ADVERTISEMENT

ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರು: ಆತಂಕ

ಸರ್‌ ಎಂ.ವಿ. ಕ್ರೀಡಾಂಗಣಕ್ಕೆ ತರಕಾರಿ ಮಾರುಕಟ್ಟೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 12:47 IST
Last Updated 30 ಮಾರ್ಚ್ 2020, 12:47 IST
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮಂಡ್ಯ ನಗರದ ಸರ್‌ ಎಂ.ವಿ ಕ್ರೀಡಾಂಗಣದಲ್ಲಿ ತರಕಾರಿ ಖರೀದಿಯಲ್ಲಿ ನಿರತರಾಗಿರುವ ಜನರು
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮಂಡ್ಯ ನಗರದ ಸರ್‌ ಎಂ.ವಿ ಕ್ರೀಡಾಂಗಣದಲ್ಲಿ ತರಕಾರಿ ಖರೀದಿಯಲ್ಲಿ ನಿರತರಾಗಿರುವ ಜನರು   

ಮಂಡ್ಯ: ಕೊರೊನಾ ವೈರಾಣು ಹರಡುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತರಕಾರಿ ಮಾರುಕಟ್ಟೆಯನ್ನು ಜಿಲ್ಲಾ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲಾಗಿದ್ದು, ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಸಾಕಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಜಿಲ್ಲಾ ಕ್ರೀಡಾಂಗಣಕ್ಕೆ ಸೋಮವಾರ ಬೆಳಿಗ್ಗೆಯಿಂದಲೇ ಬಂದ ಜನರು ಖರೀದಿ ಭರದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಇರುವುದು ವೈರಾಣು ಹರಡುವ ತಾಣವಾಗಿ ಮಾರ್ಪಟ್ಟಿತ್ತು.

ಕೆಲವರು ಮುಖಗವಸು, ಟವೆಲ್‌ಗಳನ್ನು ರಕ್ಷಣೆಗಾಗಿ ಬಳಸಿದರೆ ಮತ್ತೆ ಕೆಲವರು ಹಾಗೆಯೇ ಖರೀದಿಸುತ್ತಿದ್ದರು. ಜಿಲ್ಲಾಡಳಿತ ಎಷ್ಟೇ ಕ್ರಮ ಕೈಗೊಂಡರೂ ಜನರು ಮಾತ್ರ ಎಚ್ಚೆತಂತೆ ಕಾಣುತ್ತಿಲ್ಲ. ಎಲ್ಲಿ ಏನೇ ಅಗತ್ಯ ಸಾಮಗ್ರಿಗಳನ್ನು ಖರೀದಿಸಬೇಕಾದರೂ 3 ಅಡಿ ಅಂತರ ಕಾಯ್ದುಕೊಳ್ಳಬೇಕು ಎಂದು ಸಾಕಷ್ಟು ಜಾಗೃತಿ ಮೂಡಿಸಿದರೂ ಜನರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತರಕಾರಿ ಖರೀದಿಯಲ್ಲಿ ಮುಳುಗಿದ್ದರು. ಕ್ರೀಡಾಂಗಣದ ಒಳಕ್ಕೆ ದ್ವಿಚಕ್ರ. ಸರಕು ಸಾಗಣೆ, ಆಟೊಗಳನ್ನು ತಂದು ಎಲ್ಲೆಂದರಲ್ಲಿ ನಿಲ್ಲಿಸಲಾಗಿತ್ತು. ಪೊಲೀಸರೂ ಸಹ ಜನರನ್ನು ನಿಯಂತ್ರಿಸಲಾಗಲಿಲ್ಲ.

ADVERTISEMENT

ತರಕಾರಿ ಖರೀದಿಸುತ್ತಿರುವುದನ್ನು ನೋಡಿದರೆ ಹಳೆಯ ಮಾರುಕಟ್ಟೆಗೂ ಇಲ್ಲಿಗೂ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. ಎಲ್ಲರೂ ಹತ್ತಿರ ಹತ್ತಿರವೇ ನಿಂತು ಖರೀದಿಸುತ್ತಿದ್ದರು.

‘ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಹಿರಿಯ ನಾಗರಿಕರೊಬ್ಬರು ಆಗ್ರಹಿಸಿದರು.

