ಮಂಡ್ಯ: ‘ಸದನದಲ್ಲಿ ಹಿಂದಿ ಭಾಷೆ ಮಾತನಾಡಿದರೂ ನಮ್ಮ ಶಾಸಕರು ಪ್ರಶ್ನೆ ಮಾಡದಿರುವುದು ದುರಂತ. ಹೀಗಾಗಿ ಮರಾಠಿ ಪುಂಡರ ಹಾವಳಿ ಹಂತ- ಹಂತವಾಗಿ ಹೆಚ್ಚುತ್ತಿದೆ’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು.
ಬೆಳಗಾವಿ ಮೇಯರ್ ಆಗಿ ಮರಾಠಿಗರನ್ನು ಆಯ್ಕೆ ಮಾಡಿರುವುದನ್ನು ಖಂಡಿಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಕನ್ನಡ ಒಕ್ಕೂಟ ಸಂಘಟನೆಯಿಂದ ನಡೆದ ಕಪ್ಪು ಬಾವುಟ ಪ್ರದರ್ಶನ ಹಾಗೂ ಪ್ರತಿಭಟನೆಯಲ್ಲಿ ಸೋಮವಾರ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ಮೂರು ವರ್ಷಗಳಿಂದಲೂ ಸದನದಲ್ಲಿ ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದಾರೆ. ಯಾವುದೇ ಶಾಸಕರು ಅಥವಾ ಸಚಿವರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಿಲ್ಲ. ಕನ್ನಡಿಗರ ಪರವಾಗಿ ಕೇಳುವವರೇ ಇಲ್ಲದಾಗಿದೆ. ಸದನದಲ್ಲಿ ಹಿಂದಿ ಮಾತನಾಡಿದರೂ ಪ್ರಶ್ನಿಸುವವರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಖುರ್ಷಿದ್ ಆಲಂಖಾನ್ ಅವರು ಹಿಂದಿಯಲ್ಲಿ ಮಾತನಾಡುವಾಗ ನಾನು ವಿರೋಧಿಸಿದ್ದೆ. ನನ್ನ ಗದ್ದಲದಿಂದ ಬೇಸತ್ತು ರಾಜ್ಯಪಾಲರು ಭಾಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿ ಹೊರ ನಡೆದಿದ್ದರು. ಆದರೆ ಇಂತಹ ಎದೆಗಾರಿಕೆಯನ್ನು ಇಂದಿನ ಜನಪ್ರತಿನಿಧಿಗಳು ಬೆಳೆಸಿಕೊಂಡಿಲ್ಲ ಎಂದು ವಿಷಾದಿಸಿದರು.
ಮರಾಠಿಗರ ಪುಂಡಾಟಿಕೆ, ಮರಾಠಿಗರ ಅಟ್ಟಹಾಸ, ಎಂ.ಇ.ಎಸ್ ನಿಷೇಧ ಮಾಡಬೇಕು. ಕಳಸಾ ಬಂಡೂರಿ ಮಹದಾಯಿ ಯೋಜನೆ ಕೂಡಲೇ ಆರಂಭ ಮಾಡಬೇಕು. ಹಿಂದಿ ಹೇರಿಕೆ ಬೇಡ, ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾ.22ರಂದು ಅಖಂಡ ಕರ್ನಾಟಕ ಬಂದ್ ಮಾಡಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಕನ್ನಡ ಸೇನೆ ರಾಜ್ಯ ಘಟಕದ ಅಧ್ಯಕ್ಷ ಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಮಹಂತಪ್ಪ, ಆನಂದ್, ಬೆಟ್ಟಹಳ್ಳಿ ಮಂಜುನಾಥ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.