ADVERTISEMENT

ದೆಹಲಿಯಲ್ಲಿ ಸಭೆ ಇಂದು: ಮುಷ್ಕರ ಸ್ಥಗಿತ

ಬೇಡಿಕೆ ಈಡೇರಿಸುವ ಭರವಸೆ ನೀಡಿದ ಕೇಂದ್ರ ಸಚಿವ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 7:49 IST
Last Updated 3 ಡಿಸೆಂಬರ್ 2025, 7:49 IST
ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಸಭೆ ಮಾಡಲು ನಿರ್ಧರಿಸಿರುವ ಪತ್ರವನ್ನು ಜಿಲ್ಲಾಧಿಕಾರಿ ಕುಮಾರ ಅವರು ಪ್ರತಿಭಟನಾನಿರತ ಮುಖಂಡರಿಗೆ ನೀಡಿದರು
ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಸಭೆ ಮಾಡಲು ನಿರ್ಧರಿಸಿರುವ ಪತ್ರವನ್ನು ಜಿಲ್ಲಾಧಿಕಾರಿ ಕುಮಾರ ಅವರು ಪ್ರತಿಭಟನಾನಿರತ ಮುಖಂಡರಿಗೆ ನೀಡಿದರು   

ಮಂಡ್ಯ: ‘ದೆಹಲಿಯಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಬುಧವಾರ ಸಭೆ ಮಾಡಲು ನಿರ್ಧರಿಸಿದ್ದು, ಮುಷ್ಕರ ಕೈಬಿಟ್ಟು ಮುಖಂಡರು ಬರಬೇಕೆಂದು ವಿನಂತಿ ಮಾಡಿಕೊಂಡಿರುವ ಪತ್ರವನ್ನು ಸಿಐಟಿಯು, ಅಕ್ಷರ ದಾಸೋಹ ಸಂಘದ ಮುಖಂಡರಿಗೆ ಜಿಲ್ಲಾಧಿಕಾರಿ ಕುಮಾರ ಅವರು ನೀಡುವ ಮೂಲಕ ಮುಷ್ಕರ ಕೈಬಿಡುವಂತೆ ಮಂಗಳವಾರ ಮನವಿ ಮಾಡಿದರು.

ಕಳೆದ ಎರಡು ದಿನಗಳಿಂದ ಹೋರಾಟ ಆರಂಭಿಸಿದ್ದ ಬಿಸಿಯೂಟ ನೌಕರರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕೆಂದು ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗಿತ್ತು. ಅದರಂತೆ ಚಾಮರಾಜನಗರ, ಮಂಡ್ಯ, ಮೈಸೂರು, ಹಾಸನ ಸೇರಿದಂತೆ ಹಲವು ಭಾಗಗಳಿಂದ ಆಗಮಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪಟ್ಟುಬಿಡದೆ ಧರಣಿ ಆರಂಭಿಸಿ ಅಹೋರಾತ್ರಿ ಹೋರಾಟವನ್ನು ಕೊರೆವ ಚಳಿಯಲ್ಲಿ ನೂರಾರು ಜನರ ಬೆಂಬಲದೊಂದಿಗೆ ಮುಷ್ಕರ ಆರಂಭಿಸಲಾಗಿತ್ತು.

ಮಂಗಳವಾರ ಸಂಜೆ ಪ್ರತಿಭಟನಾ ನಿರತರ ಸ್ಥಳಕ್ಕೆ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಕುಮಾರ ಅವರು, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿ, ನಿಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮಟ್ಟದಲ್ಲಿ ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿ ಅವರು ಭರವಸೆ ಈಡೇರಿಸುವ ಮಾತನ್ನು ದೂರವಾಣಿ ಮೂಲಕ ನಿಮ್ಮ ಮುಖಂಡರ ಜೊತೆ ಮಾತನಾಡಿದ್ದಾರೆ ಎಂದರು.

ADVERTISEMENT

ಪ್ರತಿಭಟನೆಯ ಬಗ್ಗೆ ತಿಳಿದಿರುವ ಅವರು ಒಂದು ಪತ್ರವನ್ನು ನೀಡಿದ್ದಾರೆ. ಹತ್ತು ಜನರು ದೆಹಲಿಗೆ ಬಂದು ವಿಮಾನ, ಪ್ರಯಾಣ ಹಾಗೂ ವಸತಿ ವೆಚ್ಚವನ್ನು ಕೊಡುವುದಾಗಿ ಹೇಳಿ ಪತ್ರವನ್ನು ಕೊಟ್ಟಿದ್ದಾರೆ ಎಂದು ವಿವರಿಸಿದರು.

‍ಪ್ರತಿಭಟನೆಯಲ್ಲಿ ಮುಖಂಡರಾದ ಬಾಲಾಜಿ, ಟಿ.ಎಲ್‌.ಕೃಷ್ಣೇಗೌಡ, ಡಿ.ಟಿ.ವಿಶ್ವನಾಥ್, ಬಿ..ಹನುಮೇಶ, ಶಿವಮಲ್ಲು, ಚಂದ್ರಶೇಖರ್, ಭರತ್ ರಾಜ್, ಪದ್ಮಾವತಿ, ಸೌಮ್ಯಾ ಕುಣಿಗನಹಳ್ಳಿ, ಕೋಣನಹಳ್ಳಿ ಮಂಜು ಭಾಗವಹಿಸಿದ್ದರು.

ಸದ್ಯಕ್ಕೆ ಮುಷ್ಕರ ಸ್ಥಗಿತ

ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ ಸದ್ಯಕ್ಕೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಪತ್ರದ ಮೂಲಕ ನಮ್ಮ ಮುಷ್ಕರಕ್ಕೆ ಬೆಲೆ ನೀಡಿ ಸಮಸ್ಯೆ ಬಗೆಹರಿಸುವ ಮಾತನಾಡಿರುವುದರಿಂದ ಮುಷ್ಕರ ವಾಪಸ್‌ ಪಡೆಯುತ್ತಿದ್ದೇವೆ. ಮತ್ತೆ ಬೇಡಿಕೆಗಳು ಈಡೇರದಿದ್ದರೆ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.