ಒಂದೆಡೆ ರೈತರು ಬೆಲೆ ಸಿಗುತ್ತಿಲ್ಲ ಎಂದು ತಾವು ಬೆಳೆದ ತರಕಾರಿ ಹಣ್ಣುಗಳನ್ನು ರಸ್ತೆಗೆ ಸುರಿದು ನಾಶಪಡಿಸುತ್ತಿದ್ದರೆ, ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿದೆ. ಹೆಚ್ಚಾಗಿ ಬೆಳೆದಿದ್ದರೂ ಖರೀದಿಸುವವರಿಲ್ಲದೆ ಎಪಿಎಂಸಿಗಳಲ್ಲಿ ಹಾಗೆ ಇಳಿಯುತ್ತಿದ್ದು, ಖರೀದಿಸಿದ ತರಕಾರಿ ದೂರದ ಮಾರುಕಟ್ಟೆಗೆ ಬರುವಷ್ಟರಲ್ಲಿ ಸಾರಿಗೆ ವೆಚ್ಚ ಸೇರಿ ದುಬಾರಿಯಾಗುತ್ತಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳಿ: ಜನ ಸಂದಣಿ, ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ತರಕಾರಿ ಮಾರುಕಟ್ಟೆಯನ್ನು ನಗರದ ಸರ್‌ ಎಂ.ವಿ ಕ್ರೀಡಾಂಗಣಕ್ಕೆ ಸ್ಥಳಾಂತರ ಮಾಡಲಾಗಿದೆ. ತರಕಾರಿ ಖರೀದಿಸುವ ಸಂದರ್ಭದಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರೈಲ್ವೆ ನಿಲ್ದಾಣದ ಬಳಿ ಇದ್ದ ಮಾರುಕಟ್ಟೆ ಕಿರಿದಾಗಿದ್ದು ಜನಸಂದಣಿ ಹೆಚ್ಚಾದ ಕಾರಣ ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು’ ಎಂದು ಹೇಳಿದರು.

‘ಧಾನ್ಯ ಸೇರಿದಂತೆ ತರಕಾರಿ ಸರಬರಾಜು ಮಾಡಲು ನಗರದಾದ್ಯಂತ ಹಾಪ್‌ಕಾಮ್ಸ್‌ ಮೂಲಕ 5 ಮಳಿಗೆಗಳನ್ನು ಆರಂಭಿಸಲಾಗುವುದು. ಹಾಪ್‌ಕಾಮ್ಸ್ ಮೂಲಕ ರೈತರು ಬೆಳೆದ ತರಕಾರಿ ಹಣ್ಣುಗಳನ್ನು ಖರೀದಿ ಮಾಡಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘ರೈತರು ಬೆಳೆದಿರುವ ಬೆಳೆಗಳನ್ನು ಮಾರುಕಟ್ಟೆಗಳಿಗೆ ಸಾಗಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹಳ್ಳಿ ಸೇರಿದಂತೆ ಪಟ್ಟಣದ ಪ್ರದೇಶಗಳಲ್ಲಿ ವಾಹನಗಳ ಮೂಲಕ ನೇರವಾಗಿ ಮಾರಾಟ ಮಾಡಬಹುದು. ಬೆಳೆದಿರುವ ಫಸಲುಗಳನ್ನು ನಾಶ ಮಾಡಬೇಡಿ, ಅವುಗಳನ್ನು ಸ್ಥಳೀಯ ಹಾಸ್ಟೆಲ್‌ ಸೇರಿದಂತೆ ಜನ ಸಾಮಾನ್ಯರಿಗೆ ನೀಡಿ’ ಎಂದು ಸಲಹೆ ನೀಡಿದರು.

‘ಅಗತ್ಯ ದಿನಬಳಕೆಯ ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಯಾವುದೇ ಅಡೆತಡೆ ಇಲ್ಲ. ಈ ಬಗ್ಗೆ ಪೊಲೀಸ್‌ ಇಲಾಖೆಯೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಯಾವುದೇ ಭಯ ಇಲ್ಲದೆ ಮುಕ್ತವಾಗಿ ಸಾಗಿಸಬಹುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.