’ ಪತ್ರಿಕೆಯು ನಮ್ಮ ಸಂವಿಧಾನದ ಮೇಲೆ ಅಸಹನೆ ಹೊರಹಾಕಿತ್ತು. ಸಂವಿಧಾನದಲ್ಲಿ ಭಾರತೀಯತೆ ಇಲ್ಲ, ಸಂವಿಧಾನ ರಚನಾಕಾರರು ಮನುಸ್ಮೃತಿಯನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿತ್ತು. ಈಗಲೂ ಪರಿಸ್ಥಿತಿ ಬದಲಾಗಿಲ್ಲ. ಆರ್‌ಎಸ್‌ಎಸ್ ಅದರ ರಾಜಕೀಯ ಪಕ್ಷವಾದ ಬಿಜೆಪಿಯು ಅಂದಿನಿಂದಲೂ ಆಂತರಿಕವಾಗಿ ಸಂವಿಧಾನದ ಮೇಲೆ ಅಸಹಿಷ್ಣುತೆ ಹೊರಹಾಕುತ್ತಲೇ ಬಂದಿದೆ ಎಂದು ಆರೋಪಿಸಿದರು.
ಸಂವಿಧಾನ ರೂಪಿಸಿಕೊಂಡಿದ್ದನ್ನು ಸಹಿಸಿಕೊಳ್ಳದ ಶಕ್ತಿಗಳು ಇಂದು ಮತ್ತಷ್ಟು ಬಲಗೊಳ್ಳುತ್ತಿವೆ. ಅಂಬೇಡ್ಕರ್, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಯುದ್ಧವನ್ನೇ ಸಾರಿವೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಣೆ ಮಾಡಿಕೊಳ್ಳುವ ಕಾರಣಕ್ಕಾಗಿ ಅಂಬೇಡ್ಕರ್ ಅವರು ಮನುಸ್ಮೃತಿ ಸುಟ್ಟು ಹಾಕಿದ 1927ರ ಡಿ.25 ಅನ್ನು ಸಾಂಕೇತಿವಾಗಿ ನಾವು ಸಹ ಮನುಸ್ಮೃತಿ ಸುಟ್ಟಿದ್ದೇವೆ. ಈ ನೆಲದಲ್ಲಿ ಜಾತಿ ವ್ಯವಸ್ಥೆ ಇನ್ನೂ ಇದೆ ಎಂಬುದಕ್ಕೆ ಹುಬ್ಬಳಿಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಸಾಕ್ಷಿ ಎಂದು ಆರೋಪಿಸಿದರು.
ವಿವಿಧ ಸಂಘಟನೆಯ ಮುಖಂಡರಾದ ಸಿ.ಕುಮಾರಿ, ಸೌಮ್ಯಾ, ಪೂರ್ಣಿಮಾ, ಜಗದೀಶ್ ಹನಕೆರೆ, ಸಿದ್ದರಾಜು, ವೆಂಕಟೇಶ್, ಜೆ.ರಾಮಯ್ಯ, ನಿರಂಜನ್, ನಾಗೇಶ್, ಎಸ್.ಕೌಶಲ್ಯಾ, ಶೈಲಜಾ ಭಾಗವಹಿಸಿದ್ದರು.
ಡಿಎಸ್‌ಎಸ್ ಮುಖಂಡ ಗುರುಪ್ರಸಾದ್ ಕೆರಗೋಡು ಮಾತನಾಡಿ ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಮುನ್ನುಡಿ ಬರೆದು ಭಾರತವನ್ನು ಅಂಧಕಾರಕ್ಕೆ ತಳ್ಳಲಾಗಿತ್ತು. ಜೊತೆಗೆ ಜಾತಿ ಅಸಮಾನತೆ ಲಿಂಗ ತಾರತಮ್ಯ ಮಹಿಳೆಯರ ಮೇಲಿನ ದಬ್ಬಾಳಿಕೆ ಬಹುಜನರ ಮೇಲೆ ದೌರ್ಜನ್ಯ ಬೆತ್ತಲೆ ಸೇವೆ ದೇವದಾಸಿ ಪದ್ಧತಿ ಶೂದ್ರಾತಿಶೂದ್ರರಿಗೆ ಅಕ್ಷರ ಜ್ಞಾನ ನಿಷಿದ್ಧ ಮುಂತಾದ ಅನಿಷ್ಟ ಪದ್ಧತಿಗಳು ಶತಮಾನಗಳ ಕಾಲ ಮುಂದುವರಿಯಲು ಕಾರಣವಾದ ಮನಸ್ಮೃತಿಯನ್ನು ಸುಟ್ಟು ಹಾಕಲಾಯಿತು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.