ಸಂತೇಬಾಚಹಳ್ಳಿ: ಇಲ್ಲಿನ ಮಾರುಕಟ್ಟೆಯಲ್ಲಿ ಮೂಲಸೌಕರ್ಯವಿಲ್ಲದೆ ರೈತರುಗೆ ಹಾಗೂ ವ್ಯಾಪಾರಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂತೇಬಾಚಹಳ್ಳಿ ಹೋಬಳಿ ಕೇಂದ್ರದಲ್ಲಿ ನೂರಾರು ಹಳ್ಳಿಗಳಿಂದ ರೈತರು ಕಾಯಿ, ಎಳನೀರು, ವಿವಿಧ ಧಾನ್ಯಗಳ ಮಾರಾಟಕ್ಕಾಗಿ ಹಾಗೂ ವ್ಯವಹಾರಕ್ಕಾಗಿ ಸಾವಿರಾರು ಜನರು ಆಗಮಿಸುತ್ತಾರೆ. ಇಲ್ಲಿನ ಮಾರುಕಟ್ಟೆ ಸುಮಾರು ಪುರಾತನ ಕಾಲದಿಂದಲೂ ಹೋಬಳಿ ಕೇಂದ್ರದಲ್ಲಿ ಪ್ರಮುಖ ಮಾರುಕಟ್ಟೆಯಾಗಿದೆ. ಸಾವಿರಾರು ಜನರು ಆಗಮಿಸಿ ವ್ಯವಹಾರ ನಡೆಸಿದರು ಇಲ್ಲಿನ ಮಾರುಕಟ್ಟೆಯಲ್ಲಿ ಕನಿಷ್ಠ ಕುಡಿಯುವ ನೀರು ಸಹ ಲಭ್ಯವಿಲ್ಲದಂತಾಗಿದೆ.
‘ಕುಡಿಯುವ ನೀರಿನ ತೊಂಬೆಯಲ್ಲಿ ಗಿಡಗಂಟಿಗಳು ಬೆಳೆದಿವೆ. ತರಕಾರಿ ಮಾರುಕಟ್ಟೆಯಲ್ಲಿ ಚಾವಣಿ ಇಲ್ಲದೆ ಮಳೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇನ್ನೂ ಕೆಲವರು ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರ ಮಾಡಿ ವಾಹನ ಸವಾರರಿಗೆ ಕಿರಿ ಕಿರಿ ಉಂಟು ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ವ್ಯಾಪಾರಕ್ಕೆ ಸಮಸ್ಯೆಯಾಗಿದ್ದು ದಲ್ಲಾಳಿಗಳಿಗೆ ಇದೆ ನೆಪವಾಗಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಅಲ್ಲೇ ಕಡಿಮೆ ಬೆಲೆಗೆ ವ್ಯಾಪಾರ ಮಾಡಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ’ ಎಂದು ರೈತ ನಾಗೇಶ್ ಆರೋಪಿಸಿದ್ದಾರೆ.
ಸರ್ವೇ ನಂಬರ್ 306 ರಲ್ಲಿ 4 ಎಕರೆ 36 ಗುಂಟೆ ಇದ್ದು ಮಾರುಕಟ್ಟೆಗೆ ಕಾಂಪೌಂಡ್ ವ್ಯವಸ್ಥೆ ಇಲ್ಲದೆ ಒತ್ತುವರಿಯಾಗುವ ಸಾಧ್ಯತೆಯೂ ಇದೆ. ಮಾರುಕಟ್ಟೆ ಸುಮಾರು 60 ವರ್ಷಗಳಿಂದಲೂ ಯಾವುದೇ ಅಭಿವೃದ್ಧಿ ಕಾಣದೆ ನನೆಗುದಿಗೆ ಬಿದ್ದಿದೆ. ಪ್ರತಿ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ತರಕಾರಿ ಮಾರುಕಟ್ಟೆ ಪ್ರಾರಂಭವಾಗುತ್ತದೆ. ಕಾಯಿ ಮಾರುಕಟ್ಟೆ 8 ಗಂಟೆಯಿಂದ ಪ್ರಾರಂಭವಾಗುತ್ತದೆ. ಆದರೆ ಕೆಲ ದಲ್ಲಾಳಿಗಳು 6 ಗಂಟೆಗೆ ವ್ಯಾಪಾರ ಮಾಡಿ ಒಪ್ಪಂದ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ಮೋಹನ್ ಹೇಳುತ್ತಾರೆ.
ಕೊಳವೆಬಾವಿ ಕೊರೆಸಿ ನೀರು ಒದಗಿಸಿದ್ದರೂ ಬರಗಾಲದಲ್ಲಿ ನೀರಿನ ಕೊರತೆ ಹೆಚ್ಚಾಯಿತು. ಶೀಘ್ರ ಒಂದು ಕೊಳವೆಬಾವಿ ಕೊರೆಸಿ ನೀರು ವಿದ್ಯುತ್ ಸೇರಿ ಮೂಲ ಸೌಕರ್ಯ ನೀಡಲು ಕ್ರಮ ಕೈಗೊಳ್ಳುತ್ತೇವೆ.ಸತೀಶ್, ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕೆ ಆರ್. ಪೇಟೆ
ಸಂತೇಬಾಚಹಳ್ಳಿ ದೊಡ್ಡ ಹೋಬಳಿಯಾಗಿದ್ದು ರೈತರಿಗೆ ಮೂಲ ಸೌಕರ್ಯ ಒದಗಿಸುವಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿ ಶೀಘ್ರದಲ್ಲಿ ಸಮಸ್ಯೆ ಪರಿಹರಿಸುತ್ತೇವೆಎಚ್.ಟಿ.ಮಂಜು, ಶಾಸಕ, ಕೆ.ಆರ್.ಪೇಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.