ADVERTISEMENT

ಮಂಡ್ಯ ಕನ್ನಡ ಜಾಗೃತಿ ಸಮಾವೇಶದಲ್ಲಿ ಮಹೇಶ್ ಜೋಶಿ ವಿರುದ್ಧ ಹಲವು ನಿರ್ಣಯಗಳು

​ಪ್ರಜಾವಾಣಿ ವಾರ್ತೆ
Published 17 ಮೇ 2025, 13:23 IST
Last Updated 17 ಮೇ 2025, 13:23 IST
   

ಮಂಡ್ಯ: ದ್ವೇಷಪೂರಿತ ದುರಾಡಳಿತ, ಆರ್ಥಿಕ ಅಶಿಸ್ತು ಹಾಗೂ ಸರ್ವಾಧಿಕಾರಿ ಧೋರಣೆಯಿಂದಾಗಿ ಪರಿಷತ್ತಿನ ಘನತೆಗೆ ಚ್ಯುತಿಯುಂಟು ಮಾಡಿರುವ ಕಸಾಪ ಅಧ್ಯಕ್ಷ ಮಹೇಶ ಜೋಶಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು ಮತ್ತು ಸಚಿವ ಸಂಪುಟ ದರ್ಜೆಯ ಸ್ಥಾನಮಾನವನ್ನು ಕೂಡಲೇ ಹಿಂಪಡೆಯಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ‘ಕನ್ನಡ ಜಾಗೃತಿ ಸಮಾವೇಶ’ದಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ಶನಿವಾರ ‘ಮಂಡ್ಯದ ಕನ್ನಡ ನಾಡುನುಡಿ ಜಾಗೃತಿ ಸಮಿತಿ’ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಸಮಾವೇಶದಲ್ಲಿ ‘ಮಹೇಶ ಜೋಶಿಯವರನ್ನು ಅಮಾನತುಗೊಳಿಸಿ, ಆಡಳಿತಾಧಿಕಾರಿ ನೇಮಿಸಿ’ ಎಂದು ಸಾಹಿತಿಗಳು, ಪ್ರಗತಿಪರ ಚಿಂತಕರು, ಕನ್ನಡಪರ ಹೋರಾಟಗಾರರು ಒಕ್ಕೊರಲಿನಿಂದ ಘೋಷಣೆ ಮೊಳಗಿಸಿದರು.

ನಗಾರಿ ಬಾರಿಸುವ ಮೂಲಕ ಸಮಾವೇಶವನ್ನು ಉದ್ಘಾಟಿಸಿದ ಗಣ್ಯರು, ಸಮಾರೋಪ ಸಮಾರಂಭದಲ್ಲಿ ಒಟ್ಟು 12 ನಿರ್ಣಯಗಳನ್ನು ಕೈಗೊಂಡರು.

ADVERTISEMENT

ಮಹೇಶ ಜೋಶಿ ಅವರ ಅವಧಿಯಲ್ಲಿ ಆಗಿರುವ ಬೈಲಾ ತಿದ್ದುಪಡಿಯನ್ನು ರದ್ದುಪಡಿಸಿ 4 ವರ್ಷಗಳ ಹಿಂದೆ ಇದ್ದ ಮೂಲ ಬೈಲಾವನ್ನು ಉಳಿಸಿಕೊಳ್ಳಬೇಕು. ಕಸಾಪ ಆಜೀವ ಸದಸ್ಯರಿಗೆ, ಚುನಾಯಿತ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಷೋಕಾಸ್‌ ನೋಟಿಸ್‌ ನೀಡಿ ಸದಸ್ಯತ್ವ ರದ್ದತಿಗೆ ಮುಂದಾಗಿರುವ ಕ್ರಮವನ್ನು ತೀವ್ರವಾಗಿ ಖಂಡಿಸಲಾಯಿತು.

ಆರ್ಥಿಕ ಮತ್ತು ಸಹಕಾರಿ ಇಲಾಖೆಯ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಿ, ಸರ್ಕಾರಕ್ಕೆ ಆಗಿರುವ ನಷ್ಟವನ್ನು ಅಧ್ಯಕ್ಷರಿಂದ ತುಂಬಿಸಿಕೊಳ್ಳಬೇಕು. ಸಮ್ಮೇಳನದ ₹2.5 ಕೋಟಿ ಅನುದಾನ ಮತ್ತು ದೇಶ–ವಿದೇಶಗಳಿಂದ ಪಡೆದಿರುವ ಹಣದ ಖರ್ಚು–ವೆಚ್ಚದ ಲೆಕ್ಕ ಕೊಡಬೇಕು ಎಂದು ಆಗ್ರಹಿಸಿದರು.

ಪೊಲೀಸ್‌ ಭದ್ರತೆ ಏಕೆ?

