ADVERTISEMENT

ಹಾಲು ಕರೆಯುವ ಸ್ಪರ್ಧೆ: ಬೆಂಗಳೂರಿನ ಚಂದ್ರಮತಿ ಪ್ರಕಾಶ್‌ ಪ್ರಥಮ

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 15:08 IST
Last Updated 19 ಜನವರಿ 2020, 15:08 IST
ಶ್ರೀರಂಗಪಟ್ಟಣದಲ್ಲಿ ಶ್ರೀರಾಮುಲು ಬ್ರಿಗೇಡ್‌ ಭಾನುವಾರ ಸಂಜೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ₹ 1 ಲಕ್ಷ ನಗದು ಮತ್ತು ಟ್ರೋಫಿ ಪಡೆದ ಬೆಂಗಳೂರಿನ ಚಂದ್ರಮತಿ ಪ್ರಕಾಶ್‌ ಅವರಿಗೆ ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಸಂತೋಷ್‌ ಬಹುಮಾನ ವಿತರಿಸಿದರು
ಶ್ರೀರಂಗಪಟ್ಟಣದಲ್ಲಿ ಶ್ರೀರಾಮುಲು ಬ್ರಿಗೇಡ್‌ ಭಾನುವಾರ ಸಂಜೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ₹ 1 ಲಕ್ಷ ನಗದು ಮತ್ತು ಟ್ರೋಫಿ ಪಡೆದ ಬೆಂಗಳೂರಿನ ಚಂದ್ರಮತಿ ಪ್ರಕಾಶ್‌ ಅವರಿಗೆ ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಸಂತೋಷ್‌ ಬಹುಮಾನ ವಿತರಿಸಿದರು   

ಶ್ರೀರಂಗಪಟ್ಟಣ: ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ಶ್ರೀರಾಮು ಬ್ರಿಗೇಡ್‌ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರು ಜೆ.ಪಿ.ನಗರದ ಚಂದ್ರಮತಿ ಪ್ರಕಾಶ್‌ ಅವರ ಹಸು ಎರಡು ಹೊತ್ತಿನಿಂದ 49.810 ಕೆ.ಜಿ. ಹಾಲು ಕರೆದು ಪ್ರಥಮ ಬಹುಮಾನ ₹ 1 ಲಕ್ಷ ನಗದು ಮತ್ತು ಟ್ರೋಫಿಯನ್ನು ಪಡೆಯಿತು.

ಬೆಂಗಳೂರು ಪಾದರಾಯನಪಾಳ್ಯದ ಪೈ.ಸುರೇಶ್‌ ಅವರ ಹಸು 44.400 ಕೆ.ಜಿ ಹಾಲು ಕರೆದು ದ್ವಿತೀಯ ಸ್ಥಾನ (₹ 75,000) ಗಳಿಸಿತು. ಬೆಂಗಳೂರಿನ ಗೀತಾ ಯತೀಶ್‌ ಅವರ ಹಸು 36.200 ಕೆ.ಜಿ. ಹಾಲು ಕರೆಯುವ ಮೂಲಕ ಮೂರನೇ ಬಹುಮಾನ (₹ 50,000) ಪಡೆಯಿತು. ಮೈಸೂರಿನ ಲೋಕೇಶ್‌ ಅವರ ಹಸು 35.270 ಕೆ.ಜಿ. ಹಾಲು ನೀಡಿ 4ನೇ ಸ್ಥಾನ (₹ 25,000)ಗಳಿಸಿತು.

ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ್‌ಕುಮಾರ್‌ ನೇತೃತ್ವದ ವೈದ್ಯರ ತಂಡ ಸ್ಪರ್ಧೆಯನ್ನು ನಡೆಸಿಕೊಟ್ಟಿತು. ಸ್ಥಳದಲ್ಲೇ ಹಾಲು ಕರೆದು, ತೂಕ ಮಾಡಿ ಬಹುಮಾನ ಘೋಷಿಸಿದರು. ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಸಂತೋಷ್‌ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಿದರು.

ADVERTISEMENT

ಶ್ರೀರಾಮು ಬ್ರಿಗೇಡ್‌ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌, ಪುರಸಭೆ ಸದಸ್ಯರಾದ ಎಸ್‌. ನಂದೀಶ್‌, ಜಿ.ಎಸ್‌. ಶಿವು, ದರ್ಶನ್‌ ಲಿಂಗರಾಜು, ಉಮಾಶಂಕರ್‌ ಇತರ ಮುಖಂಡರು ಇದ್ದರು. ಸ್ಪರ್ಧೆಯನ್ನು ವೀಕ್ಷಿಸಲು ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.