ಚಿಂತಕ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಪ್ರಕರಣವೊಂದರಲ್ಲಿ ಮಹೇಶ ಜೋಶಿ ಅವರಿಗೆ ನ್ಯಾಯಾಲಯವು ದಂಡ ಹಾಕಿದೆ. ಅಕಸ್ಮಾತ್‌ ಜೈಲಿಗೆ ಹೋಗುವ ಪರಿಸ್ಥಿತಿ ಬಂದಿದ್ದರೆ, ಪರಿಷತ್ತಿನ ಘನತೆ ಏನಾಗುತ್ತಿತ್ತು? ಪರಿಷತ್ತಿನ ಅಧ್ಯಕ್ಷರೊಬ್ಬರು ಪೊಲೀಸ್‌ ಭದ್ರತೆ ಕೇಳಿದಾಗ ನ್ಯಾಯಾಲಯ ಕಣ್ಮುಚ್ಚಿ ಅನುಮತಿ ಕೊಟ್ಟಿದ್ದು ಸರಿಯೇ ಎಂದು ಪ್ರಶ್ನಿಸಿದರು.

ಮಾನವ ಸರಪಳಿ:

ಮೈಸೂರು, ಚಾಮರಾಜನಗರ, ಹಾಸನ, ರಾಮನಗರ, ತುಮಕೂರು, ಬೆಂಗಳೂರು ಮುಂತಾದ ಜಿಲ್ಲೆಗಳಿಂದ ಬಂದಿದ್ದ ನೂರಾರು ಕನ್ನಡಪರ ಮನಸುಗಳು ನಗರದ ಸಂಜಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ‘ಮಹೇಶ ಜೋಶಿ ಇಳಿಸಿ, ಕಸಾಪ ಉಳಿಸಿ’ ಘೋಷಣೆಗಳನ್ನು ಮೊಳಗಿಸಿದರು. ಅಲ್ಲಿಂದ ಹೊರಟ ಪ್ರತಿಭಟನಾ ಜಾಥಾವು ಕಲಾಮಂದಿರದವರೆಗೆ ಸಾಗಿತು. ಸಮಾವೇಶ ಮುಗಿದ ನಂತರ ಜಿಲ್ಲಾಧಿಕಾರಿ ಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಸಮಾವೇಶದಲ್ಲಿ ಸಾಹಿತಿಗಳು ಮತ್ತು ಪ್ರಗತಿಪರ ಚಿಂತಕರಾದ ಕಾಳೇಗೌಡ ನಾಗವಾರ, ಹಿ.ಶಿ.ರಾಮಚಂದ್ರೇಗೌಡ, ಆರ್‌.ಜಿ.ಹಳ್ಳಿ ನಾಗರಾಜ್‌, ಪ್ರೊ.ಬಿ.ಜಯಪ್ರಕಾಶಗೌಡ, ಸುನಂದಾ ಜಯರಾಂ, ಎಚ್‌.ಎಲ್‌.ಪುಷ್ಪಾ, ವಸುಂಧರಾ ಭೂಪತಿ, ಕೆ.ಎಸ್‌.ವಿಮಲ, ಪದ್ಮಾ ಶೇಖರ್‌, ಮೀರಾ ಶಿವಲಿಂಗಯ್ಯ, ಸಿ.ಕುಮಾರಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಪ್ರೊ.ನಂಜರಾಜೇ ಅರಸ್‌, ರಾಮೇಗೌಡ ಮುಂತಾದವರು ಪಾಲ್ಗೊಂಡಿದ್ದರು.

‘ಪರಿಷತ್ತಿಗೆ ಅಂಟಿದ ರಾಜಕಾರಣದ ಕೊಳಕು’

ಸಾಹಿತಿ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಮಾತನಾಡಿ, ಮಹೇಶ ಜೋಶಿ ಅವರು ಪಕ್ಷ ರಾಜಕಾರಣದ ಕೊಳಕನ್ನು ಪರಿಷತ್ತಿಗೆ ಅಂಟಿಸಿದ್ದಾರೆ. ‘ಸರ್ವಾಧಿಕಾರತ್ವ’ದಿಂದ ಬೈಲಾ ತಿದ್ದುಪಡಿ ಮಾಡಿ ಪರಿಷತ್ತಿನ ವಿಕೇಂದ್ರೀಕರಣ ವ್ಯವಸ್ಥೆಯನ್ನೇ ಹಾಳುಗೆಡವಿದ್ದಾರೆ. ಚುನಾವಣೆಯಲ್ಲಿ ಸೋತವರ ಬಗ್ಗೆ ‘ಠೇವಣಿ ಕಳೆದಿದ್ದೇನೆ’ ಎಂಬ ದುರಹಂಕಾರದ ಮಾತನ್ನು ಆಡುತ್ತಿದ್ದಾರೆ. ಇದು ಅಸಾಹಿತ್ಯಿಕವಾದ ಮನಸು. ಸಾಹಿತ್ಯ ಸದಾ ಸೋತವನ ಕಡೆಗೆ, ನೋವು ಉಂಡವರ ಕಡೆಗೆ ನಿಲ್ಲುತ್ತದೆ. ಗೆದ್ದವನ ಬಾಲ ಹಿಡಿಯುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಾಹಿತ್ಯ ಸೇವೇ ಮಾಡುವ ಪರಿಚಾರಕರಿಗೆ ‘ಸಚಿವ ಸ್ಥಾನಮಾನ’ ಏಕೆ ಬೇಕು? ತಮ್ಮ ಲೆಟರ್‌ ಹೆಡ್‌ನಲ್ಲಿ ಇದನ್ನು ಬಿಂಬಿಸಿಕೊಂಡಿರುವುದು ದರ್ಪದ ನಡವಳಿಕೆ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.